ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷಕ್ಕೆ ಬಲಿಯಾದರೆ ಮತ ಚಲಾಯಿಸಿ:ಭಾರತಿ

ರಾಷ್ಟ್ರೀಯ ಮತದಾರರ ದಿನಾಚರಣೆ; ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಕರೆ
Published 26 ಜನವರಿ 2024, 6:30 IST
Last Updated 26 ಜನವರಿ 2024, 6:30 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚುನಾವಣೆಯಲ್ಲಿ ಮತದಾರರು ಆಸೆ, ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ ಪ್ರಜಾಪ್ರಭುತ್ವಕ್ಕೆ ಬಲ ತುಂಬಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಗುರುವಾರ ಹೇಳಿದರು. 

ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ 14ನೇ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚುನಾವಣೆ ವೇಳೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಆಸೆ, ಆಮಿಷಕ್ಕೆ ಬಲಿಯಾಗಿ ಹಕ್ಕು ಚಲಾಯಿಸಿದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನೀಡುವ ಹಣವನ್ನು ಅಭ್ಯರ್ಥಿಗಳು ಗೆದ್ದ ಬಳಿಕ ವಿವಿಧ ಯೋಜನೆಗಳ ಮೂಲಕ ವಸೂಲಿ ಮಾಡಲು ಆರಂಭಿಸುತ್ತಾರೆ. ಇದರಿಂದ ದೇಶದ ಅಭಿವೃದ್ಧಿ ಅಸಾಧ್ಯ. ಹಾಗಾಗಿ ಮತದಾರರು ಪ್ರಾಮಾಣಿಕವಾಗಿ ಮತ ಹಾಕಬೇಕು’ ಎಂದರು. 

‘ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ವ್ಯಕ್ತಿ ಸರಿ ಇದ್ದರೆ ಮುಂದಿನ ದಿನಗಳಲ್ಲಿ ಪ್ರಜೆಗಳಿಗೆ ಸೂಕ್ತ ಸೌಲಭ್ಯ, ಕಾನೂನು ಸಿಗುತ್ತದೆ’ ಎಂದರು. 

‘ಯುವ ಮತದಾರರು ಹಾಗೂ ಮಕ್ಕಳಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಬೇಕು’ ಎಂದು ನ್ಯಾಯಾಧೀಶರು ಸಲಹೆ ನೀಡಿದರು. 

ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ‘ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಮತದಾನ ಹಕ್ಕು ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. 18 ವರ್ಷ ತುಂಬಿದ ಯುವ ಮತದಾರರು ಈ ಬಾರಿ ಮೊದಲ ಮತ ಚಲಾಯಿಸಲಿದ್ದು, ಇದು ಅವರ ಜೀವನದ ಪ್ರಮುಖ ಕ್ಷಣವಾಗಲಿದೆ. ಮತದಾನದ ಮೂಲಕ ನವಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಬದ್ಧರಾಗಬೇಕು’ ಎಂದರು.

‘ವಿದ್ಯಾರ್ಥಿಗಳು, ಯುವಕರು, ನಾಗರಿಕರು, ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು, ಮತಗಟ್ಟೆ ಅಧಿಕಾರಿಗಳನ್ನೊಳಗೊಂಡಂತೆ ಎಲ್ಲರನ್ನೂ ಒಂದೆಡೆ ಸೇರಿಸಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಹಬ್ಬದ ರೀತಿ ಆಚರಿಸಲಾಗುತ್ತಿದೆ. ಮತದಾನ ಪ್ರಮಾಣ ಕಡಿಮೆಯಾಗಿರುವ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಿ ಮತದಾನದ ಹೆಚ್ಚಳಕ್ಕೆ ಎಲ್ಲರೂ ಸಕ್ರಿಯರಾಗಬೇಕು’ ಎಂದರು. 

ಡಯಟ್‌ನ ಹಿರಿಯ ಉಪನ್ಯಾಸಕ ಯು.ಆರ್. ಲಿಂಗರಾಜೇ ಅರಸ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿದರು.

 ಮತದಾರರ ಜಾಗೃತಿಗಾಗಿ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಿದ್ದಪಡಿಸಿರುವ ಜಿಲ್ಲೆಯ ಜಾನಪದ ಕಲೆ, ಸಂಸ್ಕೃತಿಯೊಂದಿಗೆ ಮತದಾನದ ಮಹತ್ವವನ್ನು ಸಾರುವ ಕಿರುಚಿತ್ರಗಳನ್ನು ಪ್ರಸಾರ ಮಾಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಇತರರು ಇದ್ದರು.  

ಕಾರ್ಯಕ್ರಮದ ಬಳಿಕ ಗಣ್ಯರು ಸಭಾಂಗಣದ ಹೊರಭಾಗದಲ್ಲಿ ‘ನಾನು ನೈತಿಕ ಮತದಾನ ಬೆಂಬಲಿಸುತ್ತೇನೆ’ ಕುರಿತ ಸಹಿ ಸಂಗ್ರಹ ಅಭಿಯಾನ ಫಲಕಕ್ಕೆ ಸಹಿ ಹಾಕಿದರು. 

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹಾಕಲಾಗಿದ್ದ ಸೆಲ್ಫಿ ಪಾಯಿಂಟ್‌ನಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ಯುವ ಮತದಾರರೊಂದಿಗೆ ಸೆಲ್ಫಿ ತೆಗೆದರು. ಜಿ.ಪಂ. ಸಿಇಒ ಆನಂದ ಪ್ರಕಾಶ್‌ ಮೀನಾ ಪಾಲ್ಗೊಂಡಿದ್ದರು
ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹಾಕಲಾಗಿದ್ದ ಸೆಲ್ಫಿ ಪಾಯಿಂಟ್‌ನಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ಯುವ ಮತದಾರರೊಂದಿಗೆ ಸೆಲ್ಫಿ ತೆಗೆದರು. ಜಿ.ಪಂ. ಸಿಇಒ ಆನಂದ ಪ್ರಕಾಶ್‌ ಮೀನಾ ಪಾಲ್ಗೊಂಡಿದ್ದರು

- ಬಹುಮಾನ ವಿತರಣೆ

ಸನ್ಮಾನ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಭಿತ್ತಿಚಿತ್ರ ರಚನೆ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 18 ವರ್ಷ ತುಂಬಿದ ನೂತನ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಅಲ್ಲದೆ ಶತಾಯುಷಿ ಮತದಾರರಾದ ಜಿಲ್ಲೆಯ ಮೂಡ್ನಾಕೂಡು ಗ್ರಾಮದ ದೇವಪ್ಪ ಹಾಗೂ ಉಡಿಗಾಲ ಗ್ರಾಮದ ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT