ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಕೊಲೆ: ವೀರಶೈವ-ಲಿಂಗಾಯತರ ಪ್ರತಿಭಟನೆ

ಸರ್ಕಾರದ ವಿರುದ್ಧ ಆಕ್ರೋಶ, ತ್ವರಿತ ತನಿಖೆಗೆ ಒತ್ತಾಯ, ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ
Published 25 ಏಪ್ರಿಲ್ 2024, 4:38 IST
Last Updated 25 ಏಪ್ರಿಲ್ 2024, 4:38 IST
ಅಕ್ಷರ ಗಾತ್ರ

ಚಾಮರಾಜನಗರ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ಆಶ್ರಯದಲ್ಲಿ ವಿವಿಧ ವೀರಶೈವ–ಲಿಂಗಾಯತ ಸಂಘಟನೆಗಳು, ಸಮಾಜದ ಮುಖಂಡರು ನಗರದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು. 

ಜಿಲ್ಲೆಯ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಮುದಾಯದವರು ಸರ್ಕಾರ, ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜೇಶ್ವರ ದೇವಸ್ಥಾನ ಮುಂಭಾಗ ಸೇರಿದ ಪ್ರತಿಭಟನಕಾರರು ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಅಲ್ಲಿ ವಾಹನಗಳ ಸಂಚಾರ ತಡೆದು ಘಟನೆ ವಿರುದ್ಧ ಆಕ್ರೋಶ ಹೊರಹಾಕಿದರು. 

‘ನೇಹಾ ಹಿರೇಮಠಳನ್ನು ನಿರ್ದಾಕ್ಷಿಣ್ಯವಾಗಿ ಚೂರಿಯಿಂದ ಇರಿದು ಕೊಲೆ ಮಾಡಿರುವುದು ಖಂಡನೀಯ. ಇದು ಇಡೀ ಮನುಷ್ಯ ಕುಲಕ್ಕೆ ಮಾಡಿದ ಅಪಮಾನ. ಇದರಿಂದ ನಾಗರಿಕ ಸಮಾಜವೇ ತಲ್ಲಣಗೊಂಡಿದೆ. ಅಲ್ಲದೇ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ತನಿಖೆಯನ್ನು ತೀವ್ರಗೊಳಿಸಿ, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕು’ ಎಂದು ಆಗ್ರಹಿಸಿದರು. 

‘ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುವ ಕಾನೂನು ಜಾರಿಗೆ ತರಬೇಕು. ಹತ್ಯೆ ಮಾಡಿದವನನ್ನು ಗಲ್ಲಿಗೇರಿಸಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಹರವೆ ಮಠದ ಸರ್ಪಭೂಷಣಸ್ವಾಮೀಜಿ, ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಹತ್ಯೆ ಖಂಡನೀಯ. ಸರ್ಕಾರ ತನಿಖೆಯನ್ನು ಸೂಕ್ತವಾಗಿ ನಡೆಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳು ಭಯ ಮುಕ್ತವಾಗಿ ವಿದ್ಯಾಭ್ಯಾಸ ಮಾಡುವ ವಾತಾವರಣ ನಿರ್ಮಿಸಬೇಕು’ ಎಂದು ಆಗ್ರಹಿಸಿದರು. 

ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ತಾಲ್ಲೂಕು ಅಧ್ಯಕ್ಷ ನಟೇಶ್, ಮುಖಂಡರಾದ ವೃಷಬೇಂದ್ರಪ್ಪ, ನಿಜಗುಣರಾಜು, ಹಂಗಳ ಪ್ರಣಯ್, ಕುಮಾರ್, ಮಹದೇವಸ್ವಾಮಿ, ಬಸವರಾಜು, ಇಂದ್ರ, ರತ್ನಮ್ಮ, ಪ್ರಭುಸ್ವಾಮಿ ಸೇರಿದಂತೆ ನೂರಾರು ಮುಖಂಡರು ಪಾಲ್ಗೊಂಡಿದ್ದರು. 

ಪ್ರತಿಭಟನೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿದರು. ಚಾಮರಾಜನಗರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಭಾಗವಹಿಸಿದ್ದರು
ಪ್ರತಿಭಟನೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿದರು. ಚಾಮರಾಜನಗರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಭಾಗವಹಿಸಿದ್ದರು

ಪೊಲೀಸರೊಂದಿಗೆ ಮಾತಿನ ಚಕಮಕಿ

ಪ‍್ರತಿಭಟನಕಾರರು ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಬಯಸಿದ್ದರು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತ್ತು ಜಿಲ್ಲಾಡಳಿತ ಭವನದ ಆವರಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಭುವನೇಶ್ವರಿ ವೃತ್ತದಲ್ಲೇ ಪ್ರತಿಭಟನಕಾರರನ್ನು ತಡೆಯಲು ಮುಂದಾದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ವಾಹನಗಳ ಸಂಚಾರವೂ ಅಸ್ತವ್ಯಸ್ತಗೊಂಡಿತು.   ರಸ್ತೆಗೆ ಅಡ್ಡಲಾಗಿ ಹಾಕಿದ್ದ ಪೊಲೀಸ್ ವಾಹನವನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಸಾಗಿದರು.  ಜಿಲ್ಲಾಡಳಿತ ಭವನದ ಮುಖ್ಯಗೇಟ್ ಬಳಿಯವರೆಗೂ ಪ್ರತಿಭಟನಕಾರರು ಸಾಗಿದರು. ಅಲ್ಲಿ ಪೊಲೀಸರು ಎಲ್ಲರನ್ನೂ ತಡೆದರು. ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಕೊನೆಗೊಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT