ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಂಬಂ ಘಾಟಿ ರಾತ್ರಿ ಬಂದ್‌: ಪರ, ವಿರೋಧ

ರಾತ್ರಿ ಹೊತ್ತಿನಲ್ಲಿ ಸತ್ಯಮಂಗಲ, ಕೊಯಮತ್ತೂರಿಗೆ ಹೋಗಲು ಸುತ್ತಿ ಬಳಸುವುದು ಅನಿವಾರ್ಯ
Last Updated 9 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಬೆಂಗಳೂರು–ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ನಡುವಿನ ದಿಂಬಂ ಘಾಟಿಯಲ್ಲಿ ಗುರುವಾರ ರಾತ್ರಿಯಿಂದ ವಾಹನ ಸಂಚಾರ ನಿರ್ಬಂಧಿಸುತ್ತಿರುವುದಕ್ಕೆ ಜಿಲ್ಲೆಯಲ್ಲೂ ಪರ–ವಿರೋಧ ವ್ಯಕ್ತವಾಗಿದೆ.

ಪರಿಸರ ವಾದಿಗಳು, ವನ್ಯಪ್ರಾಣಿ ಪ್ರೇಮಿಗಳು ಸಂಚಾರ ನಿಷೇಧವನ್ನು ಸ್ವಾಗತಿಸಿದರೆ, ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಸಾಗಿಸುವ ವಾಹನಗಳ ಮಾಲೀಕರು, ಚಾಲಕರು ವಿರೋಧಿಸಿದ್ದಾರೆ. ನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿಯಲ್ಲೂ ರೈತ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತಿ ಭಾರದ ವಾಹನಗಳ ಸಂಚಾರಕ್ಕೆ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆವರೆಗೆ, ವಾಣಿಜ್ಯ ವಾಹನಗಳು ಹಾಗೂ ಲಘು ವಾಹನಗಳಿಗೆ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ನಿರ್ಬಂಧಿಸಲಾಗಿದೆ.

ಬೆಂಗಳೂರು–ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯು ವಾಣಿಜ್ಯ ಮಾರ್ಗವಾಗಿದ್ದು ಸರಕು ತುಂಬಿದ ಭಾರಿ ಲಾರಿಗಳು, ಇತರೆ ವಾಣಿಜ್ಯ ಉದ್ದೇಶದ ವಾಹನಗಳು, ಇತರೆ ಲಘು ವಾಹನಗಳು ಪ್ರತಿ ದಿನ ಅಪಾರ ಸಂಖ್ಯೆಯಲ್ಲಿ ಹಗಲು–ರಾತ್ರಿ ಎನ್ನದೇ ಈ ಹೆದ್ದಾರಿಯಲ್ಲಿ ಸಂಚರಿಸುತ್ತವೆ.

ಪರ್ಯಾಯ ರಸ್ತೆ: ಹಳೆ ಮೈಸೂರು ಭಾಗದಿಂದ ಸತ್ಯಮಂಗಲ, ಕೊಯಮತ್ತೂರು ತಲುಪಲು ಇರುವ ನೇರ ಮಾರ್ಗ ಇದೊಂದೆ. ರಾತ್ರಿ ಘಾಟಿ ಬಂದ್‌ ಆಗುತ್ತಿರುವುದರಿಂದ ಸತ್ಯಮಂಗಲ ಇಲ್ಲವೇ ಕೊಯಮತ್ತೂರು ತಲುಪಲು ಜಿಲ್ಲೆಯ ಹಾಗೂ ಮೈಸೂರು ಭಾಗದವರು ಪರ್ಯಾಯ ಮಾರ್ಗವನ್ನು ಅವಲಂಬಿಸಬೇಕಿದೆ.

ಹನೂರು ತಾಲ್ಲೂಕಿನ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮೂರು ದಾರಿಗಳಿವೆ. ಈ ಪೈಕಿ ಬೈಲೂರು, ಅರ್ಧನಾರಿಪುರದ ಮೂಲಕ ಸಾಗುವ ರಸ್ತೆ ದಿಂಬಂ ಘಾಟಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ, ಈ ರಸ್ತೆಯ ಬಳಕೆ ಸಾಧ್ಯವಿಲ್ಲ.

ಇನ್ನೆರಡು ರಸ್ತೆಗಳ ಪೈಕಿ, ಹನೂರು ತಾಲ್ಲೂಕಿನ ನಾಲ್‌ರೋಡ್‌–ಗರಿಕೆಕಂಡಿ–ಬರಗೂರು–ಹಂದಿಯೂರು ಮಾರ್ಗದ ಮೂಲಕ ಸತ್ಯಮಂಗಲ ತಲುಪಬಹುದು.

ಮಹದೇಶ್ವರ ಬೆಟ್ಟ–ಪಾಲಾರ್‌ ಮೂಲಕ ಸಾಗುವ ಇನ್ನೊಂದು ರಸ್ತೆ ತಮಿಳುನಾಡಿನ ಮೆಟ್ಟೂರಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಂದ ಸತ್ಯಮಂಗಲಕ್ಕೆ ಬಂದು ಕೊಯಮತ್ತೂರಿಗೆ ತಲುಪಬೇಕು.

‘ಈಗಾಗಲೇ ಬಂಡೀಪುರ‌ ಅರಣ್ಯದ ಮೂಲಕ ಕೇರಳಕ್ಕೆ ಹೋಗುವ ರಸ್ತೆ ಬಂದ್‌ ಆಗಿದೆ. ಹಾಗಾಗಿ, ನಾವು ತರಕಾರಿಗಳನ್ನು ಕೇರಳಕ್ಕೆ ತೆಗೆದುಕೊಂಡು ಹೋಗಲು ಸತ್ಯಮಂಗಲ ರಸ್ತೆ ಬಳಸುತ್ತಿದ್ದೆವು. ಈಗ ರಾತ್ರಿ ಹೊತ್ತಿನಲ್ಲಿ ಬಂದ್‌ ಮಾಡಿದರೆ ನಮಗೆ ತೊಂದರೆಯಾಗುತ್ತದೆ’ ಎಂದು ತರಕಾರಿ ಸಾಗಣೆ ಮಾಡುವ ಟೆಂಪೊ ಮಾಲೀಕ, ಚಾಮರಾಜನಗರದ ಕಿಜರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಕಾರಿಯನ್ನು ವಾಹನದಲ್ಲೇ ಇಡಲು ಆಗುವುದಿಲ್ಲ. ಬೇಗ ಹಾಳಾಗುತ್ತದೆ. ರಾತ್ರಿ ಹೊತ್ತು ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಸಾಗಣೆ ಸುಲಭ. ರಾತ್ರಿ ಘಾಟಿ ಬಂದ್‌ ಮಾಡಿದರೆ ಇನ್ನಷ್ಟು ಸುತ್ತಿ ಬಳಸಿಕೊಂಡು ಹೋಗಬೇಕಾಗುತ್ತದೆ’ ಎಂದು ಹೇಳಿದರು.

ವಾಹನ ದಟ್ಟಣೆ ಜಾಸ್ತಿ: ರಾತ್ರಿ ಘಾಟಿ ಬಂದ್‌ ಮಾಡಿ ಬೆಳಿಗ್ಗೆ ಏಕಾಏಕಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದರಿಂದ ಘಾಟಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ, ಸಂಚಾರಕ್ಕೆ ತೊಡಕಾಗಹುದು. ಇದರಿಂದ ಸರಕುಗಳ ಸಾಗಣೆ ಮತ್ತಷ್ಟು ವಿಳಂಬವಾಗಲಿದೆ ಎಂಬುದು ಉದ್ಯಮಿಗಳು, ವರ್ತಕರು, ವಾಹನಗಳ ಚಾಲಕರು, ಮಾಲೀಕರ ಅಳಲು.

ಬಣ್ಣಾರಿ, ಪುಣಜನೂರಿನಲ್ಲಿ ಪ್ರತಿಭಟನೆ

ಈ ಮಧ್ಯೆ, ವಾಹನ ಸಂಚಾರ ನಿಷೇಧ ಖಂಡಿಸಿ ಬಣ್ಣಾರಿ, ಭವಾನಿ, ತಾಳವಾಡಿ ಹಾಗೂ ಸುತ್ತಮುತ್ತಲಿನ ಭಾಗದ ರೈತರು ಬಣ್ಣಾರಿಯಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಜಿಲ್ಲೆಯ ರೈತ ಸಂಘದ ಪದಾಧಿಕಾರಿಗಳು ಕೂಡ ಬೆಳಿಗ್ಗೆ ‌11 ಗಂಟೆಗೆ ಪುಣಜನೂರು ಚೆಕ್‌ಪೋಸ್ಟ್‌ಬಳಿ ಗೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

‘ತಾಳವಾಡಿಯಿಂದ ಸತ್ಯಮಂಗಲಕ್ಕೆ ಹೋಗಲು ನಮಗೆ ಇದೊಂದೇ ದಾರಿ ಇರುವುದು. ರಾತ್ರಿ ಸಂಚಾರ ನಿರ್ಬಂಧ ಮಾಡಿದರೆ, ಬೆಳಿಗ್ಗೆ ಘಾಟಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ತೊಂದರೆಯಾಗಲಿದೆ. ತುರ್ತು ಸಂದರ್ಭದಲ್ಲಿ ಓಡಾಟಕ್ಕೆ ಕಷ್ಟ ಪಡಬೇಕಾದ ಪರಿಸ್ಥಿತಿ ಬರಲಿದೆ. 2019ರ ಜನವರಿಯಲ್ಲಿ ಈರೋಡ್‌ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾಗಲೇ ವಿರೋಧ ಮಾಡಿದ್ದೆವು’ ಎಂದು ತಾಳವಾಡಿಯ ಲಕ್ಷ್ಮಿಕಾಂತ್‌ ತಿಳಿಸಿದರು.

‘ರೈತ ಸಂಘದವರು ಗುರುವಾರ ಬಣ್ಣಾರಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಬಣ್ಣಾರಿ, ಸತ್ಯಮಂಗಲ, ಭವಾನಿ, ತಾಳವಾಡಿ ಸೇರಿದಂತೆ ಹಲವು ಭಾಗಗಳ ರೈತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಮದ್ರಾಸ್‌ ಹೈಕೋರ್ಟ್‌ ಒಳ್ಳೆಯ ತೀರ್ಪು ನೀಡಿದೆ. ಪ್ರಾಣಿಗಳು ರಾತ್ರಿ ನೆಮ್ಮದಿಯಿಂದ ಓಡಾಡಬಹುದು. ವನ್ಯಜೀವಿಗಳ ದೃಷ್ಟಿಯಿಂದ ಅತ್ಯುತ್ತಮ ನಿರ್ಧಾರ
- ಸಿ.ಎಂ.ವೆಂಕಟೇಶ್‌, ಪರಿಸರ ಪ್ರೇಮಿ

ವಾಹನಗಳ ಸಂಚಾರ ನಿರ್ಬಂಧಿಸಿರುವುದಕ್ಕೆ ನಮ್ಮ ವಿರೋಧವಿಲ್ಲ. ತರಕಾರಿ ಸೇರಿದಂತೆ ರೈತರ ಉತ್ಪನ್ನಗಳ ಸಾಗಾಟಕ್ಕೆ ಅವಕಾಶ ನೀಡಬೇಕು
- ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT