ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಂಬಂ ಘಾಟಿಯಲ್ಲಿ ಫೆ.10ರಿಂದ ರಾತ್ರಿ ಸಂಚಾರ ನಿಷೇಧ

ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ವ್ಯಾಪ್ತಿಯಲ್ಲಿ ಹಾದುಹೋಗುವ ಎರಡು ರಸ್ತೆಗಳು
Last Updated 8 ಫೆಬ್ರುವರಿ 2022, 16:38 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ಬೆಂಗಳೂರು ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ 948ರ ಹಾಸನೂರು–ಬಣ್ಣಾರಿ ಚೆಕ್‌ಪೋಸ್ಟ್‌ (ದಿಂಬಂ ಘಾಟಿ) ನಡುವೆ ಗುರುವಾರದಿಂದ (ಫೆ.10) ರಾತ್ರಿ ವಾಹನಗಳ ಸಂಚಾರ ನಿಷೇಧಿಸುವಂತೆ ಮದ್ರಾಸ್‌ ಹೈಕೋರ್ಟ್‌ ಅಲ್ಲಿನ ಅರಣ್ಯ ಇಲಾಖೆಗೆ ಮಂಗಳವಾರ ನಿರ್ದೇಶನ ನೀಡಿದೆ.

ದಿಂಬಂ ಘಾಟಿಗೆ ಸಂಪರ್ಕ ಕಲ್ಪಿಸುವ ಎರಡು ಮಾರ್ಗಗಳು ಜಿಲ್ಲೆಯ ಮೂಲಕ ಹಾದು ಹೋಗುತ್ತವೆ. ಚಾಮರಾಜನಗರ ತಾಲ್ಲೂಕಿನಲ್ಲಿ ಹಾದು ಹೋಗುವ 209 ರಾಷ್ಟ್ರೀಯ ಹೆದ್ದಾರಿ ಪುಣಜನೂರು ಮೂಲಕ ತಮಿಳುನಾಡಿನ ಗಡಿಯನ್ನು ಸಂಪರ್ಕಿಸುತ್ತದೆ. ಹನೂರು ತಾಲ್ಲೂಕಿನ ಬೈಲೂರಿನ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ ಕೂಡ ದಿಂಬಂ ಘಾಟಿಯನ್ನು ಸಂಪರ್ಕಿಸುತ್ತದೆ.

ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯದ ಬಳಿಯಿಂದ ಪುಣಜನೂರು ವರೆಗಿನ 15 ಕಿ.ಮೀ ಉದ್ದದ ರಸ್ತೆಯು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಹನೂರು ತಾಲ್ಲೂಕಿನ ಬೈಲೂರಿನಿಂದ ತಮಿಳುನಾಡಿನ ಗೇರುಮಾಳ್ಯಂವರೆಗಿನ 15 ಕಿ.ಮೀ ಉದ್ದದ ರಸ್ತೆಯೂ ಬಿಆರ್‌ಟಿಗೆ ಸೇರುತ್ತದೆ. ತಮಿಳುನಾಡಿನ ಅರಣ್ಯ ಇಲಾಖೆಯು ಅಲ್ಲಿ ವಾಹನಗಳ ರಾತ್ರಿ ಸಂಚಾರ ನಿಷೇಧಿಸುತ್ತಿರುವುದರಿಂದ ಜಿಲ್ಲೆಯ ಬಿಆರ್‌ಟಿ ವ್ಯಾಪ್ತಿಯಲ್ಲಿ ಬರುವ ರಸ್ತೆಯಲ್ಲೂ ರಾತ್ರಿ ಸಂಚಾರ ನಿಷೇಧಿಸುವ ಸಾಧ್ಯತೆ ಇದೆ.

ತಮಿಳುನಾಡು ಚೆಕ್‌ಪೋಸ್ಟ್‌ನಲ್ಲಿ ರಾತ್ರಿ ವಾಹನಗಳನ್ನು ತಡೆಯುವುದರಿಂದ ಅವುಗಳು ರಾಜ್ಯದ ಗಡಿ ಭಾಗದಲ್ಲಿ ನಿಲ್ಲಬೇಕಾಗುತ್ತದೆ. ಇದರಿಂದಾಗಿ ಪ್ರಾಣಿಗಳ ಓಡಾಟಕ್ಕೆ ತೊಂದರೆಯಾಗಲಿದೆ. ಹಾಗಾಗಿ, ಮದ್ರಾಸ್‌ ಹೈಕೋರ್ಟ್‌ ನಿರ್ದೇಶನದ ಆಧಾರದಲ್ಲಿ ರಾಜ್ಯದ ಅರಣ್ಯ ಇಲಾಖೆ ಕೂಡ ಬಿಆರ್‌ಟಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಹೆಚ್ಚಳವಾಗಿದೆ. ಈ ಸಂಬಂಧ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸುವಂತೆ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಅಧಿಕಾರಿಗಳು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡುವುದು ನಿಚ್ಚಳವಾಗಿದೆ ಎಂದು ಮೂಲಗಳು ’ಪ್ರಜಾವಾಣಿ‘ಗೆ ತಿಳಿಸಿವೆ.

ಈಗಾಗಲೇ, ಬಿಳಿಗಿರಿರಂಗನಬೆಟ್ಟಕ್ಕೆ ಅರಣ್ಯದ ಮೂಲಕ ಹಾದು ಹೋಗುವ ರಸ್ತೆಯಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಈ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ಅವರು, ’ಮದ್ರಾಸ್‌ ಹೈಕೋರ್ಟ್‌ ನಿರ್ದೇಶನದ ಪ್ರತಿ ಇನ್ನೂ ಬಂದಿಲ್ಲ. ಅವರು ರಾತ್ರಿ ಸಂಚಾರ ನಿಷೇಧ ಮಾಡಿದರೆ, ನಮ್ಮ ಗಡಿಯಲ್ಲಿ ವಾಹನಗಳು ನಿಲ್ಲುವುದು ನಿಜ. ಇದರಿಂದ ಪ್ರಾಣಿಗಳಿಗೆ ತೊಂದರೆಯಾಗಲಿದೆ. ನಮ್ಮ ಭಾಗದಲ್ಲಿ ಸಂಚಾರ ನಿಷೇಧ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು‘ ಎಂದು ಹೇಳಿದರು.

ಒಂದು ವೇಳೆ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದರೆ, ಅರಣ್ಯ ಪ್ರದೇಶ ಸಿಗುವುದಕ್ಕೂ ಮೊದಲೇ ಅರಣ್ಯ ಇಲಾಖೆಯು ನಿಗದಿತ ಸಮಯದ ಬಳಿಕ ವಾಹನಗಳನ್ನು ತಡೆಯಲಿದೆ.

ಮದ್ರಾಸ್‌ ಹೈಕೋರ್ಟ್‌ ಹೇಳಿದ್ದೇನು?

ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಹಾಸನೂರು ಚೆಕ್‌ಪೋಸ್ಟ್‌ನಿಂದ ಬಣ್ಣಾರಿ ಚೆಕ್‌ಪೋಸ್ಟ್‌ ನಡುವಿನ ಹೆದ್ದಾರಿಯಲ್ಲಿ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಅತಿ ಭಾರದ ವಾಹನಗಳ ಸಂಚಾರ, ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಲಘು ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಈರೋಡ್‌ ಜಿಲ್ಲಾಧಿಕಾರಿ ಅವರು 2019ರಲ್ಲಿ ಹೊರಡಿಸಿರುವ ಆದೇಶವನ್ನು ಗುರುವಾರದಿಂದ (ಫೆ.10) ಜಾರಿಗೆ ತರುವಂತೆ ಮದ್ರಾಸ್‌ ಹೈಕೋರ್ಟ್‌ ತಮಿಳುನಾಡಿನ ಅರಣ್ಯ ಇಲಾಖೆಗೆ ಮಂಗಳವಾರ ನಿರ್ದೇಶನ ನೀಡಿ, ಮುಂದಿನ ವಿಚಾರಣೆಯನ್ನು 15ಕ್ಕೆ ಮುಂದೂಡಿದೆ.

ಜಿಲ್ಲಾಧಿಕಾರಿ ಅವರ ಆದೇಶವನ್ನು ಪಾಲಿಸದೇ ಇದ್ದುದರಿಂದ 155 ಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ ಎಂದು ಎಸ್‌.ಪಿ.ಚೊಕ್ಕಲಿಂಗಂ ಎಂಬುವವರು ಮದ್ರಾಸ್‌ ಹೈಕೋರ್ಟ್‌ನ ಮೆಟ್ಟಿಲೇರಿದ್ದರು.

ಹಿಂದೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾಗ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಈಗಲೂ ಅಲ್ಲಿ ವಿರೋಧ ವ್ಯಕ್ತವಾಗಿದೆ. 10ರಂದು ಪ್ರತಿಭಟನೆ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ.

ಜಿಲ್ಲೆಯಲ್ಲೂ ರೈತ ಸಂಘವು ಮದ್ರಾಸ್‌ ಹೈಕೋರ್ಟ್‌ನ ನಿರ್ದೇಶನವನ್ನು ವಿರೋಧಿಸಿದ್ದು, 10ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಹೈಕೋರ್ಟ್‌ನ ಸೂಚನೆಯನ್ನು ಜಿಲ್ಲೆಯ ಪರಿಸರವಾದಿಗಳು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT