ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧಕರ ಕೊರತೆ: ದ್ವಿತೀಯ ಪಿಯು ಫಲಿತಾಂಶ ಕುಸಿಯುವ ಭೀತಿ

ಬೋಧನೆಗೆ ತಾತ್ಕಾಲಿಕ ವ್ಯವಸ್ಥೆಯೂ ಇಲ್ಲ, ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ
Last Updated 19 ಮಾರ್ಚ್ 2021, 4:06 IST
ಅಕ್ಷರ ಗಾತ್ರ

ಚಾಮರಾಜನಗರ: ಸರ್ಕಾರಿ ಪದವಿ ಕಾಲೇಜುಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೋಧಕರ ಕೊರತೆ ಇರುವಲ್ಲಿ ತಾತ್ಕಾಲಿಕವಾಗಿ ಅತಿಥಿ ಬೋಧಕರನ್ನು‌ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿರುವ ಸರ್ಕಾರ, ಪದವಿ ಪೂರ್ವ ಕಾಲೇಜುಗಳನ್ನು ಮರೆತಿದೆ.

ಇದರಿಂದಾಗಿ ಉಪನ್ಯಾಸಕರ ಹುದ್ದೆ ಖಾಲಿ ಇರುವ ಕಡೆಗಳಲ್ಲಿ ಪಾಠಕ್ಕೆ ತೊಂದರೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಕೋವಿಡ್ ಕಾರಣದಿಂದ ವಿಳಂಬವಾಗಿ ಆರಂಭವಾದ ಶೈಕ್ಷಣಿಕ ವರ್ಷ ಇನ್ನು ಎರಡು ತಿಂಗಳಲ್ಲಿ ಮುಕ್ತಾಯವಾಗಲಿದೆ. ಮೇ 24ರಿಂದ ಈ ಸಾಲಿನ ದ್ವಿತೀಯ ಪಿಯು ವಾರ್ಷಿಕ ಆರಂಭವಾಗಲಿದೆ. ಈ ವೇಳೆಗೆ ಪಠ್ಯಗಳು ಪೂರ್ಣಗೊಳ್ಳದಿದ್ದರೆ, ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದು ಕಷ್ಟವಾಗಲಿದೆ. ಇದು ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂಬ ಭೀತಿ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜುಗಳ ಪ್ರಾಂಶುಪಾಲರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ 61 ಪದವಿ ಪೂರ್ವ ಕಾಲೇಜುಗಳಿವೆ. ಈ ಪೈಕಿ 24 ಸರ್ಕಾರಿ ಕಾಲೇಜುಗಳು. ಜಿಲ್ಲೆಗೆ 269 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿವೆ. ಸದ್ಯ 207 ಮಂದಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. 62 ಹುದ್ದೆಗಳು ಖಾಲಿ ಇವೆ.

ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳನ್ನು ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನಿರ್ಮಿಸಿಕೊಂಡು ಬೋಧನೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿತ್ತು.ಈ ಬಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಇದುವರೆಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಲು ಅನುಮತಿ ನೀಡದಿರುವುದರಿಂದ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಖಾಲಿ ಇರುವ 62 ಹುದ್ದೆಗಳ ಪೈಕಿ 23 ಹುದ್ದೆಗಳಿಗೆ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿದೆ. ಇನ್ನೂ 39 ಹುದ್ದೆಗಳು ಖಾಲಿ ಇವೆ. ಈ ಪೈಕಿ ಒಂಬತ್ತು ಹುದ್ದೆಗಳನ್ನು ಬಿಟ್ಟು 30 ಮಂದಿಯನ್ನು ನೇಮಕ ಮಾಡಲೇಬೇಕು. ಇಲ್ಲದಿದ್ದರೆ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದವರು ಬರುವುದಕ್ಕೆ ಸಿದ್ಧರಿದ್ದಾರೆ. ಆದರೆ, ಅವರು ಬಂದು ಕೆಲಸ ಮಾಡಿದ ನಂತರ ಗೌರವ ಧನ ಪಾವತಿಸಬೇಕಾಗುತ್ತದೆ. ಸರ್ಕಾರ ಮತ್ತೆ ಹಣ ಬಿಡುಗಡೆ ಮಾಡದೇ ಇದ್ದರೆ ಏನು ಮಾಡುವುದು ಎಂಬ ಗೊಂದಲ ಕಾಲೇಜುಗಳ ಪ್ರಾಂಶುಪಾಲರನ್ನು ಕಾಡುತ್ತಿದೆ. ಇಲಾಖೆಯ ಉನ್ನತ ಅಧಿಕಾರಿಗಳು ಇನ್ನೂ ಈ ಬಗ್ಗೆ ನಿರ್ಧಾರ ಕೈಗೊಳ್ಳದೇ ಇರುವುದರಿಂದ ಅವರು ಅತಿಥಿ ಉಪನ್ಯಾಸಕರ ನೇಮಕಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ವಾಣಿಜ್ಯ ವಿಭಾಗದವರಿಗೆ ಕಷ್ಟ:ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಹುದ್ದೆಗಳು ಹೆಚ್ಚು ಖಾಲಿ ಇವೆ. ಜಿಲ್ಲೆಯ ವಿವಿಧ ಪಿಯು ಕಾಲೇಜುಗಳಲ್ಲಿ ಒಂಬತ್ತು ಉಪನ್ಯಾಸಕರ ಅಗತ್ಯವಿದೆ.

ಉಪನ್ಯಾಸಕರು ಇಲ್ಲದ ಕಾಲೇಜುಗಳಿಗೆ ಸಮೀಪದ ಕಾಲೇಜುಗಳ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿದೆ. ಅವರು ತಲಾ ಮೂರು ದಿನಗಳಂತೆ ಎರಡು ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದಾರೆ.

ವಾಣಿಜ್ಯಶಾಸ್ತ್ರದಲ್ಲಿ ಕಾಯಂ ಉಪನ್ಯಾಸಕರಿಗೆ ಕೆಲಸದ ಒತ್ತಡ ಜಾಸ್ತಿ ಇದ್ದು, ನಿಯೋಜನೆ ಮಾಡಿದ ಕಾಲೇಜಿಗೆ ಹೋಗುವುದಕ್ಕೆ ಕಷ್ಟವಾಗುತ್ತಿದೆ. ಇದರಿಂದಾಗಿ ಎರಡೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಉಳಿದ ವಿಷಯಗಳಿಗೆ ಹೋಲಿಸಿದರೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಕಷ್ಟವಾಗುತ್ತಿದೆ.

ಫಲಿತಾಂಶದ ಮೇಲೆ ಪರಿಣಾಮ: ಕಳೆದ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 70 ರಷ್ಟು ಫಲಿತಾಂಶ‌ ದಾಖಲಿಸಿದ್ದ ಜಿಲ್ಲೆ ರಾಜ್ಯಕ್ಕೆ‌12ನೇ ಸ್ಥಾನ ಗಳಿಸಿತ್ತು. ಈ ಬಾರಿ ಉಪನ್ಯಾಸಕರ ಕೊರತೆಯ ಕಾರಣಕ್ಕೆ ಪಾಠ ಪೂರ್ಣವಾಗದಿದ್ದರೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಕಷ್ಟವಾಗಲಿದೆ. ಇದು ಫಲಿತಾಂಶದ ಮೇಲೆ ಪ್ರಭಾವ‌ಬೀರಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಇಲಾಖೆಗೆ ಮಾಹಿತಿ ರವಾನೆ: ಡಿಡಿಪಿಯು
ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ ಅವರು, 'ಉಪನ್ಯಾಸಕರ ಕೊರತೆಯಿಂದಾಗಿ ಪಾಠ ಮಾಡುವುದಕ್ಕೆ ತೊಂದರೆಯಾಗಿರುವುದು ನಿಜ. ತಾತ್ಕಾಲಿಕವಾಗಿ ಬೇರೆ ಕಾಲೇಜುಗಳ ಉಪನ್ಯಾಸಕರನ್ನು‌ ನಿಯೋಜನೆ ಮಾಡಿದ್ದೇವೆ. ಎಷ್ಟು ಉಪನ್ಯಾಸಕರ ಅಗತ್ಯವಿದೆ ಎಂದು‌ ಇಲಾಖೆ ಮಾಹಿತಿ ಕೇಳಿದೆ. ನಾವು ಅದನ್ನು‌ ಕಳುಹಿಸಿದ್ದೇವೆ. ಅತಿಥಿ ಉಪನ್ಯಾಸಕರ ನೇಮಕಾತಿಗೆ ಇಲಾಖೆ ಇನ್ನೂ ಆದೇಶ ನೀಡಿಲ್ಲ. ಅನುಮತಿ‌ ನೀಡಿದ ತಕ್ಷಣ ನೇಮಕಾತಿ‌‌ ಮಾಡಲಾಗುವುದು' ಎಂದು ತಿಳಿಸಿದರು.

ಯಾವ ಹುದ್ದೆ, ಎಷ್ಟು ಖಾಲಿ?
ಕನ್ನಡ-1, ಇಂಗ್ಲಿಷ್‌-2, ಇತಿಹಾಸ- 1, ಅರ್ಥಶಾಸ್ತ್ರ- 5, ವಾಣಿಜ್ಯ ಶಾಸ್ತ್ರ- 9, ರಾಜ್ಯ ಶಾಸ್ತ್ರ- 2, ಭೂಗೋಳ ವಿಜ್ಞಾನ-2, ಸಮಾಜಶಾಸ್ತ್ರ- 4, ಭೌತ ವಿಜ್ಞಾನ- 1, ರಸಾಯನ ವಿಜ್ಞಾನ- 1 ಮತ್ತು ಜೀವವಿಜ್ಞಾನ -2 ಹುದ್ದೆಗಳು ಖಾಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT