ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪಕ್ಷೇತರರಿಗೆ ಮಣೆ ಹಾಕದ ಮತದಾರರು

ಪ್ರತಿ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿಯುವ ಸ್ವತಂತ್ರ ಅಭ್ಯರ್ಥಿಗಳು
Published 7 ಮೇ 2024, 6:21 IST
Last Updated 7 ಮೇ 2024, 6:21 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಆದರೆ, ಈವರೆಗೆ ಮತದಾರ ಯಾರಿಗೂ ಒಲಿದಿಲ್ಲ. ಈ ಬಾರಿ ಏನಾಗುವುದೋ ಎನ್ನುವುದನ್ನು ಅರಿಯಲು ಜೂನ್‌ 4ರವರೆಗೆ ಕಾಯಲೇ ಬೇಕಾಗಿದೆ. 

ಆದರೆ, ಕ್ಷೇತ್ರದ ಇತಿಹಾಸ ನೋಡಿದರೆ, ಕ್ಷೇತ್ರದ ಮತದಾರರು ಪಕ್ಷಗಳ ಮೇಲೆಯೇ ಒಲವು ಹೊಂದಿರುವುದು ಇಲ್ಲಿನ ಚುನಾವಣಾ ಫಲಿತಾಂಶಗಳಿಂದ ಗೊತ್ತಾಗುತ್ತದೆ.

1962ರಿಂದ ಇಲ್ಲಿಯವರೆಗೆ 16 ಲೋಕಸಭಾ ಚುನಾವಣೆಗಳು ನಡೆದಿವೆ. ಈ ಬಾರಿಯ ಚುನಾವಣೆಯನ್ನು ಬಿಟ್ಟು ಇದುವರೆಗೆ ಕಾಂಗ್ರೆಸ್‌, ಜನತಾದಳ, ಜೆಡಿಯು, ಜೆಡಿಎಸ್‌, ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.

‘ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು, ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು... ಹೀಗೆ ಬೇರೆ ಬೇರೆ ಉದ್ದೇಶಗಳನ್ನು ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿಗಳಿಗೆ ಕ್ಷೇತ್ರದ ಜನರು ಮಣೆ ಹಾಕಿದ ಉದಾಹರಣೆ ಇಲ್ಲ.

2009ರ ಚುನಾವಣೆಯಲ್ಲಿ ಆರು ಮಂದಿ ಸ್ವ‌ತಂತ್ರವಾಗಿ ಸ್ಪರ್ಧಿಸಿದ್ದರು. ಈ ಪೈಕಿ ಸುಬ್ಬಯ್ಯ ಎಂ. ಎಂಬುವವರು ಗರಿಷ್ಠ 19,984 ಮತಗಳನ್ನು ಪಡೆದಿದ್ದರು. 2014ರಲ್ಲಿ ಮೂವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಇವರಲ್ಲಿ ನಿರ್ಮಲಕುಮಾರಿ ಎಂಬುವವರು ಅತಿ ಹೆಚ್ಚು ಅಂದರೆ 6,604 ಮತಗಳನ್ನು ಗಳಿಸಿದ್ದರು.

2019ರಲ್ಲಿ 10 ಮಂದಿ ಅಭ್ಯರ್ಥಿಗಳು ಇದ್ದರು, ಈ ಪೈಕಿ ನಾಲ್ವರು ಸ್ವತಂತ್ರ್ಯ ಅಭ್ಯರ್ಥಿಗಳು. ಇವರ ಪೈಕಿ ಎಂ.ಪ್ರದೀಪ್‍ಕುಮಾರ್ ಅವರು ಗರಿಷ್ಠ 6,554 ಮತಗಳನ್ನು ಗಳಿಸಿದ್ದರು.

ಈ ಬಾರಿಯ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದರು, ಇವರ ಪೈಕಿ ಆರು ಮಂದಿ ಪಕ್ಷೇತರರು. ಇವರಲ್ಲಿ ಕದಂಬ ನಾ. ಅಂಬರೀಷ್, ಪ್ರದೀಪ್ ಕುಮಾರ್ ಎಂ., ಜಿ.ಡಿ.ರಾಜಗೋಪಾಲ (ಎಚ್.ಡಿ.ಕೋಟೆ), ಅವರು ಈ ಹಿಂದೆಯೂ ಸ್ಪರ್ಧಿಸಿದ್ದರು.

ಅಭ್ಯರ್ಥಿಗಳು ಏನು ಹೇಳುತ್ತಾರೆ?: ‘ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ಸಂಸತ್ತಿಗೆ ಚುನಾವಣೆ ನಡೆಯುತ್ತಿವೆ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಅಭಿವೃದ್ಧಿ ಮಂತ್ರ ಜಪಿಸುತ್ತಿವೆಯೇ ವಿನಾ, ಅಭಿವೃದ್ಧಿ ಕೆಲಸಗಳು ಏನೂ ಆಗುತ್ತಿಲ್ಲ. ಸಂಸತ್ತಿನ ಬಹುಮತ ಬಂದ ಪಕ್ಷಗಳು ಅಧಿಕಾರಕ್ಕೆ ಏರಿದ ನಂತರ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಅನುಷ್ಠಾನ ಮಾಡುವುದನ್ನು ಬಿಟ್ಟು ಜನರಿಗೆ ಏನೂ ಮಾಡುತ್ತಿಲ್ಲ’ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಎರಡು ಬಾರಿ ಸ್ಪರ್ಧಿಸಿರುವ ಅಂಬರೀಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶದಾದ್ಯಂತ ಪಕ್ಷೇತರರಾಗಿ ಸ್ಪರ್ಧಿಸಿದರು ಗೆದ್ದು ಸಂಸತ್ತಿಗೆ ಆಯ್ಕೆಯಾದರೆ, ಜನರ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಅವರು ಹೇಳಿದರು.

‘ನಾನು ತಳಮಟ್ಟದಿಂದ ಬೆಳೆದು ಬಂದವನು. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಅಧಿಕಾರ ಸಿಕ್ಕರೆ ಇನ್ನಷ್ಟು ಜನಸೇವೆ ಮಾಡೋಣ ಎಂಬ ಉದ್ದೇಶವನ್ನಿಟ್ಟುಕೊಂಡು ಚುನಾವಣೆಗಳಲ್ಲಿ ಸ್ಪರ್ಧಿಸುತ್ತೇನೆ’ ಎಂದು ಎರಡು ಚುನಾವಣೆಗಳಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಜಿ.ಡಿ.ರಾಜಗೋಪಾಲ್‌ ಹೇಳಿದರು.

ನನ್ನ ಮತ ನನಗೇ ಹಾಕಿಕೊಳ್ಳುವೆ’
‘‘2014ರಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಈಗ ರಾಜಕಾರಣ ಚುನಾವಣೆ ಎಂದರೆ ಶ್ರೀಮಂತರು ರಾಜಕಾರಣಿಗಳ ಕುಟುಂಬದವರಿಗೆ ಸೀಮಿತ ಎಂಬಂತಾಗಿದೆ. ಬಡವರ ಮಕ್ಕಳು ಸ್ಪರ್ಧಿಸಬೇಕು ಎಂಬ ಉದ್ದೇಶದಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳುತ್ತಾರೆ ಹನೂರಿನ ಪ್ರದೀಪ್‌ ಕುಮಾರ್‌. ‘ಶಾಸಕರು ಸಂಸದರಾಗಿ ಆಯ್ಕೆಯಾದವರು ಭರವಸೆಗಳನ್ನು ಈಡೇರಿಸುವುದಿಲ್ಲ. ಗೆದ್ದ ಮೇಲೆ ಮತದಾರರು ಕ್ಷೇತ್ರದತ್ತ ತಲೆ ಹಾಕುವುದಿಲ್ಲ. ಅಂತಹವರಿಗೆ ನಾನು ಮತ ಹಾಕಬಾರದು. ನನ್ನ ಮತವನ್ನು ನಾನೇ ಹಾಕಿಕೊಳ್ಳಬೇಕು ಎಂಬ ನಿಲುವು ನನ್ನದು’ ಎಂದರು. ಸಾಮಾನ್ಯವಾಗಿ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳನ್ನು ಖರೀದಿ ಮಾಡುತ್ತಾರೆ. ಆದರೆ ನಾನು ಅದಕ್ಕಾಗಿ ನಿಂತಿಲ್ಲ. ಆಮಿಷ ಬೆದರಿಕೆಗೆ ಜಗ್ಗದೇ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಪ್ರದೀಪ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT