ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರಿತ ಪರಿಶಿಷ್ಟರಿಗೆ ಮೀಸಲಾತಿ ಬೇಡ: ಮುಕ್ತ ಸಂವಾದದಲ್ಲಿ ನಿರ್ಣಯ

Published 31 ಆಗಸ್ಟ್ 2023, 5:28 IST
Last Updated 31 ಆಗಸ್ಟ್ 2023, 5:28 IST
ಅಕ್ಷರ ಗಾತ್ರ

ಚಾಮರಾಜನಗರ: ಕ್ರಿಶ್ವಿಯನ್ ಹಾಗೂ ಮುಸ್ಲಿಂ ಧರ್ಮಗಳಿಗೆ ಮತಾಂತಗೊಂಡಿರುವ ಪರಿಶಿಷ್ಟ ಜಾತಿಯವರಿಗೆ ಎಸ್‌ಸಿ ಕೋಟಾದಡಿ ಮೀಸಲಾತಿ ಕಲ್ಪಿಸಬಾರದು. ಈ ಬಗ್ಗೆ ಅಧ್ಯಯನ ನಡೆಸಲು ರಚಿಸಿರುವ ಆಯೋಗದ ಮುಂದೆ ಪ್ರಬಲವಾಗಿ ವಾದ ಮಂಡಿಸಬೇಕು ಎಂಬ ಒಕ್ಕೊರಲ ಅಭಿಪ್ರಾಯ ನಗರದಲ್ಲಿ ಬುಧವಾರ ವ್ಯಕ್ತವಾಯಿತು. 

ನಗರದ ಅಂಬೇಡ್ಕರ್‌ ಭವನದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಇದೇ ವಿಚಾರವಾಗಿ ಹಮ್ಮಿಕೊಂಡಿದ್ದ ಮುಕ್ತ ಸಂವಾದದಲ್ಲಿ ಪಾಲ್ಗೊಂಡ ದಲಿತ ಸಂಘಟನೆಗಳ  ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ‘ಪರಿಶಿಷ್ಟ ಜಾತಿ ಎಂದು ಹೇಳಿಕೊಂಡು ಸರ್ಕಾರದ ಮೀಸಲಾತಿ ಹಾಗೂ ಇತರ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ನಿಜವಾದ ದಲಿತರಿಗೆ ಅನ್ಯಾಯವಾಗುತ್ತಿದೆ. ಭಾರತದ‌ಲ್ಲೇ ಹುಟ್ಟಿದ ಧರ್ಮಗಳಿಗೆ ಮೀಸಲಾತಿ ವಿಸ್ತರಿಸಲಾಗಿದೆ. ಆದರೆ, ಕ್ರಿಶ್ಚಿಯನ್‌ ಹಾಗೂ ಮುಸ್ಲಿಂ ಧರ್ಮಗಳು ಹೊರದೇಶದವು. ಅವುಗಳಿಗೆ ಮತಾಂತರಗೊಂಡವರಿಗೆ ಎಸ್‌ಸಿ ಕೋಟಾದಡಿ ಮೀಸಲಾತಿ ನೀಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ಮತಾಂತ ಇದಕ್ಕೆ ಅವಕಾಶ ಕೊಡಬಾರದು’ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.   

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಾದಿರಾಜ ಸಾಮರಸ್ಯ ಮಾತನಾಡಿ, ‘ಕ್ರಿಶ್ಚಿಯನ್ ಧರ್ಮದಲ್ಲಿ ಅಸ್ಪೃಶ್ಯತೆ ಇಲ್ಲ. ಹಾಗಾಗಿ, ನಮಗೆ ಮೀಸಲಾತಿ ಬೇಡ ಎಂದು ಹೇಳುತ್ತಲೇ ಬಂದ ಚರ್ಚುಗಳು, 1960ರ ಬಳಿಕ ತಮ್ಮ ಕಾರ್ಯತಂತ್ರವನ್ನು ಬದಲಿಸಿಕೊಂಡವು. ಮತಾಂತರಗೊಂಡ ದಲಿತರನ್ನು ಚರ್ಚ್‌ ದಾಖಲೆಯಲ್ಲಿ ಕ್ರಿಶ್ಚಿಯನ್‌ ಎಂದು ದಾಖಲಿಸಿಕೊಂಡರೆ, ಮೀಸಲಾತಿ ಹಾಗೂ ಇತರ ಸರ್ಕಾರಿ ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಎಂದೇ ನಮೂದಿಸುವಂತೆ ನೋಡಿಕೊಂಡವು. ಇಂತಹವರು ಈ ದೇಶದಲ್ಲಿ ಶೇ 7ರಷ್ಟು ಮಂದಿ ಇದ್ದಾರೆ’ ಎಂದರು. 

‘2004ರಲ್ಲಿ 36 ಸಂಸದರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿ ಮತಾಂತರಗೊಂಡ ದಲಿತ ಕ್ರಿಶ್ಷಿಯ
ನ್ನರಿಗೆ ಮೀಸಲಾತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆಗ ಸರ್ಕಾರ ನ್ಯಾಯಮೂರ್ತಿ ರಂಗ
ನಾಥ ಮಿಶ್ರಾ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ರಚಿಸಿತ್ತು. 2007ರ ವರದಿ ನೀಡಿದ್ದ ಸಮಿತಿಯು, ಸಿಖ್‌ ಮತ್ತು ಬೌದ್ಧರಿಗೆ ಮೀಸಲಾತಿ ವಿಸ್ತರಿಸಿದಂತೆ, ಮತಾಂತರಗೊಂಡ ಕ್ರಿಶ್ಚಿಯನ್‌, ಮುಸ್ಲಿಂ, ಜೈನ, ಪಾರ್ಸಿ ದಲಿತರಿಗೂ ಮೀಸಲಾತಿ ವಿಸ್ತರಿಸಬೇಕು ಎಂದು ಹೇಳಿತ್ತು. ‘ಆದರೆ, ಇದೇ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದ, ಪರಿಶಿಷ್ಟ ಜಾತಿಗೆ ಸೇರಿದ್ದ ಐಎಎಸ್‌ ಅಧಿಕಾರಿ ಆಶಾದಾಸ್‌ , ಮೀಸಲಾತಿ ವಿಸ್ತರಿಸುವುದನ್ನು ವಿರೋಧಿಸಿದ್ದರು’ ಎಂದರು. 

‘ಎರಡು ಮೂರು ವರ್ಷಗಳಿಂದ ಈ ವಿಚಾರವಾಗಿ ಪದೇ ಪ‍ದೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಲಾಗುತ್ತಿದ್ದು, ನ್ಯಾಯಾಲಯ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ. ಅಧ್ಗಯನ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಜಿ.ಬಾಲಕೃಷ್ಣನ್‌ ನೇತೃತ್ವದ ಆಯೋಗ ರಚಿಸಿದೆ. ಆಯೋಗವು ರಾಜ್ಯಕ್ಕೆ ಬಂದಾಗ ನಮ್ಮ ಅಭಿಪ್ರಾಯ ಹೇಳಬೇಕಾಗಿದೆ. ಮೀಸಲಾತಿ ನೀಡಿದರೆ ಆಗುವ ತೊಂದರೆಗಳ ಬಗ್ಗೆ ಪ್ರಬಲವಾಗಿ ವಾದಮಂಡಿಸಬೇಕಾಗಿದೆ ಎಂದು ಸಲಹೆ ನೀಡಿದರು. ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಬಿಎಸ್‌ಪಿ ಮುಖಂಡ ಕಮಲ್‌ರಾಜ್‌, ಬಿಜೆಪಿ ಮುಖಂಡ ಮುಡ್ನಾಕೂಡು ಪ್ರಕಾಶ್, ದಲಿತ ಸಂಘರ್ಷ ಸಮಿತಿಯ ಯರಿಯೂರು ರಾಜಣ್ಣ, ನಲ್ಲೂರು ಪರಮೇಶ್, ದೊಡ್ಡಿಂದುವಾಡಿ ಸಿದ್ದರಾಜು, ಕೊರಮ ಕ್ಷೇಮಾಭಿವೃದ್ಧಿ ಸಂಘದ ಮಾದೇಶ್, ಶ್ರೀನಿವಾಸ್, ಭೋವಿ ಜನಾಂಗದ ಹೊಂಗನೂರು ರಾಜಣ್ಣ, ಅರಕವಾಡಿ ನಾಗೇಂದ್ರ, ಅಗತಗೌಡನಹಳ್ಳಿ ಬಸವರಾಜು, ಸಿ.ಕೆ.ಮಂಜುನಾಥ್, ಛಲವಾದಿ ಮಹಾಸಭಾದ ಅಧ್ಯಕ್ಷ ರಮೇಶ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT