ಮಂಗಳವಾರ, ಜುಲೈ 5, 2022
23 °C
ಗುಂಡ್ಲುಪೇಟೆ; ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಕತ್ತಲು, ಪಾದಚಾರಿಗಳಿಗೂ ತೊಂದರೆ

ಗುಂಡ್ಲುಪೇಟೆಯಲ್ಲಿ ಉರಿಯದ ಬೀದಿ ದೀಪ: ಜನರಿಗೆ ಸಂಕಟ

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ವಿಭಜಕದಲ್ಲಿ ಅಳವಡಿಸಿರುವ ಬೀದಿ ದೀಪಗಳು ಉರಿಯದೆ, ಜನರು ರಾತ್ರಿ ಹೊತ್ತು ಕತ್ತಲಲ್ಲಿ ತಿರುಗಾಡುವಂತಾಗಿದೆ.

ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ (67 ಮತ್ತು766) ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿ ದಿನ ನೂರಾರು ವಾಹನಗಳು ಸಂಚರಿಸುತ್ತವೆ. ರಾತ್ರಿ ಹೊತ್ತು ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಜನರು ಕೂಡ ಓಡಾಡುತ್ತಿರುತ್ತಾರೆ.

ಹಿಂದೆ ಸಚಿವರಾಗಿದ್ದ ಎಚ್‌.ಎಸ್‌.ಮಹದೇವಪ್ರಸಾದ್‌ ಅವರ ಕಾಲದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ನಂತರ ಎಂ.ಸಿ.ಮೋಹನಕುಮಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಬೀದಿ ದೀಪ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಕೆಲವು ದಿನಗಳ ನಂತರ ದೀಪಗಳು ಉರಿಯುತ್ತಿರಲಿಲ್ಲ. 2018ರಲ್ಲಿ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಶಾಸಕರಾದ ಬಳಿಕ ಮತ್ತೆ ಬೀದಿ ದೀಪಗಳನ್ನು ಉದ್ಘಾಟಿಸಿದ್ದರು. ಆದರೆ, ಹಲವು ತಿಂಗಳುಗಳಿಂದ ಈ ದೀಪಗಳು ಉರಿಯದೆ, ಪಟ್ಟಣದ ಪ್ರಮುಖ ಬೀದಿಯಲ್ಲಿ ರಾತ್ರಿ ಹೊತ್ತು ಕತ್ತಲು ಆವರಿಸುತ್ತಿದೆ.

‘ಬೀದಿ ದೀಪಗಳನ್ನು ಪುರಸಭೆಯಿಂದ ನಿರ್ವಹಣೆ ಮಾಡುತ್ತಿದ್ದರು. ಆದರೆ, ಕೆಲವು ತಿಂಗಳುಗಳಿಂದ ದೀಪಗಳು ಉರಿಯುತ್ತಿಲ್ಲ. ಅಧಿಕಾರಿಗಳು ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದು, ನೂರಾರು ಪ್ರವಾಸಿಗರು ಸಂಚರಿಸುತ್ತಿರುತ್ತಾರೆ. ಮುಖ್ಯ ರಸ್ತೆ ಮಾತ್ರವಲ್ಲ; ನಿರ್ವಹಣೆ ಕೊರತೆಯಿಂದ ಪಟ್ಟಣದ ಹಲವು ವಾರ್ಡ್‌ಗಳಲ್ಲೂ ಬೀದಿ ದೀಪಗಳು ಕೆಟ್ಟು ನಿಂತಿವೆ’ ಎಂದು ಪಟ್ಟಣದ ನಿವಾಸಿ ವೆಂಕಟೇಶ್‌ ದೂರಿದರು. 

ರಸ್ತೆಯ ಎರಡು ಬದಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಕಾಮಗಾರಿಯೂ ಕಳಪೆಯಾಗಿರುವುದರಿಂದ ಚರಂಡಿ ಮೇಲಿನ ಕಾಂಕ್ರೀಟ್‌ ಅಲ್ಲಲ್ಲಿ ಹಾನಿಗೀಡಾಗಿದೆ. ಬೀದಿ ದೀಪವೂ ಬೆಳಗದಿರುವುದರಿಂದ ಪಾದಚಾರಿ ಮಾರ್ಗದಲ್ಲಿ ನಡೆದಾಡುವವರು ಬಿದ್ದು ಗಾಯಗೊಂಡಿದ್ದಾರೆ.

‘ಗಡಿ ತಾಲ್ಲೂಕಿನ ಪ್ರಮುಖ ಪಟ್ಟಣ ಇದು. ಬೀದಿದೀಪದ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿರುವ ನಾಗರಿಕ ಸೌಲಭ್ಯ. ಅದೇ ಇಲ್ಲದಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ದೀಪಗಳನ್ನು ಬೆಳಗಿಸಲು ಪುರಸಭೆ ಕ್ರಮ ವಹಿಸಬೇಕು’ ಎಂಬುದು ಸ್ಥಳೀಯರ ಆಗ್ರಹ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ ರಾಜು, ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಮಗೆ ಒಪ್ಪಿಸಿರಲಿಲ್ಲ. ಕೆಲ ದಿನಗಳವರೆಗೆ ಮಾತ್ರ ದೀಪಗಳು ಉರಿಯುತ್ತಿದ್ದವು. ಕಳಪೆ ಗುಣಮಟ್ಟದ ವೈರ್‌ಗಳನ್ನು ಬಳಕೆ ಮಾಡಿರುವುದರಿಂದ ಅನೇಕ ಕಡೆಗಳಲ್ಲಿ ವೈರ್ ತುಂಡಾಗುತ್ತಿದೆ. ಅದನ್ನು ಹೊಸದಾಗಿ ಮಾಡಲು ಅನುದಾನ ಬೇಕಿದೆ. ಪುರಸಭೆಯಿಂದ ಈಗಾಗಲೇ ರಿಪೇರಿ ಮಾಡಿ ದೀಪಗಳು ಉರಿಯುವಂತೆ ಮಾಡಿದ್ದೆವು. ಈಗ ಮತ್ತೆ ಸಮಸ್ಯೆಯಾಗಿದೆ. ಕೌನ್ಸಿಲ್‌ನಲ್ಲಿ ಈ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಂಡು, ಬೀದಿ ದೀಪ ಸರಿಪಡಿಸಲು ಕ್ರಮವಹಿಸಲಾಗುವುದು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು