ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: 650 ಮಂದಿಗೆ ₹60 ಲಕ್ಷ ಮೌಲ್ಯದ ಸಲಕರಣೆ ವಿತರಣೆ

ಅಂತರ ರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ
Published : 1 ಅಕ್ಟೋಬರ್ 2024, 14:05 IST
Last Updated : 1 ಅಕ್ಟೋಬರ್ 2024, 14:05 IST
ಫಾಲೋ ಮಾಡಿ
Comments

ಚಾಮರಾಜನಗರ: ‘ರಾಷ್ಟ್ರೀಯ ವಯೋಶ್ರೀ’ ಯೋಜನೆ ಹಾಗೂ ‘ಅಂಗವಿಕಲರಿಗೆ ನೆರವು’ ಯೋಜನೆಯಡಿ ಜಿಲ್ಲೆಯ 240 ಹಿರಿಯ ನಾಗರಿಕರು ಹಾಗೂ 417 ಮಂದಿ ಅಂಗವಿಕಲರಿಗೆ ₹ 60 ಲಕ್ಷ ಮೌಲ್ಯದ ಸಾಧನ ಸಲಕರಣೆಗಳನ್ನು ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಅಂತರ ರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಸ್ತಾಂತರಿಸಲಾಯಿತು.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿರಿಯ ನಾಗರಿಕರ ಸಬಲೀಕರಣ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಲಿಂಕೋ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಲಕರಣೆಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಶಾಸಕರು, ‘ಅಂಗವೈಕಲ್ಯ ಹುಟ್ಟಿನಿಂದ ಅಥವಾ ಬೆಳೆಯುವ ಹಂತದಲ್ಲಿ ಬರಬಹುದು. ಅಂಗವೈಕಲ್ಯ ಕಾಡಿದರೆ ಜೀವನ ಕತ್ತಲಿಗೆ ದೂಡಿದಂತಹ ಅನುಭವವಾಗುತ್ತದೆ. ಆದರೆ, ಅಂಗವಿಕಲರು ದೃತಿಗೆಡದೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಅವರ ಬಾಳಿಗೆ ನೆರವಾಗುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಸಂಘ ಸಂಸ್ಥೆಗಳು ಕೂಡ ಅಂಗವಿಕಲರ ನೆರವಿಗೆ ನಿಂತಿವೆ’ ಎಂದರು.

ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ‘ಸಾಮಾಜಿಕ ವ್ಯವಸ್ಥೆಯಲ್ಲಿ ಹಿರಿಯರು ಹಾಗೂ ಅಂಗವಿಕಲರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಜಿಲ್ಲೆಯಲ್ಲಿ 18,416 ಅಂಗವಿಕಲರಿದ್ದು, ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು. ಈಚೆಗೆ ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಅಂಗವಿಕಲರು ದೇಶಕ್ಕೆ 60 ಪದಕಗಳನ್ನು ಗೆದ್ದು ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಸಮಾಜದಲ್ಲಿ ಅಂಗವಿಕಲರಿಗೆ ಸಮಾನ ಅವಕಾಶ ನೀಡುವ ಮೂಲಕ ಗುರಿಮುಟ್ಟಲು ಪ್ರೇರೇಪಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ‘ಅಂಗವಿಕಲರಿಗೆ ಅನುಕಂಪದ ಬದಲಾಗಿ ಅವಕಾಶ ನೀಡಬೇಕು. ಸರ್ಕಾರ ಅಂಗವಿಕಲರ ಪುನರ್ವಸತಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು ಸೌಲಭ್ಯಗಳನ್ನು ತಲುಪಿಸಿ ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಲಾಗುವುದು. ಸಮಾಜ ಅಂಗವಿಕಲರನ್ನು ಗೌರವದಿಂದ ನೋಡಿದಾಗ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ’ ಎಂದರು.

‘ಪ್ರಸ್ತುತ ಸಮಾಜ ಆಧುನಿಕತೆಗೆ ಮಾರುಹೋಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಹಿರಿಯ ಜೀವಗಳನ್ನು ವೃದ್ಧಾಶ್ರಮಕ್ಕೆ ದೂಡುತ್ತಿದ್ದೇವೆ. ಅಕ್ಷರಸ್ಥರು, ಮುಂದುವರಿದವರು ಎನಿಸಿಕೊಂಡವರೇ ಹಿರಿಯರನ್ನು ವೃದ್ಧಾಶ್ರಮಕ್ಕೆ ಹೆಚ್ಚಾಗಿ ಕಳುಹಿಸುತ್ತಿರುವುದು ದುಃಖದ ವಿಚಾರ. ಹಿರಿಯರ ಜ್ಞಾನ, ಅನುಭವ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು’ ಎಂದು ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಮಾತನಾಡಿದರು.

ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಚಂದ್ರು, ಡಿಡಿಪಿಐ ರಾಮಚಂದ್ರರಾಜೇ ಅರಸ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಕಲೇಶ್ವರ, ಅಲಿಂಕೋ ಸಂಸ್ಥೆಯ ಕಿರಿಯ ವ್ಯವಸ್ಥಾಪಕ ರಿಷಬ್ ಮಲ್ಹೋತ್ರಾ ಹಾಗೂ ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

ನಗರದ ಪೇಟೆ ಪ್ರೈಮರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ನುಸಹಾ ಫಾತಿಮಾ ಖಾನ್ ಸಂವಿಧಾನ ಪೀಠಿಕೆ ಬೋಧಿಸಿದರು.

ಜಿಲ್ಲೆಯಲ್ಲಿ 18,416 ಅಂಗವಿಕಲರು ‘ಅಂಗವಿಕಲರಿಗೆ ಅನುಕಂಪ ಬೇಡ; ಅವಕಾಶ ನೀಡಿ’ ‘ಸಮಾಜದಲ್ಲಿ ಮರೆಯಾಗುತ್ತಿರುವ ಮಾನವೀಯ ಮೌಲ್ಯ’

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT