ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ತ್ರಿವಳಿ ಕೊಲೆ: ನಾಲ್ಕು ತಂಡ ರಚನೆ, ಒಬ್ಬನ ಬಂಧನ

ಇಬ್ಬರ ಸ್ಥಿತಿ ಚಿಂತಾಜನಕ, ಮೂವರು ಪ್ರಾಣಾಪಾಯದಿಂದ ಪಾರು
Last Updated 27 ಮೇ 2020, 16:29 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:ಪಟ್ಟಣದ ಜಾಕಿರ್ ಹುಸೇನ್ ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಮೂವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಭೇದಿಸಲು ನಾಲ್ಕು ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

ಹಳೇ ವೈಷಮ್ಯ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ಹೇಳಿದ್ದಾರೆ.

ಬಿಜೆಪಿ ಮುಖಂಡ ಇನಾಯತ್ ಅವರ ಬೆಂಬಲಿಗರಾದ ಅಸ್ಲಾಂ, ಜಮೀರ್‌ ಹಾಗೂ ಪುರಸಭೆಯ ಮಾಜಿ ಸದಸ್ಯ ನೂರುಲ್ಲಾ ಅವರ ಬೆಂಬಲಿಗರ ನಡುವೆ ಮಾರಕಾಸ್ತ್ರಗಳಿಂದ ಘರ್ಷಣೆ ನಡೆದಿದೆ.ಕೊಲೆಯಾದ ಮೂವರ ಪೈಕಿ ಜಕಾವುಲ್ಲಾ ಹಾಗೂ ಕೈಸರ್‌ ಅವರು ಶೌಡಿಶೀಟರ್‌ಗಳು ಎಂದು ಗೊತ್ತಾಗಿದೆ. ಇದ್ರಿಸ್‌ ಮೃತಪಟ್ಟ ಮತ್ತೊಬ್ಬ ವ್ಯಕ್ತಿ. ಇವರೆಲ್ಲ ನೂರುಲ್ಲಾ ಅವರ ಸಂಬಂಧಿಕರು.

‘ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರು ಅಪಾಯದಿಂದ ಪಾರಾಗಿದ್ದಾರೆ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಆನಂದಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

‘ಪಟ್ಟಣದಲ್ಲಿ ನಡೆಯುತ್ತಿದ್ದ ಅಕ್ರಮ ಹಸು ಸಾಗಾಟ ದಂಧೆಯ ಬಗ್ಗೆ ನೂರುಲ್ಲಾ ಬೆಂಬಲಿಗರು ಪೊಲೀಸರು ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಬಗ್ಗೆ ವಿರೋಧಿಗಳಿಗೆ ಕೋಪ ಇತ್ತು. ಇದರ ಜೊತೆಗೆ, ನೂರುಲ್ಲಾ ಅವರು ತಮ್ಮ ಮನೆಯನ್ನು ಇನಾಯತ್‌ ಅವರಿಗೆ ಮಾರಾಟ ಮಾಡಿದ್ದರು. ನೂರುಲ್ಲಾ ಅವರು ಪೂರ್ಣ ಹಣ ಇನ್ನೂ ಪಡೆದಿರಲಿಲ್ಲ. ಈ ವಿಚಾರದಲ್ಲೂ ಎರಡೂ ತಂಡಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಭೇಟಿ: ದಕ್ಷಿಣ ವಲಯದ ಐಜಿಪಿ ವಿಪುಲ್ ಕುಮಾರ್‌, ಎಸ್‌ಪಿ ಎಚ್‌.ಡಿ.ಆನ‌ಂದಕುಮಾರ್‌ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪುಲ್‌ ಕುಮಾರ್‌ ಅವರು, ‘ವೈಯಕ್ತಿಕ ದ್ವೇಷ, ಹಣಕಾಸಿನ ವಿಚಾರಕ್ಕೆ ಈ ಕೃತ್ಯ ನಡೆದಿದೆ ಎಂಬ ಮಾಹಿತಿ ಬಂದಿದೆ. ಅನೇಕರ ಹೆಸರುಗಳು ಕೇಳಿ ಬಂದಿವೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ. ಜನರು ತಾಳ್ಮೆಯಿಂದ ಇರಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ತನಿಖೆಯಿಂದ ಸತ್ಯಾಂಶ ಹೊರಬರಲಿದೆ’ ಎಂದು ಹೇಳಿದರು.

ತಾಲ್ಲೂಕು ಆಸ್ಪತ್ರೆಯಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸುವಾಗ ಆಸ್ಪತ್ರೆಯ ಹೊರಗಡೆ ಅವರ ಕುಟುಂಬ ಸದಸ್ಯರ ರೋದನ ಮುಗಿಲುಮುಟ್ಟಿತ್ತು.

ಸ್ಥಳದಲ್ಲೇ ಒಬ್ಬ ಸಾವು, ಆಸ್ಪತ್ರೆಯಲ್ಲಿ ಇಬ್ಬರು
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಎಸ್‌ಪಿ ಎಚ್‌.ಡಿ.ಆನಂದ ಕುಮಾರ್‌ ಅವರು, ‘ಒಂದು ತಂಡದವರು ಮಾರಕಾಸ್ತ್ರಗಳಿಂದಇದ್ರಿಸ್, ಕೈಸರ್, ಜಕಾವುಲ್ಲಾ, ನುಸ್ರುಲ್ಲಾ ಹಾಗೂ ಇತರೆ ನಾಲ್ವರ ಮೇಲೆ ದಾಳಿ ಮಾಡಿದ್ದಾರೆ. ಸ್ಥಳದಲ್ಲಿ ಒಬ್ಬರು ಮೃತಪಟ್ಟರೆ ಹಾಗೂ ಆಸ್ಪತ್ರೆಯಲ್ಲಿ ಇಬ್ಬರು ಕೊನೆಯುಸಿರೆಳೆದರು’ ಎಂದು ಹೇಳಿದರು.

‘ತನಿಖೆ ಪ್ರಗತಿಯಲ್ಲಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ. ಪ್ರಕರಣದಕ್ಕೆ ಸಂಬಂಧಿಸಿದಂತೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಒಂದು ತಂಡ, ತನಿಖೆಗಾಗಿ ಇನ್ನೊಂದು ತಂಡ, ತಾಂತ್ರಿಕ ಸಹಕಾರಕ್ಕಾಗಿ ಪ್ರತ್ಯೇಕ ತಂಡ ಹಾಗೂ ಪಟ್ಟಣದಲ್ಲಿ ಬಂದೋಬಸ್ತ್‌ಗಾಗಿ ಡಿವೈಎಸ್‌ಪಿ ನೇತೃತ್ವದಲ್ಲಿ ಇನ್ನೊಂದು ತಂಡವನ್ನು ರಚಿಸಲಾಗಿದೆ’ ಎಂದು ಅವರು ಹೇಳಿದರು.

‘ವಿಧಿವಿಜ್ಞಾನ ತಜ್ಞರು ಹಾಗು ಬೆರಳಚ್ಚು ತಜ್ಞರನ್ನೂ ಸ್ಥಳಕ್ಕೆ ಕರೆತರಿಸಿ ಮಾಹಿತಿ ಕಲೆ ಹಾಕಲಾಗಿದೆ. ಮೃತಪಟ್ಟವರ ತಂಡದವರ ದೂರನ್ನು ಪಡೆದು ಐಪಿಸಿ ಸೆಕ್ಷನ್‌ 307, 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT