ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕೋವಿಡ್ ಕಾಟಕ್ಕೆ ವರ್ಷ; ಮರೆಯಲಾಗದ ಘಟನೆ, ಪಾಠಗಳ ಮೆಲುಕು

ಕೋವಿಡ್‌ ಸೇನಾನಿಗಳನ್ನು ಗುರುತಿಸಿ, ಪುರಸ್ಕರಿಸಿದ ‘ಪ್ರಜಾವಾಣಿ’
Last Updated 3 ಫೆಬ್ರುವರಿ 2021, 8:11 IST
ಅಕ್ಷರ ಗಾತ್ರ

ದೇಶದಲ್ಲಿ ಕೋವಿಡ್–19 ಕಾಟಕ್ಕೆ ವರ್ಷ ತುಂಬಿದೆ. 2020ರ ಜನವರಿ 27ರಂದು ಕೇರಳದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಚೀನಾದ ವುಹಾನ್‌ನಿಂದ ಮರಳಿದ್ದ ತ್ರಿಶ್ಶೂರ್ನ 20 ವರ್ಷದ ಯುವತಿಗೆ ಕೊರೊನಾ ವೈರಸ್‌ ತಗುಲಿತ್ತು.

ವರ್ಷದ ಬಳಿಕವೂ ಕೊರೊನಾ ವೈರಸ್‌ ಹಾವಳಿ ನಿಂತಿಲ್ಲ.ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕೋವಿಡ್‌ ಮುಕ್ತವಾಗಲು ಇನ್ನಷ್ಟು ಸಮಯ ಬೇಕು ಎಂದೆನಿಸುತ್ತದೆ. ಅಥವಾ ಮುಂದೆಯೂ ಈ ವೈರಸ್‌ನೊಂದಿಗೇ ನಾವು ಬದುಕಬೇಕಾಗುತ್ತದೆಯೋ ಏನೋ?

ಏಳೆಂಟು ತಿಂಗಳುಗಳ ದುರಿತ ಕಾಲದ ನಂತರ ದೇಶ ಈಗ ನಿಧಾನವಾಗಿ ಚೇತರಿಸುತ್ತಿದೆ. ಜನರ ಬದುಕು ಹಂತ ಹಂತವಾಗಿ ಹಳಿಗೆ ಮರಳುತ್ತಿದೆ. ಕೋವಿಡ್ ಪೂರ್ವ ಸ್ಥಿತಿಗೆ ಬರಲು ಇನ್ನಷ್ಟು ಸಮಯ ಬೇಕಾದರೂ, ಜನರೆಲ್ಲ ಒಂದು ಮಟ್ಟಿಗೆ ಈಗ ಸುಧಾರಿಸಿದ್ದಾರೆ.

ಬದುಕಿನ ಇನ್ನೊಂದು ಮಗ್ಗುಲನ್ನು ಪರಿಚಯಿಸಿದ, ಹೊಸ ಪಾಠಗಳನ್ನು ಹೇಳಿಕೊಟ್ಟ, ಜಗತ್ತಿನ ‘ಅಭಿವೃದ್ಧಿ’ಯ ವೇಗದ ಓಟಕ್ಕೆ ಬ್ರೇಕ್‌ ಹಾಕಿದ ಕೋವಿಡ್‌ ವರ್ಷದ ಹಿನ್ನೋಟವನ್ನು ಗಮನಿಸಿದರೆ‌, ಕೋವಿಡ್‌ ಕೊಟ್ಟ ಕಷ್ಟ ಕಾರ್ಪಣ್ಯಗಳು, ಕಲಿಸಿದ ಪಾಠಗಳು ಕಣ್ಣ ಮುಂದೆ ಬರುತ್ತವೆ.

ಲಾಕ್‌ಡೌನ್‌ ಅವಧಿಯಲ್ಲಿ ಬೆಂಗಳೂರಿನಿಂದ ಊರಿಗೆ ಹೊರಟು ನಿಂತ ವಲಸೆ ಕಾರ್ಮಿಕರು
ಲಾಕ್‌ಡೌನ್‌ ಅವಧಿಯಲ್ಲಿ ಬೆಂಗಳೂರಿನಿಂದ ಊರಿಗೆ ಹೊರಟು ನಿಂತ ವಲಸೆ ಕಾರ್ಮಿಕರು

ಲಾಕ್‌ಡೌನ್‌ ಶುರುವಾದಾಗಿನಿಂದ (ಮಾರ್ಚ್‌ 23, 2020) ಆರಂಭಗೊಂಡ ಕಷ್ಟಗಳ ಸರಮಾಲೆ, ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್‌ ಆಗುವವರೆಗೂ ಮುಂದುವರಿದಿತ್ತು. ಆರ್ಥಿಕವಾಗಿ ಮಾತ್ರವಲ್ಲದೇ, ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ.

ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರಿಗೆ ಬಂದೊದಗಿದ ಕಷ್ಟ ಕೋಟಲೆಗಳನ್ನು ಮರೆಯಲು ಈಗಲೂ ಆಗುತ್ತಿಲ್ಲ. ಕೇಂದ್ರದ ತರಾತುರಿ, ಪೂರ್ವ ಸಿದ್ಧತೆ ಇಲ್ಲದ ತೀರ್ಮಾನದಿಂದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ ದೂರವನ್ನು ನಡೆದುಕೊಂಡೇ ಕ್ರಮಿಸಿದ್ದು ಈಗಲೂ ಕಣ್ಣಿಗೆ ಕಟ್ಟುತ್ತದೆ. ಕೆಲಸ, ಸಂಪಾದನೆ ಇಲ್ಲದೆ ದಿನಗಳನ್ನು ಕಳೆದ ಬಡ ಕಾರ್ಮಿಕರು ಕನಸಿನಲ್ಲಿಯೂ ಆ ದಿನಗಳನ್ನು ಮತ್ತೆ ನೆನಪಿಸಿಕೊಳ್ಳಲು ಇಷ್ಟಪಡುತ್ತಿಲ್ಲ.

ಆರಂಭದ ದಿನಗಳಲ್ಲಿ ಕೋವಿಡ್‌ ಸೋಂಕಿತರ ಕುರಿತಾಗಿ ಜನರು ವರ್ತಿಸಿದ ರೀತಿ, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಬಿತ್ತಿದ ಭಯ... ಇವೆಲ್ಲವನ್ನು ಮರೆಯುವುದಕ್ಕೆ ಆಗುತ್ತಿಲ್ಲ. ಬೇಡ ಬೇಡ ಎಂದರೂ ಮತ್ತೆ ಮತ್ತೆ ನೆನಪಾಗಿ ಕಾಡುತ್ತದೆ.

ಸೀಲ್‌ಡೌನ್‌ ಹೆಸರಿನಲ್ಲಿ ಸೃಷ್ಟಿಯಾದ ಅಸ್ಪೃಶ್ಯತೆಯ ವಾತಾವರಣ, ಕೋವಿಡ್‌ನಿಂದಾಗಿ ಮೃತಪಟ್ಟವರಿಗೆ ಸರಿಯಾಗಿ ದೊರೆಯದ ಅಂತ್ಯ ಸಂಸ್ಕಾರ, ಸೋಂಕಿತರ ಚಾಕರಿಯನ್ನು ಮಾಡಲು ಮನೆಯವರಿಗೆ ಸಾಧ್ಯವಾಗದಿದ್ದುದು, ಕೋವಿಡ್‌ನಿಂದ ನರಳುತ್ತಿದ್ದ ಆತ್ಮೀಯರನ್ನು ನೇರವಾಗಿ ಕಂಡು ಧೈರ್ಯ ತುಂಬಲು ಸಾಧ್ಯವಾದಿರುವುದು, ಸಾಮಾನ್ಯ ಕಾಯಿಲೆಗಳಿಗೂ ಸರಿಯಾದ ಚಿಕಿತ್ಸೆ ದೊರಕದೇ ಇದ್ದುದು... ಇವೆಲ್ಲವೂ ಜನರನ್ನು ತಿಂಗಳುಗಳ ಕಾಲ ಮಾನಸಿಕವಾಗಿ ಕುಗ್ಗಿಸಿದೆ. ಸುಲಭವಾಗಿ ವಾಸಿಯಾಗುವ ಮನಸ್ಸಿನ ಗಾಯಗಳೇ ಇವು? ಅಲ್ಲವೇ ಅಲ್ಲ.

ಕಗ್ಗತ್ತಲಿನಲ್ಲಿ ಮೂಡಿದ ಬೆಳ್ಳಿ ರೇಖೆಗಳು

ಇಂತಹ ಒಂದು ಕಾಯಿಲೆಯನ್ನು ನಿರೀಕ್ಷಿಸದೇ ಇದ್ದ ಜನರು, ಪರಿಸ್ಥಿತಿಗೆ ಹೊಂದಿಕೊಳ್ಳಲು ತಕ್ಷಣಕ್ಕೆ ಸಾಧ್ಯವಾಗದೇ ಕೊಂಚ ವಿಚಿತ್ರವಾಗಿ ವರ್ತಿಸಿದ್ದು ಸತ್ಯ.ಇಂತಹ ಸಂದರ್ಭದಲ್ಲೂ ಜನ ಸಮುದಾಯದ ಕಷ್ಟಕ್ಕೆ ತಮ್ಮ ಕೈಲಾದ ರೀತಿಯಲ್ಲಿ ಸ್ಪಂದಿಸಲು ಮುಂದೆ ಬಂದ ಕೋಟ್ಯಂತರ ಮನಸುಗಳು, ಕಗ್ಗತ್ತಲಿನಲ್ಲಿ ಮೂಡಿದ ಬೆಳ್ಳಿರೇಖೆಗಳಾಗಿದ್ದವು.

ವೈದ್ಯರು ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸ್ವಚ್ಛ ಸೇನಾನಿಗಳಾದ ಪೌರಕಾರ್ಮಿಕರು, ವಿವಿಧ ಇಲಾಖೆಗಳ ನೌಕರ– ಸಿಬ್ಬಂದಿಗಳು ಸರ್ಕಾರದ ಪ್ರತಿನಿಧಿಗಳಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ, ಜೀವದ ಹಂಗು ತೊರೆದು ಶ್ರದ್ಧೆಯಿಂದ, ಗಡಿ ಕಾಯುವ ಯೋಧರ ರೀತಿಯಲ್ಲಿ ಕೋವಿಡ್‌ ವಿರುದ್ಧ ಸೆಣಸಾಡಿದರು. ಈ ಹೋರಾಟದಲ್ಲಿ ನೂರಾರು ಮಂದಿ ಪ್ರಾಣವನ್ನೇ ತೆತ್ತು ‘ಹುತಾತ್ಮ’ರೇ ಆದರು.

ಸದಾ ಕಾಲ ದುಡ್ಡಿನ ಹಿಂದೆಯೇ ಓಡಾಡುವ ರಾಜಕಾರಣಿಗಳು ಕೂಡ, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದರು.ಬೇರೊಬ್ಬರ ಸಂಕಷ್ಟಕ್ಕೆ ಮಿಡಿಯುವ ಗುಣ ಉಳ್ಳ ಜನರು ಸ್ವಯಂ ಪ್ರೇರಿತರಾಗಿ ಕೆಲಸ ಮಾಡಿದರು. ಆರ್ಥಿಕವಾಗಿ ಸಹಾಯ ಮಾಡಿದ್ದು ಒಂದೆಡೆಯಾದರೆ, ಕೋವಿಡ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸ್ವಾರ್ಥ ರಹಿತವಾಗಿ ಮಾಡಿದರು.ಸಾವಿರಾರು ಸ್ವಯಂ ಸೇವಾ ಸಂಸ್ಥೆಗಳು ಕೂಡ ದುರಿತದ ಹೊತ್ತಿನಲ್ಲೂ ತಮ್ಮ ಸೇವಾ ಉದ್ದೇಶವನ್ನು ಸಾಕಾರಗೊಳಿಸಿದವು.

‘ಕೊರೊನಾ ಸೇನಾನಿಗಳು’ ಎಂದೇ ಗುರುತಿಸಿಕೊಂಡ ಈ ಮನಸುಗಳು ಮಾಡಿರುವ ಕಾರ್ಯ ಇಡೀ ಮನುಕುಲವೇ ಮೆಚ್ಚುವಂತಹದ್ದು. ಇವರ ಸೇವೆಗಳನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ.

ಸಕಾರಾತ್ಮಕ ಬದಲಾವಣೆ ತಂದ ಸೋಂಕು

ಒಂದು ವರ್ಷದ ಕೋವಿಡ್‌ ಅನುಭವ ಜನರಲ್ಲಿ ಒಂದಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ. ಕಷ್ಟವನ್ನು ಹೇಗೆ ಎದುರಿಸಬೇಕು ಎಂಬ ಪಾಠವನ್ನು ಕೋವಿಡ್‌ ಸರಿಯಾಗಿ ಕಲಿಸಿದೆ. ಮುಂದೆ ಏನಾಗುತ್ತದೆಯೋ ಎಂಬ ಭಯವೇ ನಮ್ಮನ್ನು ಸಾವಿದ ದವಡೆಗೆ ಸಿಲುಕಿಸುತ್ತದೆ ಎಂಬುದು ಮತ್ತೊಮ್ಮೆ ಸಾಬೀತು ಮಾಡಿದೆ. ಕೋವಿಡ್‌ ತಂದಿದ್ದ ಆರೋಗ್ಯ ಸಮಸ್ಯೆಗಿಂತಲೂ, ಅದರ ಭಯದಿಂದ ಮಾನಸಿಕವಾಗಿ ಕುಗ್ಗಿ ಹಲವು ಪ್ರಾಣ ಕಳೆದುಕೊಂಡಿರು.. ಧೈರ್ಯವಾಗಿದ್ದು ಸೋಂಕನ್ನು ಲಕ್ಷಾಂತರ ಮಂದಿ ಗೆದ್ದರು.

ಕೊರೊನಾ ವೈರಸ್‌ ಕಾರಣಕ್ಕೆ ದೇಶದ, ರಾಜ್ಯದ ಸಾರ್ವಜನಿಕ ಆರೋಗ್ಯ ಸೇವೆಗಳು ಗಣನೀಯವಾಗಿ ಸುಧಾರಿಸಿತು. ಸದಾ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದ ಚಾಮರಾಜನಗರದಂತಹ ಜಿಲ್ಲೆಯಲ್ಲೇ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿತವಾಯಿತು. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೇರಿತು.

ಕೋವಿಡ್‌ ಸೋಂಕಿತರನ್ನು ನೋಡುವ ದೃಷ್ಟಿಕೋನ ಕ್ರಮೇಣ ಬದಲಾಯಿತು. ಸೋಂಕಿತರು ಕೂಡ ‘ನಮ್ಮಲ್ಲೇ ಒಬ್ಬರು’ ಎಂಬ ಮನೋಭಾವನೆ ಜನರಲ್ಲಿ ಮೂಡಿತು. ‘ಕೊರೊನಾ ಸೇನಾನಿ’ಗಳ ಮೇಲಿನ ಗೌರವ ಇಮ್ಮಡಿಯಾಯಿತು. ನಗರ, ಪಟ್ಟಣಗಳ ಸ್ವಚ್ಛತೆಯಲ್ಲಿ ನಿರತರಾಗಿರುವ ಪೌರ ಕಾರ್ಮಿಕರ ಕಷ್ಟ ಹಾಗೂ ಅವರು ಮಾಡುವ ಕೆಲಸವನ್ನು ಜನರು, ಸಂಘ ಸಂಸ್ಥೆಗಳು, ಸರ್ಕಾರಗಳು ಗುರುತಿಸುವಂತಾಯಿತು.

ಕೋವಿಡ್‌ ಸೇನಾನಿಗಳನ್ನು ಗುರುತಿಸಿ, ಪುರಸ್ಕರಿಸಿದ ‘ಪ್ರಜಾವಾಣಿ’

ಕೋವಿಡ್‌ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಿವಿಧ ಕ್ಷೇತ್ರಗಳ ಕೊರೊನಾ ಸೇನಾನಿಗಳ ಪ್ರತಿನಿಧಿಗಳನ್ನು ರಾಜ್ಯದಾದ್ಯಂತ ಗುರುತಿಸಿ ಅವರನ್ನು ಪುರಸ್ಕರಿಸುವ ಕೆಲಸವನ್ನು ‘ಪ್ರಜಾವಾಣಿ’ಯೂ ಈ ವರ್ಷ ಮಾಡಿದೆ. ಮೈಸೂರಿನ ಕಲಾಮಂದಿರದ ‘ಮನೆಯಂಗಳ’ದಲ್ಲಿ ಜನವರಿ 30ರಂದು ಪೌರಕಾರ್ಮಿಕರಿಂದ ಹಿಡಿದು ವೈದ್ಯರವರೆಗೆ ಎಲ್ಲ ಕ್ಷೇತ್ರಗಳ ಪ್ರತಿನಿಧಿಗಳು ‘ಪ್ರಜಾವಾಣಿ–ಕೊರೊನಾ ಸೇನಾನಿಗಳು–2021’ ಪುರಸ್ಕಾರ ಪಡೆಯುತ್ತಿದ್ದರೆ, ವರ್ಷದ ಘಟನಾವಳಿಗಳೆಲ್ಲ ಸ್ಮೃತಿ ಪಟಲದಲ್ಲಿ ಹಾದು ಹೋದವು.

‘ಕೊರೊನಾ ಸೇನಾನಿಗಳು ಕೂಡ ಆರಂಭದಲ್ಲಿ ಭಯದಿಂದಲೇ ಕೆಲಸ ಮಾಡಿದ್ದರು. ಆದರೆ, ನಾವು ಭಯ ಪಡಲಿಲ್ಲ. ಅನ್ನದ ದುಡಿಮೆಗಾಗಿ ಭಯ ಇಲ್ಲದೆ ಕೆಲಸ ಮಾಡುತ್ತೇವೆ. ಹಿಂದೆ ಪೌರಕಾರ್ಮಿಕರನ್ನು ಜನರು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಈಗ ಗುರುತಿಸುತ್ತಿದ್ದಾರೆ’ ಎಂದು ಪುರಸ್ಕಾರ ಸ್ವೀಕರಿಸಿದ ಹಾಸನದ ಪೌರಕಾರ್ಮಿಕರಾದ ಅನುರಾಧಾ ಅವರು ಹೇಳಿದಾಗ ಕೋವಿಡ್‌ ಜನರಲ್ಲಿ ತಂದ ಬದಲಾವಣೆ ಏನು ಎಂಬುದು ಮನದಟ್ಟಾಯಿತು.

‘ಸಣ್ಣ ಸಣ್ಣ ದೇಶಗಳಿಗೂ ಕೋವಿಡ್‌ ನಿಭಾಯಿಸಲು ಸಾಧ್ಯವಾಗಿಲ್ಲ. ಅಂತಹದ್ದರಲ್ಲಿ ಬೃಹತ್‌ ಜನಸಂಖ್ಯೆ ಇರುವ ನಮ್ಮಲ್ಲಿ ಇದು ಸಾಧ್ಯವಾಗಿದೆ ಎಂದರೆ, ಅದಕ್ಕೆ ಪ್ರತಿಯೊಬ್ಬರೂ ಕಾರಣ. ಸಂಘ ಸಂಸ್ಥೆಗಳು, ಪೌರಕಾರ್ಮಿಕರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ. ಸ್ವಯಂ ರಕ್ಷಣೆಯನ್ನು ಮರೆತು ಕೆಲಸ ಮಾಡಿದ ಎಲ್ಲರಲ್ಲೂ ಇಲ್ಲಿ ಸ್ಮರಿಸಬೇಕು. ನಾವು ಉದ್ಯೋಗಿಗಳಾಗಿ ಕೆಲಸ ಮಾಡಿದ್ದೇವೆ. ಆದರೆ, ಹಲವಾರು ಸ್ವಯಂ ಸಂಘ ಸಂಸ್ಥೆಗಳು ನಿಸ್ವಾರ್ಥವಾಗಿ ದುಡಿದಿವೆ. ಸಂಪನ್ಮೂಲದ ಕೊರತೆ ಇದ್ದರೂ, ಅದನ್ನು ನಿಭಾಯಿಸಿ ಕೆಲಸ ಮಾಡಲು ನಮಗೆ ಸಾಧ್ಯವಾಗಿದೆ. ಮೊದಲ 10 ದಿನಗಳ ಕಾಲ ಜನರಿಗೆ ಮಾಸ್ಕ್‌ ಧರಿಸಿ ಎಂದು ಹೇಳುವುದೇ ಕಷ್ಟವಾಗಿತ್ತು. ಈಗ ನೋಡಿ, ಪ್ರತಿಯೊಬ್ಬರೂ ಮಾಸ್ಕ್‌ ಧರಿಸುತ್ತಿದ್ದಾರೆ. ಕೋವಿಡ್‌ನಿಂದಾಗಿ ಜನರು ಸ್ವಯಂ ರಕ್ಷಣೆಯ ಮಹತ್ವ ಕಲಿತಿದ್ದಾರೆ’ ಎಂಬ ಸ್ವಯಂ ಕೊರೊನಾ ಸೇನಾನಿಯಾಗಿದ್ದ ಮೈಸೂರು ಎಸ್‌ಪಿ ಸಿ.ಬಿ.ರಿಷ್ಯಂತ್‌ ಅವರ ಮಾತು, ಕೋವಿಡ್‌ ಕಲಿಸಿದ ಪಾಠಗಳನ್ನು ಮತ್ತೊಮ್ಮೆ ದೃಢಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT