ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ದೇವಾಲಯಗಳಲ್ಲಿ ದರ್ಶನಕ್ಕಷ್ಟೇ ಅವಕಾಶ

ಕೋವಿಡ್‌ ತಡೆ: ವಸತಿಗೃಹಗಳಲ್ಲಿ ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ
Last Updated 3 ಆಗಸ್ಟ್ 2021, 16:42 IST
ಅಕ್ಷರ ಗಾತ್ರ

ಚಾಮರಾಜನಗರ: ನೆರೆಯ ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ನಿರ್ಬಂಧಗಳನ್ನು ವಿಧಿಸಿ ಜಿಲ್ಲಾಧಿಕಾರಿ ಅವರು ಹೊರಡಿಸಿರುವ ಆದೇಶದ ಅನುಸಾರ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ಪ್ರತಿ ದಿನ 5 ರಿಂದ ರಾತ್ರಿ 10 ಗಂಟೆಯವರೆಗೆ (ಅಭಿಷೇಕ ಮತ್ತು ಅಲಂಕಾರದ ಸಮಯ ಬಿಟ್ಟು) ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಉಳಿದಂತೆ ದಾಸೋಹ ವ್ಯವಸ್ಥೆ, ಪ್ರಸಾದ ವಿವಿಧ ಉತ್ಸವ, ಮುಡಿಸೇವೆ, ಲಾಡು ಪ್ರಸಾದ ಸೇರಿದಂತೆ ಎಲ್ಲ ರೀತಿಯ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ಹೇಳಿದ್ದಾರೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲೂ ಮಂಗಳವಾರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಯಿತು. ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯ ಗುಂಡ್ಲುಪೇಟೆಯ ಹಿಮವದ್‌ಗೋಪಾಲಸ್ವಾಮಿ ದೇವಾಲಯದಲ್ಲೂ ಭಕ್ತರು ‌ದೇವರ ದರ್ಶನವನ್ನು ಮಾತ್ರ ಪಡೆದರು.

ಆರ್‌ಟಿಪಿಸಿಆರ್‌ ವರದಿ ಕಡ್ಡಾಯ: ಜಿಲ್ಲೆ ವ್ಯಾಪ್ತಿಯಲ್ಲಿರುವ ಬರುವ ಎಲ್ಲ ಲಾಡ್ಜ್‌, ರೆಸಾರ್ಟ್‌, ಹೋಂ ಸ್ಟೇ, ವಸತಿ ಗೃಹ, ಅರಣ್ಯ ವಸತಿಗೃಹಗಳಲ್ಲಿ ಉಳಿದುಕೊಳ್ಳಲು 72 ಗಂಟೆಗಳ ಒಳಗಾಗಿ ಮಾಡಿಸಿರುವ ಆರ್‌ಟಿ–ಪಿಸಿಆರ್ ಪರೀಕ್ಷೆಯ ನೆಗೆಟಿವ್‌ ವರದಿಯನ್ನು ತೋರಿಸುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ’

ಅದರಂತೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವಸತಿಗೃಹಗಳಲ್ಲಿ ತಂಗಲು ಸಿಬ್ಬಂದಿ ಭಕ್ತರಲ್ಲಿ ನೆಗೆಟಿವ್‌ ವರದಿಯನ್ನು ಕೇಳುತ್ತಿದ್ದಾರೆ. ಅರಣ್ಯ ಇಲಾಖೆಯ ವಸತಿ ಗೃಹಗಳಲ್ಲೂ ಈ ನಿಯಮ ಜಾರಿಗೆ ಬಂದಿದೆ. ಜಂಗಲ್‌ ಅಂಡ್‌ ಲಾಡ್ಜಸ್ಟ್‌ ರೆಸಾರ್ಟ್‌ನಲ್ಲೂ ಸಿಬ್ಬಂದಿ ಪ್ರವಾಸಿಗರಿಂದ ನೆಗೆಟಿವ್‌ ವರದಿ ಕೇಳುತ್ತಿದ್ದಾರೆ.

ಬಂಡೀಪುರ ಹಾಗೂ ಬಿಳಿಗಿರಿರಂಗನಬೆಟ್ಟದ ವ್ಯಾಪ್ತಿಯಲ್ಲಿ ರೆಸಾರ್ಟ್‌ಗಳು ಹಾಗೂ ಹೋಂ ಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಉಳಿದ ದಿನಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಬರುತ್ತಾರೆ.

ಬಿಳಿಗಿರಿರಂಗನಬೆಟ್ಟದ ಗೊರುಕನ ರೆಸಾರ್ಟ್‌ಗೆ ಬರುವ ಪ್ರವಾಸಿಗರು ನೆಗಟಿವ್‌ ವರದಿ ಇಲ್ಲದಿದ್ದರೆ, ಅವರನ್ನು ವೈದ್ಯರಿಂದ ತಪಾಸಣೆ ಮಾಡಿ ಕೋವಿಡ್‌ ಪರೀಕ್ಷೆ ನಡೆಸಿದ ನಂತರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.

ಸಫಾರಿಗೆ ವರದಿ ಕಡ್ಡಾಯ: ಗೊಂದಲ
ಈ ಮಧ್ಯೆ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೊರಡಿಸಿರುವ ಆದೇಶದಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರು ಕೂಡ ಆರ್‌ಟಿ–ಪಿಸಿಆರ್‌ ನೆಗಟಿವ್‌ ವರದಿ ತೋರಿಸಬೇಕು ಎಂದು ಹೇಳಲಾಗಿದೆ.

ಈ ವಿಚಾರವಾಗಿ ಗೊಂದಲ ಉಂಟಾಗಿದ್ದು, ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಆದೇಶ ಇನ್ನೂ ತಲುಪಿಲ್ಲ ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

‘ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಫಾರಿಗೆ ಬರುವವರಿಗೆ ಆರ್‌ಟಿ–ಪಿಸಿಆರ್‌ ನೆಗೆಟಿವ್ ವರದಿ ಇರಬೇಕು. ಮಂಗಳವಾರ ಬೆಳಿಗ್ಗೆ ಸಫಾರಿಗೆ ಅನೇಕರು ನೆಗೆಟಿವ್ ವರದಿ ತಂದಿರಲಿಲ್ಲ. ಅಂತಹರಿಗೆ ಸಫಾರಿಗೆ ಅವಕಾಶ ನೀಡದೆ ಕಳುಹಿಸಿದ್ದೇವೆ’ ಎಂದು ವಲಯ ಅರಣ್ಯ ಅಧಿಕಾರಿ ನವೀನ್‌ ಕುಮಾರ್‌ ಅವರು ತಿಳಿಸಿದರು.

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು, ‘ಅರಣ್ಯ ವಸತಿ ಗೃಹಗಳನ್ನು ಕಾಯ್ದಿಸಿರುವವರಿಗೆ ಆರ್‌ಟಿ–ಪಿಸಿಆರ್‌ ವರದಿ ಹೊಂದಿರುವುದನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಸಫಾರಿಗೂ ವರದಿ ಬೇಕು ಎಂಬುದನ್ನು ಆದೇಶದಲ್ಲಿ ಗಮನಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡುತ್ತೇನೆ’ ಎಂದು ಹೇಳಿದರು.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ಸಂತೋಷ್‌ಕುಮಾರ್‌ ಅವರು ಪ್ರತಿಕ್ರಿಯಿಸಿ, ‘ಕೆ.ಗುಡಿ ಸಫಾರಿ ಕೇಂದ್ರದಲ್ಲಿ ಈಗಾಗಲೇ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೊಸ ಆದೇಶ ಈಗಷ್ಟೇ ತಲುಪಿದ್ದು, ಪರಿಶೀಲಿಸಿ ಅದರಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT