ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಪಾಸ್‌

Published 11 ನವೆಂಬರ್ 2023, 5:55 IST
Last Updated 11 ನವೆಂಬರ್ 2023, 5:55 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಇದೇ ಮೊದಲ ಬಾರಿಗೆ, ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ತಾಳಬೆಟ್ಟದಲ್ಲಿ ಅನ್ನಸಂತರ್ಪಣೆ ಮತ್ತು ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆಯಲ್ಲಿ ಬರುವಂತಹ ಭಕ್ತರಿಗೆ ಉಚಿತ ಸೌಲಭ್ಯಕ್ಕಾಗಿ ಪಾಸ್ ವ್ಯವಸ್ಥೆ ಮಾಡಿದೆ. 

ದೀಪಾವಳಿ ಜಾತ್ರೆಯ ಸಮಯದಲ್ಲಿ ಮಲೆ ಮಹದೇಶ್ವರಸ್ವಾಮಿಯ ದರ್ಶನ ಪಡೆಯುವುದಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಬರುತ್ತಾರೆ. 

ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಬೆಂಗಳೂರು, ಆನೇಕಲ್, ರಾಮನಗರ, ಇನ್ನಿತರ ಭಾಗಗಳ ಭಕ್ತರ ವೃಂದ ಸ್ವಯಂಪ್ರೇರಿತರಾಗಿ  ದಾರಿ ಮಧ್ಯೆ ಅನ್ನ ಸಂತರ್ಪಣೆ ಮಾಡುತ್ತಿದ್ದರು. ಈ ಬಾರಿ ಪ್ರಾಧಿಕಾರವೇ ತಾಳಬೆಟ್ಟದಲ್ಲಿ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಿದೆ.

ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ನೇತೃತ್ವದಲ್ಲಿ ಹೊಸ ಯೋಜನೆ ರೂಪುಗೊಂಡಿದೆ. ಈವರೆಗೂ ಪ್ರಾಧಿಕಾರ ದಾರಿ ಮಧ್ಯೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾತ್ರ ಮಾಡುತ್ತಿತ್ತು. 

ಮೂರು ಪಾಸ್‌ ವ್ಯವಸ್ಥೆ

ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಬೆಟ್ಟದಲ್ಲಿ ಸುಲಭವಾಗಿ ಸ್ವಾಮಿಯ ದರ್ಶನ ಆಗುವಂತೆ ಮಾಡು, ಊಟದ ವ್ಯವಸ್ಥೆ ಹಾಗೂ ಉಚಿತವಾಗಿ ಉಳಿದುಕೊಳ್ಳುವುದಕ್ಕೆ ವಸತಿ ವ್ಯವಸ್ಥೆಗಾಗಿ ತಿರುಪತಿ ಮಾದರಿಯಲ್ಲಿ ಪಾಸ್‌ ನೀಡುವ ವ್ಯವಸ್ಥೆಗೂ ಶುಕ್ರವಾರ ಪ್ರಾಧಿಕಾರ ಚಾಲನೆ ನೀಡಿದೆ. 

ಕಾಲ್ನಡಿಗೆಯಲ್ಲಿ ಬಂದ ಭಕ್ತರು ಪಾಸ್‌ ತೋರಿಸಿ, ಗುರು ದರ್ಶಿನಿ, ಮಾದೇಶ್ವರ ಕನ್ವೆನ್ಷನ್‌ ಹಾಲ್ ಮತ್ತು ನೂತನವಾಗಿ ನಿರ್ಮಿಸಿರುವ ಡಾರ್ಮೆಟರಿ ಸೇರಿದಂತೆ ಇತರೆ ಖಾಲಿ ಇರುವ ವಸತಿ ಗೃಹಗಳಲ್ಲಿ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ದೇವರ ದರ್ಶನದ ಪಾಸ್‌ ಹೊಂದಿರುವ ಭಕ್ತರು ದೇವಾಲಯದ 1 ನಂಬರಿನ ಸರತಿ ಸಾಲಿನಲ್ಲಿ ಸಾಗಿ ನೇರವಾಗಿ ಮಹದೇಶ್ವರ ಸ್ವಾಮಿಯ ದರ್ಶನ ಮಾಡಬಹುದು. 

ಹೊಸ ವ್ಯವಸ್ಥೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ‘ಈ ಹಿಂದೆ ಕಾಲ್ನಡಿಗೆಯಲ್ಲಿ ಬಂದ ಭಕ್ತರು ಹಾಗೂ ವಾಹನಗಳಲ್ಲಿ ಬರುವ ಭಕ್ತರು ಯಾರು ಎಂಬುದು ತಿಳಿಯದೇ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಜೊತೆ ಇತರರು  ಸರತಿ ಸಾಲಿನಲ್ಲಿ ಜನ ಜಂಗುಳಿ ಉಂಟಾಗಿ ಗಲಾಟೆಗಳಾಗುತ್ತಿದ್ದವು. ಇದನ್ನು ತಪ್ಪಿಸಲು ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಕಾಲ್ನಡಿಗೆಯಲ್ಲಿ ಬರುವ ಭಕ್ತರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ’ ಎಂದರು. 

‘ಶುಕ್ರವಾರ ಕಾಲ್ನಡಿಗೆಯಲ್ಲಿ ಬಂದ 884 ಭಕ್ತರಿಗೆ ಟಿಕೆಟ್ ಪಾಸ್‌ ವಿತರಿಸಲಾಗಿದ್ದು, ಶನಿವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವವರಿದ್ದು, ಅದಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ’ ಎಂದು ವಿವರಿಸಿದರು. 

ಭಕ್ತರ ಸಂತಸ

ಈ ಮಧ್ಯೆ ಪ್ರಾಧಿಕಾರ ರೂಪಿಸಿರುವ ಹೊಸ ವ್ಯವಸ್ಥೆಗೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಮಲೆಯೂರಿಂದ ಕಾಲ್ನಡಿಗೆಯಲ್ಲಿ ಬಂದಿದ್ದ ಭಕ್ತರು ಮಾತನಾಡಿ ‘ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಪ್ರಾಧಿಕಾರದ ವತಿಯಿಂದ ಊಟದ ವ್ಯವಸ್ಥೆ ಹಾಗೂ ನೇರ ದೇವರ ದರ್ಶನ ಮತ್ತು ಉಚಿತ ವಸತಿಯನ್ನು ಕಲ್ಪಿಸಿರುವುದು ತುಂಬಾ ಸಂತಸ ತಂದಿದೆ. ಹಲವಾರು ವರ್ಷಗಳಿಂದ ನಾವು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುತಿದ್ದು ನಮಗೆ ಉಳಿದುಕೊಳ್ಳಲು ವ್ಯವಸ್ಥೆಯಾಗಲಿ ಊಟದ ವ್ಯವಸ್ಥೆಗೆ ಅಥವಾ ದೇವರ ದರ್ಶನ ಪಡೆಯಲು ಕಷ್ಟವಾಗುತ್ತಿತ್ತು. ರಾತ್ರಿ ವೇಳೆ ರಂಗಮಂದಿರದ ಆವರಣ ಹಾಗೂ ಶಾಲಾ ಅವರಣದಲ್ಲಿ ಮಳೆಯಾಗಲಿ ಬಿಸಿಲಾಗಲಿ ಸಣ್ಣ ಸಣ್ಣ ಮಕ್ಕಳು ಹಾಗೂ ಹೆಂಗಸರ ಜೊತೆ ಬಹಳ ಕಷ್ಟದಿಂದ ಉಳಿದುಕೊಳ್ಳಬೇಕಾಗಿತ್ತು. ಹೊಸ ವ್ಯವಸ್ಥೆಯಿಂದ ಅನುಕೂಲವಾಗಿದೆ’ ಎಂದರು. 

ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ನೀಡಲಾಗುತ್ತಿರುವ ಪಾಸ್‌
ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ನೀಡಲಾಗುತ್ತಿರುವ ಪಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT