ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ತೆರಕಣಾಂಬಿ ಪದವಿ ಕಾಲೇಜು ಸ್ಥಳಾಂತರಕ್ಕೆ ವಿರೋಧ

ಶಾಸಕರ ವಿರುದ್ಧ ಆಕ್ರೋಶ, ವಿದ್ಯಾರ್ಥಿಗಳ ಕೊರತೆಯಿಂದ ಸ್ಥಳಾಂತರ–ನಿರಂಜನಕುಮಾರ್‌
Last Updated 21 ಜುಲೈ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿಯಲ್ಲಿರುವ ಸರ್ಕಾರಿ ಪದವಿ ಕಾಲೇಜು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾಗಿದೆ.

ಶಾಸಕ ಸಿ.ಎಸ್.ನಿರಂಜನಕುಮಾರ್‌ ಅವರು ಕಾಲೇಜು ಉಳಿಸಲು ಪ್ರಯತ್ನ ಪಟ್ಟಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ. ಆದರೆ, ಕಾಲೇಜು ಸ್ಥಳಾಂತರ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಸ್ಪಷ್ಟಪಡಿಸಿರುವ ನಿರಂಜನಕುಮಾರ್‌ ಅವರು, ವಿದ್ಯಾರ್ಥಿಗಳ ಕೊರತೆ ಇರುವುದರಿಂದ ಅನಿವಾರ್ಯವಾಗಿ ಸ್ಥಳಾಂತರವಾಗುತ್ತಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆಹನೂರು ಪದವಿ ಕಾಲೇಜಿನೊಂದಿಗೆ ಈ ಕಾಲೇಜನ್ನು ಸಿಬ್ಬಂದಿ ಸಮೇತ ಸ್ಥಳಾಂತರ ಮಾಡುವ ಬಗ್ಗೆ ಮೊದಲ ಆದೇಶ ಬಂದಾಗ‌ ಜನಪ್ರತಿನಿಧಿಗಳು, ರೈತ ಸಂಘಟನೆಗಳು ವಿರೋಧಿಸಿದ್ದರು.

ಮೇ ತಿಂಗಳ 18ರಂದು ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶದಲ್ಲಿ ಬೆಳಗಾವಿ ಜಿಲ್ಲೆಯ ಕುಡುಚಿಗೆ ಸ್ಥಳಾಂತರಗೊಳ್ಳಲಿದೆ ಎಂದು ಹೇಳಲಾಗಿತ್ತು. ಜುಲೈ 20ರಂದು ಹೊರಡಿಸಲಾದ ಪರಿಷ್ಕೃತ ಆದೇಶದಲ್ಲಿ ರಾಯಭಾಗ ತಾಲ್ಲೂಕಿನ ಹಾರೂಗೇರಿಗೆ ಸ್ಥಳಾಂತರ ಮಾಡಲಾಗಿದೆ.

ಸಚಿವರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಅವರ ಪ್ರಯತ್ನದಿಂದ 2014–15ನೇ ಸಾಲಿನಲ್ಲಿ ಕಾಲೇಜು ಪ್ರಾರಂಭವಾಗಿತ್ತು. ಮೊದಲ ವರ್ಷ 45 ವಿದ್ಯಾರ್ಥಿಗಳು ದಾಖಲಾಗಿದ್ದರು.

ವಿದ್ಯಾರ್ಥಿಗಳ ಕೊರತೆ: ತಾಲ್ಲೂಕಿನಲ್ಲಿ ನಾಲ್ಕು ಸರ್ಕಾರಿ ಪದವಿ ಕಾಲೇಜುಗಳು ಇವೆ. ಉನ್ನತ ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ, ಕನಿಷ್ಠ 100 ವಿದ್ಯಾರ್ಥಿಗಳು ಮೂರು ವರ್ಷ ಕಾಲೇಜಿಗೆ ದಾಖಲಾಗಬೇಕು. ಹಾಗಿದ್ದರೆ ಕಾಲೇಜನ್ನು ಉಳಿಸಬಹುದು. ಆದರೆ, ತೆರ‌ಕಣಾಂಬಿ ಕಾಲೇಜು ಪ್ರತಿ ವರ್ಷ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿತ್ತು. ಸದ್ಯ 51 ವಿದ್ಯಾರ್ಥಿಗಳು (ಮೊದಲ ವರ್ಷ 31, ದ್ವಿತೀಯ ವರ್ಷ 12 ಮತ್ತು ತೃತೀಯ ವರ್ಷದಲ್ಲಿ ಎಂಟು ವಿದ್ಯಾರ್ಥಿಗಳು) ಕಾಲೇಜಿನಲ್ಲಿದ್ದಾರೆ.

ರಾಜ್ಯದಾದ್ಯಂತ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಕಾಲೇಜುಗಳನ್ನೆಲ್ಲ ಅಗತ್ಯವಿರುವ ಕಡೆಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಅದೇ ರೀತಿಯಲ್ಲಿ ಈ ಕಾಲೇಜು ಕೂಡ ಬೇರೆ ಕಡೆ ಸ್ಥಳಾಂತರಗೊಂಡಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಶಾಸಕರ ವೈಫಲ್ಯ: ಈ ವಿಚಾರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ಗಣೇಶ್‌ ಪ್ರಸಾದ್‌ ಅವರು, ‘ಇರುವ ಕಾಲೇಜನ್ನು ಉಳಿಸಿಕೊಳ್ಳಲು ಆಗಿಲ್ಲ ಎಂದರೆ, ಇದರಲ್ಲಿ ಶಾಸಕರ ವೈಫಲ್ಯ ಎದ್ದು ಕಾಣುತ್ತದೆ. ಮುಂದೆ ಇಂತಹ ಕಾಲೇಜನ್ನು ಕ್ಷೇತ್ರಕ್ಕೆ ತರಲು ಆಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರಿಗೆ ಕಾಲೇಜು ಉಳಿಸಿಕೊಳ್ಳಲು ಆಗಲಿಲ್ಲ ಎಂದರೆ ಏನು ಹೇಳೋಣ? ಆಡಳಿತ ಪಕ್ಷದ ಶಾಸಕರಾಗಿ ಇದ್ದುಕೊಂಡು ಏನು ಪ್ರಯೋಜನ ಆಯಿತು’ ಎಂದು ಎಂದು ರೈತ ಮುಖಂಡ ಕಡಬೂರು ಮಂಜುನಾಥ್ ಅವರು ಕೇಳಿದರು.

‘ದುರುದ್ದೇಶವಿಲ್ಲ, ಉಳಿಸಲು ಪ್ರಯತ್ನಿಸಿದ್ದೇನೆ’
ಲೇಜು ಸ್ಥಳಾಂತರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು, ‘ತೆರಕಣಾಂಬಿ ಕಾಲೇಜು ಬೇರೆ ಕಡೆಗೆ ಸ್ಥಳಾಂತರವಾಗುತ್ತದೆ ಎಂಬ ಆದೇಶ ಬಂದಾಗಲೇ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ ಅವರನ್ನು ಹಲವು ಬಾರಿ ಭೇಟಿ ಮಾಡಿ ಸ್ಥಳಾಂತರ ಮಾಡದಂತೆ ಮನವಿ ಮಾಡಿದ್ದೆ. ಅಧಿಕಾರಿಗಳಿಂದ ಅವರು ಮಾಹಿತಿಯನ್ನೂ ಪಡೆದಿದ್ದರು. ಪರಿಷ್ಕೃತ ಆದೇಶ ಬಂದ ತಕ್ಷಣ ಮತ್ತೆ ಕರೆ ಮಾಡಿದೆ. ಅದಕ್ಕೆ ಅವರು, ‘ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಹಾಗಾಗಿ, ಬೇರೆ ಕಡೆಗೆ ವರ್ಗಾಯಿಸಬೇಕಾಗಿದೆ’ ಎಂದು ಮಾಹಿತಿ ನೀಡಿದರು’ ಎಂದು ಹೇಳಿದರು.

ಕಾಲೇಜಿಗೆ ಕಟ್ಟಡವಿರುವುದರಿಂದ ಆ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿಕೌಶಲ ತರಬೇತಿ ಕೇಂದ್ರ ಪ್ರಾರಂಭಿಸೋಣ ಹಾಗೂ ಸಂಜೆ ಪದವಿ ಕಾಲೇಜನ್ನು ಪ್ರಾರಂಭ ಮಾಡೋಣ ಎಂದು ಸಚಿವರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳ ಕೊರತೆಯಿಂದ ಕಾಲೇಜು ಸ್ಥಳಾಂತರವಾಗಿದೆಯೇ ವಿನಾ ಇದರಲ್ಲಿ ಬೇರೆ ಯಾವುದೇ ದುರುದ್ದೇಶವಿಲ್ಲ. ಕಾಲೇಜು ಉಳಿಸಿಕೊಳ್ಳಲು ಶಾಸಕನಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT