ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಹೆಚ್ಚಿದ ಕೇರಳ ಲಾಟರಿ ಹಾವಳಿ

ಕೇರಳದಿಂದ ತರುವ ದಲ್ಲಾಳಿಗಳು, ಕೂಲಿ ಕಾರ್ಮಿಕರಿಂದ ಖರೀದಿ, ಹಣ ಪೋಲು
Last Updated 24 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಕೇರಳದ ಲಾಟರಿ ಹಾವಳಿ ಹೆಚ್ಚಾಗಿದ್ದು, ಅನೇಕರು ಕೆಲಸ ಬಿಟ್ಟು ಲಾಟರಿ ಹುಚ್ಚಿಗೆ ಬಿದ್ದು ಖರೀದಿ ಮಾಡುತ್ತಿದ್ದಾರೆ.

ಗುಂಡ್ಲುಪೇಟೆ, ಹಂಗಳ, ಬೇಗೂರು ಮತ್ತು ತೆರಕಣಾಂಬಿ ಹೋಬಳಿಯ ವ್ಯಾಪ್ತಿಯಲ್ಲಿ ಅನೇಕರು ಲಾಭದ ಆಸೆಗೆ ಕೇರಳದ ಲಾಟರಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಕರು, ಕೂಲಿ ಕಾರ್ಮಿಕರು ಪ್ರತಿದಿನ ಲಾಟರಿ ಕೊಂಡು ಹಣ ಕಳೆದುಕೊಳ್ಳುತ್ತಿದ್ದಾರೆ.

‘ಪೊಲೀಸರು ಸೇರಿದಂತೆ ಗುಪ್ತ ಮಾಹಿತಿ ಸಿಬ್ಬಂದಿಗಳಿಗೆ ಲಾಟರಿ ಮಾರಾಟದ ಬಗ್ಗೆ ಮಾಹಿತಿ ಇದ್ದರೂ ತಡೆಗೆ ಕ್ರಮವಹಿಸುತ್ತಿಲ್ಲ’ ಎಂಬುದು ಸಾರ್ವಜನಿಕರ ದೂರು.

ಲಾಟರಿ ಹಾವಳಿ ಹಿಂದಿನಿಂದಲೂ ಇದೆ. ಮಾರಾಟ ಮಾಡುವವರನ್ನು ಪೊಲೀಸರು ಬಂಧಿಸುತ್ತಲೂ ಇದ್ದರು. ಆದರೆ, ವರ್ಷದಿಂದ ಗ್ರಾಮೀಣ ಪ್ರದೇಶಗಳಲ್ಲೂ ಲಾಟರಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.

ತಾಲ್ಲೂಕಿನಿಂದ ಅನೇಕರು ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕೂಲಿಗೆ ಹೋಗುತ್ತಾರೆ. ಆದರೆ, ದುಡಿದ ಅರ್ಧದಷ್ಟು ಹಣದಲ್ಲಿ ಲಾಟರಿ ಕೊಂಡುಬರುತ್ತಾರೆ. ಅಲ್ಲದೆ ತಾಲ್ಲೂಕಿನಲ್ಲಿ ಕೆಲ ದಲ್ಲಾಳಿಗಳು ಇದ್ದಾರೆ. ಬೆಳಿಗ್ಗೆಯೇ ಕೇರಳಕ್ಕೆ ಹೋಗಿ ಲಾಟರಿ ಟಿಕೆಟ್‌ಕೊಂಡು ಬಂದು ಮಾರಾಟ ಮಾಡುತ್ತಾರೆ.

ಮೂಲೆ ಹೊಳೆಯಲ್ಲಿರುವ ರಾಜ್ಯದ ಗಡಿ ಪ್ರದೇಶದ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಸಮರ್ಪಕವಾಗಿ ತಪಾಸಣೆ ಮಾಡದೇ ಇರುವುದರಿಂದ ಲಾಟರಿ ತಾಲ್ಲೂಕು ಪ್ರವೇಶಿಸುತ್ತದೆ ಎಂಬುದು ನಾಗರಿಕರ ಆರೋಪ.

ತಾಲ್ಲೂಕಿನಲ್ಲಿ ಕೂಲಿ ಮಾಡುವ ಕಾರ್ಮಿಕರು ಪ್ರತಿದಿನ ಲಾಟರಿ ದಲ್ಲಾಳಿಗಳ ಜೊತೆಗೆ ಸಂಪರ್ಕದಲ್ಲಿದ್ದುಕೊಂಡು ಪ್ರತಿ ದಿನ ಲಾಟರಿ ಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ₹500, ₹1000 ಲಾಟರಿ ಹೊಡೆಯುವುದಕ್ಕೆ ಪ್ರತಿದಿನ ಹಣ ಕಳೆದುಕೊಳ್ಳತ್ತಾರೆ.

ಪೊಲೀಸ್‌ ವೈಫಲ್ಯ: ಆರೋಪ

ತಾಲ್ಲೂಕಿನಲ್ಲಿ ಎಲ್ಲಿ, ಏನು ಅಕ್ರಮ ನಡೆಯುತ್ತದೆ ಎಂಬುದು ಎಲ್ಲ ಠಾಣೆಯ ಗುಪ್ತ ಮಾಹಿತಿ ಸಂಗ್ರಹ ಮಾಡುವ ಸಿಬ್ಬಂದಿ ಗಮನಕ್ಕೆ ಬರುತ್ತದೆ. ಆದರೆ, ಕ್ರಮ ಕೈಗೊಳ್ಳುತ್ತಿಲ್ಲ. ಇವರ ವೈಫಲ್ಯದಿಂದಾಗಿ ತಾಲ್ಲೂಕಿನಾದ್ಯಂ‌ತ ಇಸ್ಪೀಟ್, ಮದ್ಯದಅಕ್ರಮ ಮಾರಾಟ, ಪಡಿತರ ಅಕ್ಕಿ ಮಾರಾಟ ಮತ್ತು ಲಾಟರಿ ದಂಧೆಗಳು ನಡೆಯುತ್ತಲೇ ಇವೆ. ಮಾದ್ಯಮಗಳಲ್ಲಿ ಸುದ್ದಿಯಾದಾಗ ಕೆಲವರನ್ನು ಬಂಧಿಸುತ್ತಾರೆ. ಕೆಲವು ದಿನಗಳ ನಂತರ ದಂಧೆ ಮತ್ತೆ ಆರಂಭವಾಗುತ್ತದೆ’ ಎಂದು ಪುರಸಭೆ ಸದಸ್ಯ ರಾಜ್ ಗೋಪಾಲ್ ಆರೋಪಿಸಿದರು.

--

ಲಾಟರಿ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ತಿಂಗಳು ನಾಲ್ಕು ಪ್ರಕರಣ ದಾಖಲಿಸಿದ್ದೇವೆ. ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು.

ಪ್ರಿಯದರ್ಶಿನಿ ಸಾಣಿಕೊಪ್ಪ, ಡಿವೈಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT