ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹50 ಲಕ್ಷ ಮೌಲ್ಯದ ಪಾನ್‌ಮಸಾಲ ಕಳ್ಳತನ; ಒಬ್ಬನ ಸೆರೆ

ನಾಲ್ಕು ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು, ಮಾಲು ಸಮೇತ ಮೂರು ವಾಹನಗಳ ಜಪ್ತಿ
Last Updated 23 ನವೆಂಬರ್ 2020, 17:16 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಕೋಳಿಪಾಳ್ಯದ ಬಳಿ ಇದ್ದ ಗೋದಾಮಿನಲ್ಲಿಭಾನುವಾರ ರಾತ್ರಿ ನಡೆದಿದ್ದ ₹50 ಲಕ್ಷ ಮೌಲ್ಯದ ಪಾನ್ ‌ಮಸಾಲ ಕಳ್ಳತನ ಪ್ರಕರಣವನ್ನು ಪೊಲೀಸರು ನಾಲ್ಕು ಗಂಟೆಗಳಲ್ಲಿ ಭೇದಿಸಿದ್ದಾರೆ.

ಎರಡು ಐಶರ್‌ ಲಾರಿ ಹಾಗೂ ಒಂದು ದೋಸ್ತ್‌ ವಾಹನದಲ್ಲಿ ಸಾಗಾಟ ಮಾಡಲಾಗುತ್ತಿದ್ದ ಗುಟ್ಕಾವನ್ನು ಪತ್ತೆ ಮಾಡಿರುವ ಪೊಲೀಸರು ಒಬ್ಬನನ್ನು ಬಂಧಿಸಿ, ಮೂರು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ಪ್ರಕರಣದಲ್ಲಿ 10ರಿಂದ 12 ಆರೋಪಿಗಳು ಭಾಗಿಯಾಗಿದ್ದು, ಒಬ್ಬನನ್ನು ಬಿಟ್ಟು ಉಳಿದವರು ತಲೆಮರೆಸಿಕೊಂಡಿದ್ದಾರೆ. ಬಂಧಿತನನ್ನು ತಮಿಳುನಾಡಿನ ತಿರ್‌ಪುರ್‌ ಜಿಲ್ಲೆಯ ಧರ್ಮಪುರಿ ತಾಲ್ಲೂಕಿನ ಅಬುತಲ್ಲಾ (21) ಎಂದು ಗುರುತಿಸಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದರು.

‘ರಾಜಸ್ಥಾನದವರಾದ 35 ವರ್ಷದ ಜೆ.ಬವರ್‌ಲಾಲ್‌ ಅವರು ಮಹಾವೀರ ಮಾರ್ಕೆಟಿಂಗ್‌ ಪಾನ್‌ ಮಸಾಲ ಎಂಬ ಸಂಸ್ಥೆ ನಡೆಸುತ್ತಿದ್ದು, ಕೋಳಿಪಾಳ್ಯ ಗ್ರಾಮದಲ್ಲಿ ಗೋದಾಮು ಹೊಂದಿದ್ದಾರೆ. ₹2 ಕೋಟಿ ಮೌಲ್ಯದ ಪಾನ್‌ ಮಸಾಲ ದಾಸ್ತಾನು ಅವರ ಬಳಿ ಇತ್ತು. ಭಾನುವಾರ ರಾತ್ರಿ 2.30ರ ಸುಮಾರಿಗೆ ತಮಿಳುನಾಡಿನ 10ರಿಂದ 12 ಮಂದಿ ದಾಸ್ತಾನು ಕೊಠಡಿಯ ಬೀಗ ಮುರಿದು ₹50 ಲಕ್ಷ ಮೌಲ್ಯದ ಪಾನ್ ಮಸಾಲವನ್ನು ಕಳ್ಳತನ ಮಾಡಿ ಎರಡು ಲಾರಿ ಹಾಗೂ ಒಂದು ದೋಸ್ತ್‌ ವಾಹನದಲ್ಲಿ ತುಂಬಿಕೊಂಡು ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಚಾಮರಾಜನಗರ ಪೂರ್ವ ಠಾಣೆಯ ಪೊಲೀಸಲು ಕಾರ್ಯಾಚರಣೆಗೆ ಇಳಿದು, ಸೋಮವಾರ ಬೆಳಿಗ್ಗೆ 10 ಗಂಟೆಯ ಒಳಗಾಗಿ ಮೂರು ವಾಹನಗಳನ್ನು ಪತ್ತೆ ಮಾಡಿ ಜಪ್ತಿ ಮಾಡಿದ್ದಾರೆ’ ಎಂದರು.

‘ಎಲ್ಲ ಆರೋಪಿಗಳು ತಮಿಳುನಾಡಿನವರು. ಹರದನಹಳ್ಳಿ ಬಳಿ ವಾಹನವನ್ನು ತಡೆಯಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು. ದಾಸ್ತಾನು ಕೊಠಡಿ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿದ್ದಾರೆ.ಕಳ್ಳತನ ಮಾಡಿದ ಪಾನ್‌ ಮಸಾಲವನ್ನು ತಮಿಳುನಾಡಿಗೆ ಸಾಗಿಸಲು ಯತ್ನಿಸುತ್ತಿದ್ದರು ಎಂಬುದು ಗೊತ್ತಾಗಿದೆ. ತಮಿಳುನಾಡಿನಲ್ಲಿ ತಂಬಾಕು ಉತ್ಪನ್ನಗಳಿಗೆ ನಿಷೇಧ ಇರುವುದರಿಂದ ಅಕ್ರಮವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗಲು ಯತ್ನಿಸಿರುವ ಸಾಧ್ಯತೆ ಇದೆ’ ಎಂದು ಎಸ್‌ಪಿ ಹೇಳಿದರು.

‘ಜೆ.ಬವರ್‌ಲಾಲ್‌ ಅವರ ಬಳಿ ಪಾನ್‌ ಮಸಾಲ ಮಾರಾಟ ಮಾಡುವ ಪರವಾನಗಿ ಇದ್ದು, ಜಿಎಸ್‌ಟಿ ಬಿಲ್‌ ಸೇರಿದಂತೆ ಎಲ್ಲ ದಾಖಲೆಗಳನ್ನು ಹೊಂದಿದ್ದಾರೆ. ಅವರಿಗೆ ಬೆಂಗಳೂರಿನಲ್ಲೂ ಒಂದು ಗೋದಾಮು ಇದ್ದು, ಇಲ್ಲಿ ಬಾಡಿಗೆ ಕಡಿಮೆ ಎಂಬ ಕಾರಣಕ್ಕೆ ಕೋಳಿಪಾಳ್ಯದಲ್ಲಿ ಗೋದಾಮು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯಬೇಕಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ನಂಜಪ್ಪ, ಪೂರ್ವ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ಗಳಾದ ಡಿ.ಆರ್‌.ರವಿಕುಮಾರ್‌, ಎಸ್‌.ಲೋಕೇಶ್‌, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಮಹದೇವಸ್ವಾಮಿ, ಬಸವಣ್ಣ, ಜಯಪ್ಪ, ಶಾಂತರಾಜು, ಚಂದ್ರು, ರೇವಣ್ಣ, ಯೋಗೇಶ್‌, ಕಾನ್‌ಸ್ಟೆಬಲ್‌ಗಳಾದ ಅಶೋಕ್‌, ಕೃಷ್ಣ, ಕಿಶೋರ್‌, ಶ್ರೀನಿವಾಸ, ಚಂದ್ರಶೇಖರ್‌, ಸುರೇಶ್‌, ರಜನಿಕಾಂತ್‌, ಚಾಲಕರಾದ ನಾಗರಾಜು, ಮಹದೇವಸ್ವಾಮಿ ಭಾಗವಹಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಈ ಸಾಣಿಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT