ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗರಿಗೆದರಿದ ರಾಜಕೀಯ

ಮೀಸಲಾತಿ ಪಟ್ಟಿ ಪ್ರಕಟ; ಲೆಕ್ಕಾಚಾರದಲ್ಲಿ ತೊಡಗಿದ ಮುಖಂಡರು.
Last Updated 9 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಪ್ರಕಟಿಸುತ್ತಿದ್ದಂತೆಯೇ ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪ್ರಮುಖ ಪಕ್ಷಗಳು ಅಧಿಕಾರ ಹಿಡಿಯಲು ಕಾರ್ಯತಂತ್ರ ಹೆಣೆಯಲು ಆರಂಭಿಸಿವೆ.

ಎರಡು ನಗರಸಭೆ (ಚಾಮರಾಜನಗರ ಮತ್ತು ಕೊಳ್ಳೇಗಾಲ), ಒಂದು ಪುರಸಭೆ (ಗುಂಡ್ಲುಪೇಟೆ) ಹಾಗೂ ಎರಡು ಪಟ್ಟಣ ಪಂಚಾಯಿತಿಗಳಿವೆ (ಹನೂರು ಮತ್ತು ಯಳಂದೂರು).

ಎರಡೂ ನಗರಸಭೆಗಳಲ್ಲಿ ಯಾರಿಗೂ ಬಹುಮತ ಇಲ್ಲದೇ ಇರುವುದರಿಂದ ಮೈತ್ರಿ ಅನಿವಾರ್ಯ. ಗುಂಡ್ಲುಪೇಟೆ ಪುರಸಭೆಯಲ್ಲಿ ಬಿಜೆಪಿಗೆ ಸರಳ ಬಹುಮತ ಇದ್ದರೆ, ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಹೊಂದಿದೆ.

ಚಾಮರಾಜನಗರ ಮತ್ತು ಕೊಳ್ಳೇಗಾಲದ ನಗರಸಭೆಗಳಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಹೆಚ್ಚು ಕುತೂಹಲ ಕೆರಳಿಸಿದೆ. ಎರಡೂ ಕಡೆಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ–ಮಹಿಳೆಗೆ ಮೀಸಲಿಡಲಾಗಿದೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಸದಸ್ಯೆಗೆ ಮೀಸಲಾಗಿದೆ.

31 ಸದಸ್ಯ ಬಲದ ಎರಡೂ ನಗರಸಭೆಗಳಲ್ಲಿ ಯಾರಿಗೂ ಬಹುಮತ ಬಾರದೇ ಇರುವುದರಿಂದ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ. ಸರಳ ಬಹುಮತಕ್ಕೆ 16 ಸದಸ್ಯರ ಬೆಂಬಲ ಬೇಕು.ಶಾಸಕರು ಹಾಗೂ ಸಂಸದರಿಗೂ ಮತದಾನದ ಹಕ್ಕು ಇರುವುದರಿಂದ 17 ಸದಸ್ಯರ ಬೆಂಬಲವಿದ್ದರೆ ಅಧಿಕಾರ ಏರುವುದು ಖಚಿತ.

ಚಾಮರಾಜನಗರ ನಗರಸಭೆಯಲ್ಲಿ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಎದುರಿಸುತ್ತಿರುವ ಬಿಜೆಪಿ, 15 ವಾರ್ಡ್‌ಗಳಲ್ಲಿ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊಮ್ಮಿದೆ. ಕಾಂಗ್ರೆಸ್ ಎಂಟು, ಎಸ್‌ಡಿಪಿಐ ಆರು, ಬಿಎಸ್‌ಪಿ ಒಂದು ಸ್ಥಾನ ಹಾಗೂ ಮತ್ತೊಂದು ವಾರ್ಡ್‌ನಲ್ಲಿ ಪಕ್ಷೇತರರು ಗೆದ್ದಿದ್ದಾರೆ.

ಬಿಜೆಪಿಯಿಂದ ಏಳು ಕಾಂಗ್ರೆಸ್‌ನಿಂದ ಆರು ಮಂದಿ ಹಾಗೂ ಎಸ್‌ಡಿಪಿಐನಿಂದ ಒಬ್ಬರು ಮಹಿಳೆ ಆಯ್ಕೆಯಾಗಿದ್ದಾರೆ. ಈ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ತಲಾ ಒಬ್ಬರು ಸದಸ್ಯರಿದ್ದಾರೆ.

ಅಧಿಕಾರಕ್ಕೆ ಯಾರು?: ಬಿಜೆಪಿ ಅಧಿಕಾರ ಹಿಡಿಯಲು ಒಬ್ಬರು ಸದಸ್ಯರ ಬೆಂಬಲ ಬೇಕು. 27ನೇ ವಾರ್ಡ್‌ನಲ್ಲಿ ಬಿಎಸ್‌ಪಿಯಿಂದ ಗೆದ್ದಿರುವ ಪ್ರಕಾಶ್‌ ಅಥವಾ 17ನೇ ವಾರ್ಡ್‌ನ ಪಕ್ಷೇತರ ಸದಸ್ಯ ಸಿ.ಎಂ ಬಸವಣ್ಣ ಅವರು ಬೆಂಬಲ ನೀಡಿದರೆ ಬಿಜೆಪಿ ಸುಲಭದಲ್ಲಿ ಅಧಿಕಾರಕ್ಕೆ ಏರಲಿದೆ.

ಕಾಂಗ್ರೆಸ್‌ ಬಹುಮತ ಪ‍ಡೆಯಬೇಕಾದರೆ ಎಸ್‌ಡಿಪಿಐ ಬೆಂಬಲದೊಂದಿಗೆ ಉಳಿದ ಇಬ್ಬರು ಸದಸ್ಯ ಬೆಂಬಲವೂ ಬೇಕು. ಈ ಹಿಂದೆಯೂ ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದ್ದವು. ಈ ಬಾರಿ ಬಹುಮತ ಸಿಗಬೇಕಾದರೆ ಪ್ರಕಾಶ್‌ ಹಾಗೂ ಬಸವಣ್ಣ ಅವರ ಬೆಂಬಲವೂ ಅಗತ್ಯವಿದೆ.

‘ನಾನು ಬಿಎಸ್‌ಪಿಯಿಂದ ಗೆದ್ದಿದ್ದರೂ ಈಗ ಪಕ್ಷಕ್ಕೆ ರಾಜೀನಾಮೆ ನೀಡಿ, ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರೊಂದಿಗೆ ಗುರುತಿಸಿಕೊಂಡಿದ್ದೇನೆ. ಅವರು ಹಾಗೂ ವಾರ್ಡ್‌ ಜನರ ಅಭಿಪ್ರಾಯ ಪಡೆದು ಯಾರನ್ನು ಬೆಂಬಲಿಸಬೇಕು ಎಂಬುದನ್ನು ತೀರ್ಮಾನಿಸುತ್ತೇನೆ’ ಎಂದು 27ನೇ ವಾರ್ಡ್‌ ಸದಸ್ಯ ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಷ್ಟೇ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ನಾನಿನ್ನೂ ನಿರ್ಧಾರ ಕೈಗೊಂಡಿಲ್ಲ. ಒಂದೆರಡು ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಬಸವಣ್ಣ ಅವರು ಹೇಳಿದರು.

ಕಾಂಗ್ರೆಸ್‌, ಬಿಜೆಪಿಗಳಲ್ಲಿ ಅಧ್ಯಕ್ಷ ಸ್ಥಾನಗಳಿಗೆ ಹಲವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವುದರಿಂದ, ಬಿಜೆಪಿ ಅಧಿಕಾರಕ್ಕೆ ಬಂದರೆ 29ನೇ ವಾರ್ಡ್‌ನ ಪಿ. ಸುಧಾ ಹಾಗೂ ಕಾಂಗ್ರೆಸ್‌ ಬಹುಮತ ಪಡೆದರೆ 16ನೇ ವಾರ್ಡ್‌ ಸದಸ್ಯೆ‌ ಚಂದ್ರಕಲಾ ಬಿ.ಎಸ್‌ ಉಪಾಧ್ಯಕ್ಷರಾಗುವುದು ಖಚಿತ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಮಹಿಳಾ ಸದಸ್ಯರು ಯಾರು ಬೇಕಾದರೂ ಹುದ್ದೆ ಅಲಂಕರಿಸಬಹುದು. ಉಪಾಧ್ಯಕ್ಷರಾಗುವವರನ್ನು ಬಿಟ್ಟು ಬಿಜೆಪಿಯಲ್ಲಿ ಆರು, ಕಾಂಗ್ರೆಸ್‌ನಲ್ಲಿ ಐವರು‌, ಎಸ್‌ಡಿಪಿಐನಲ್ಲಿ ಒಬ್ಬರು ಸದಸ್ಯೆಯರು ಇದ್ದಾರೆ.

ಈ ಪೈಕಿ ಬಿಜೆಪಿಯಲ್ಲಿ ಏಳನೇ ವಾರ್ಡ್‌ನ ಸಿ.ಎಂ.ಆಶಾ ಹಾಗೂ 22ನೇ ವಾರ್ಡ್‌ ಎಚ್‌.ಎಸ್‌.ಮಮತಾ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್‌ನಲ್ಲಿ 13ನೇ ವಾರ್ಡ್‌ನ ಕಲಾವತಿ ಹಾಗೂ 14ನೇ ವಾರ್ಡ್‌ನ ಚಿನ್ನಮ್ಮ ಅವರ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್‌–ಎಸ್‌ಡಿಪಿಐ ಮೈತ್ರಿ ಏರ್ಪಟ್ಟರೆ, 5ನೇ ವಾರ್ಡ್‌ನಿಂದ ಗೆದ್ದಿರುವ ತನ್ನ ಸದಸ್ಯೆ ತೌಸಿಯಾ ಭಾನು ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಎಸ್‌ಡಿಪಿಐ ಕೇಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಕೊಳ್ಳೇಗಾಲದಲ್ಲೂ ಮೈತ್ರಿ ಕುತೂಹಲ

ಕೊಳ್ಳೇಗಾಲದ ನಗರಸಭೆ ರಾಜಕೀಯ ಮತ್ತಷ್ಟು ಕುತೂಹಲಕರವಾಗಿದೆ. ಅಧಿಕಾರ ಹಿಡಿಯಬೇಕಾದರೆ ಪಕ್ಷಗಳು ಪರಸ್ಪರ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ.

ಕಾಂಗ್ರೆಸ್‌ 11 ಸದಸ್ಯರನ್ನು ಹೊಂದಿ ದೊಡ್ಡ ಪಕ್ಷವಾಗಿದ್ದರೆ, ಬಿಎಸ್‌ಪಿ ಒಂಬತ್ತು, ಬಿಜೆಪಿ ಏಳು, ಪಕ್ಷೇತರ ನಾಲ್ವರು ಇದ್ದಾರೆ (ಇವರಲ್ಲಿ ಒಬ್ಬರು ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದವರು). ಈ ನಾಲ್ವರು ಕೂಡ ಕಾಂಗ್ರೆಸ್‌ ಪರ ಒಲವು ಹೊಂದಿದ್ದಾರೆ. ಇವರೆಲ್ಲರೂ ಸೇರಿದರೆ ಕಾಂಗ್ರೆಸ್‌ನ ಬಲ 15 ಆಗುತ್ತದೆ. ಬಹುಮತಕ್ಕೆ ಮತ್ತೆ ಇಬ್ಬರ ಸದಸ್ಯರ ಬೆಂಬಲ ಬೇಕಾಗುತ್ತದೆ. ಸಂಸದರು ಹಾಗೂ ಶಾಸಕರಿಗೂ ಮತದಾನದ ಹಕ್ಕು ಇರುವುದರಿಂದ 17 ಸದಸ್ಯರ ಬೆಂಬಲ ಇರುವುದು ಅಗತ್ಯ.

ಬಿಎಸ್‌ಪಿಯಲ್ಲಿ ಗೆದ್ದಿರುವ 9 ಜನರ ಪೈಕಿ ಏಳು ಮಂದಿ ಸ್ಥಳೀಯ ಶಾಸಕ ಹಾಗೂ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿರುವ ಎನ್‌.ಮಹೇಶ್‌ ಅವರೊಂದಿಗೆ ಏಳು ಸದಸ್ಯರು ಗುರುತಿಸಿಕೊಂಡಿದ್ದಾರೆ. ಇನ್ನಿಬ್ಬರು ಬಿಎಸ್‌ಪಿಯಲ್ಲೇ ಇದ್ದಾರೆ. ಇವರಿಬ್ಬರು ಕಾಂಗ್ರೆಸ್‌ ಬೆಂಬಲಿಸಿದರೆ, ಕೈ ಪಾಳಯ ಅಧಿಕಾರ ಹಿಡಿಯಬಹುದು.

ಬಿಜೆಪಿ ಬಗ್ಗೆ ಮೃದು ಧೋರಣೆ ತಾಳಿರುವ ಎನ್‌.ಮಹೇಶ್‌ ಅವರು ಕಮಲ ಪಾಳೆಯದ ಏಳು ಸದಸ್ಯರ ಬೆಂಬಲ ಪಡೆದರೂ 14 ಸದಸ್ಯರಾಗುತ್ತಾರಷ್ಟೇ. ಮತ್ತೆ ಇನ್ನಿಬ್ಬರ ಬೆಂಬಲ ಬೇಕೇ ಬೇಕು. ಹಾಗಾಗಿ ಕೊಳ್ಳೇಗಾಲದಲ್ಲಿ ಯಾರ ಮಧ್ಯೆ ಮೈತ್ರಿ ಏರ್ಪಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಒಟ್ಟು 31 ಸದಸ್ಯರ ಪೈಕಿ ಕಾಂಗ್ರೆಸ್‌ನ ಏಳು. ಬಿಎಸ್‌ಪಿಯ ಐವರು ಹಾಗೂ ಬಿಜೆಪಿಯ ಮೂವರು ಸೇರಿದಂತೆ ಒಟ್ಟು 15 ಮಂದಿ ಸದಸ್ಯೆಯರಿದ್ದಾರೆ. ಈ ಪೈಕಿ, ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ತಲಾ ಇಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ.

ಮೈತ್ರಿ ಮಾಡಲು ರಾಜಕೀಯ ಮುಖಂಡರು ಕಸರತ್ತು ಆರಂಭಿಸಿದ್ದರೆ, ಪಕ್ಷಗಳ ಸದಸ್ಯೆಯರು ಅಧ್ಯಕ್ಷ ಸ್ಥಾನ ಪಡೆಯಲು ಪೈಪೋಟಿ ಆರಂಭಿಸಿದ್ದಾರೆ.

ಈ ಮಧ್ಯೆ, ನಗರಸಭೆಯಲ್ಲಿ ಅಧಿಕಾರ ಹಿಡಿಯುವ ಭರವಸೆಯನ್ನು ಶಾಸಕ ಎನ್‌.ಮಹೇಶ್‌ ಅವರು ವ್ಯಕ್ತಪಡಿಸಿದ್ದಾರೆ.

‘ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ನಾವೇ ಪಡೆಯುತ್ತೇವೆ. ಈ ಬಗ್ಗೆ ಭಾನುವಾರ ಬೆಂಬಲಿಗರ ಜೊತೆ ಚರ್ಚಿಸಲಾಗುವುದು. ಅಧಿಕಾರ ಹಿಡಿಯುವುದು ಖಚಿತ’ ಎಂದು ಎನ್‌.ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT