ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವು ಯಾರಿಗೆ: ಲೆಕ್ಕಾಚಾರ ಜೋರು

ಮತದಾನದ ನಂತರ ರಾಜಕೀಯ ಚರ್ಚೆ: ವಿಶ್ರಾಂತಿಗೆ ಮೊರೆ ಹೋದ ಅಭ್ಯರ್ಥಿಗಳು, ಮುಖಂಡರು
Published 28 ಏಪ್ರಿಲ್ 2024, 5:44 IST
Last Updated 28 ಏಪ್ರಿಲ್ 2024, 5:44 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಗಿಯುತ್ತಲೇ ರಾಜಕೀಯ ಪಕ್ಷಗಳ ಮುಖಂಡರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.‌

ಸಾರ್ವಜನಿಕರಲ್ಲೂ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದ್ದು, ಹೊಸ ಸಂಸದರ ಹೆಸರು ಘೋಷಣೆಯಾಗಲು ಒಂದು ತಿಂಗಳಿಗೂ ಹೆಚ್ಚು ಸಮಯ ಕಾಯಬೇಕಾಗಿದೆ. 

ಮತದಾನದ ಮಾರನೇ ದಿನ ಅಭ್ಯರ್ಥಿಗಳು, ಮುಖಂಡರು ಮನೆ, ಪಕ್ಷದ ಕಚೇರಿಗಳಲ್ಲಿ ಕುಳಿತು  ಫಲಿತಾಂಶದ ಬಗ್ಗೆ ಚರ್ಚೆ ನಡೆಸಿದರು. ಮುಖಂಡರು, ಕಾರ್ಯಕರ್ತರಿಗೆ ಕರೆ ಮಾಡಿ ಮಾಹಿತಿ ಪಡೆದರು.  

14 ಅಭ್ಯರ್ಥಿಗಳಿದ್ದರೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಬಿಎಸ್‌ಪಿ ಸ್ಪರ್ಧಿಸಿದೆಯಾದರೂ ಅದು ಪೈಪೋಟಿ ನೀಡಿರುವ ಸಾಧ್ಯತೆ ಕಡಿಮೆ.

ಹಾಗಾಗಿ, ವಿಜಯಲಕ್ಷ್ಮಿ ಕಾಂಗ್ರೆಸ್‌ನ ಸುನಿಲ್‌ ಬೋಸ್‌ ಅವರಿಗೆ ಒಲಿಯಲಿದ್ದಾಳೆಯೇ ಇಲ್ಲ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಸ್‌.ಬಾಲರಾಜು ಅವರಿಗೋ ಎಂಬ ಪ್ರಶ್ನೆಯಷ್ಟೇ ಈಗ ಉಳಿದಿದೆ. 

ಕ್ಷೇತ್ರದಲ್ಲಿ ಈ ಬಾರಿ ದಾಖಲೆಯ ಮತದಾನವಾಗಿರುವುದು ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದ್ದು, ಗೆಲ್ಲುವ ಅಭ್ಯರ್ಥಿಗೆ ಭಾರಿ ಮತಗಳ ಮುನ್ನಡೆ ಸಿಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ 82.35ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಅತಿ ಕಡಿಮೆ ಎಂದರೆ ಹನೂರಿನಲ್ಲಿ ಶೇ 71.94ರಷ್ಟು ಮತದಾನವಾಗಿದೆ. ಉಳಿದ ಆರು ಕ್ಷೇತ್ರಗಳಲ್ಲಿ ಶೇ 74ಕ್ಕಿಂತಲೂ ಹೆಚ್ಚು ಮಂದಿ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. 

‘ನಮಗೆ ಸುಲಭ ಗೆಲುವು ಖಚಿತ. ಲಕ್ಷಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದರೆ, ಬಿಜೆಪಿಯರು ಕೂಡ ‘ಹಲವು ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಕಳೆದ ಬಾರಿಯೂ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿತ್ತು. ಅದು ಪಕ್ಷಕ್ಕೇ ಅನುಕೂಲ ತಂದಿತ್ತು’ ಎಂದು ಹೇಳುತ್ತಿದ್ದಾರೆ.  

ಕ್ಷೇತ್ರ, ಬೂತ್‌ವಾರು ಚರ್ಚೆ: ಎರಡೂ ಪಕ್ಷಗಳ ಮುಖಂಡರು, ವಿಧಾನಸಭಾ ಕ್ಷೇತ್ರವಾರು, ಬೂತ್‌ವಾರು ಮತದಾನದ ಅಂಕಿ ಅಂಶಗಳನ್ನು ವಿಶ್ಲೇಷಿಸುತ್ತಿದ್ದಾರೆ. ಮುಖಂಡರು, ಪಕ್ಷದ  ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಎಷ್ಟು ಮತಗಳು ಬಿದ್ದಿರಬಹುದು ಎಂಬ ಮಾಹಿತಿಯನ್ನು ತಮ್ಮ ಕಾರ್ಯಕರ್ತರ ಮೂಲಕ ಸಂಗ್ರಹಿಸುತ್ತಿದ್ದಾರೆ. 

ಬೆಟ್ಟಿಂಗ್‌: ಮತ ಎಣಿಕೆಗೆ ಒಂದು ತಿಂಗಳು ಇದ್ದರೂ, ಯಾರು ಗೆಲ್ಲುತ್ತಾರೆ ಎಂಬ ಸಾರ್ವಜನಿಕ ವಲಯದಲ್ಲಿ ಚರ್ಚೆಯ ಜೊತೆಗೆ ಬೆಟ್ಟಿಂಗ್‌ ಕೂಡ ಆರಂಭವಾಗಿದೆ.

ಮರಿಸ್ವಾಮಿ
ಮರಿಸ್ವಾಮಿ
ಪ್ರಕಾಶ್‌ ಮೂಡ್ನಾಕೂಡು
ಪ್ರಕಾಶ್‌ ಮೂಡ್ನಾಕೂಡು

ಸ್ಟ್ರಾಂಗ್‌ ರೂಂಗೆ ಬಿಗಿ ಭದ್ರತೆ

ಜೂನ್‌ 4ರಂದು ಮತ ಎಣಿಕೆ ನಡೆಯಲಿದೆ. ನಗರದ ಹೊರವಲಯದ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ಟ್ರಾಂಗ್‌ ರೂಂ ತೆರೆಯಲಾಗಿದ್ದು ಎಲ್ಲ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಯಂತ್ರಗಳನ್ನು ಇಲ್ಲಿ ಇರಿಸಲಾಗಿದೆ.  ಸ್ಟ್ರಾಂಗ್‌ ರೂಂಗೆ ಮೂರು ಹಂತದ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ. ಎಂಜಿನಿಯರಿಂಗ್‌ ಕೇಂದ್ರದ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು 24x7 ನಿಗಾ ವಹಿಸಲಿದ್ದಾರೆ.    ‘ಮೂರು ಹಂತದ ಭದ್ರತೆ ನೀಡಿದ್ದೇವೆ. ಇಂಡೊ ಟಿಬೆಟಿಯನ್‌ ಗಡಿ ಭದ್ರತಾ ಪಡೆಯ ಸಿಬ್ಬಂದಿ ಮೀಸಲು ಪೊಲೀಸರು ಹಾಗೂ ಸಿವಿಲ್‌ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ‘ಪ್ರಜಾವಾಣಿ’ಗೆ ತಿಳಿಸಿದರು.  ಜಿಲ್ಲಾಧಿಕಾರಿ ಭೇಟಿ: ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ಶನಿವಾರ ಎಂಜಿನಿಯರಿಂಗ್‌ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT