ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 'ಜಾನಪದ ಕಲೆಗಳ ಪೋಷಣೆ ಎಲ್ಲರ ಹೊಣೆ"

ನಶಿಸಿ ಹೋಗುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ
Last Updated 8 ಮಾರ್ಚ್ 2023, 6:18 IST
ಅಕ್ಷರ ಗಾತ್ರ

ಚಾಮರಾಜನಗರ: ಆಧುನೀಕರಣ ಭರದಲ್ಲಿ ಜಾನಪದ ಕಲೆ ಇಂದು ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸಿ ಪೋಷಿಸುವುದು ಎಲ್ಲರ ಹೊಣೆ ಎಂದು ನಗರಸಭೆ ಅಧ್ಯಕ್ಷೆ ಸಿ.ಎಂ. ಆಶಾ ಮಂಗಳವಾರ ತಿಳಿಸಿದರು.

ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ನಶಿಸಿ ಹೋಗುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾನಪದ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರುತ್ತವೆ. ಅವುಗಳನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕು. ಜಾನಪದಗಳಿಗೆ ಗೌರವ ಸಲ್ಲಿಸಬೇಕು. ಚಾಮರಾಜನಗರವು ಜಾನಪದ ಕಲೆ ತವರೂರು ಆಗಿರುವುದು ನಮ್ಮೆಲ್ಲರ ಹೆಮ್ಮೆ’ ಎಂದರು.

ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಶಿಬಿರದ ಜಿಲ್ಲಾ ಸಂಚಾಲಕ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಅಮೂಲ್ಯ ಕಲಾ ಸಂಪತ್ತು ಇರುವ ಜಾನಪದ ಸಂಸ್ಕೃತಿಗೆ ಬಗ್ಗೆ ಯುವ ಪೀಳಿಗೆ ಹೆಚ್ಚು ಒಲವು ತೋರಬೇಕು. ಜಾನಪದ ಹಾಡುಗಾರರಿಗೆ, ವಾದ್ಯಗಳಿಗೆ, ನೃತ್ಯಗಳಿಗೆ, ನಾಟಕಗಳಿಗೆ ಸರ್ಕಾರ ನೆರವು ನೀಡುತ್ತಿದೆ. ಇಂತಹ ಯೋಜನೆಗಳನ್ನು ಉಪಯೋಗಿಸಿಕೊಂಡು ಜಾನಪದವನ್ನು ಉಳಿಸಿ ಬೆಳೆಸಬೇಕು’ ಎಂದು ಹೇಳಿದರು.

ಜಾನಪದ ಗಾಯಕ ಡಾ. ಮಳವಳ್ಳಿ ಮಹದೇವಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.

ನಗರಸಭೆ ಸದಸ್ಯರಾದ ಎಚ್.ಎಸ್. ಮಮತ, ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ ತರಬೇತಿ ಶಿಬಿರದ ಜಿಲ್ಲಾ ಸಂಚಾಲಕ ಪದ್ಮ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಗುರುಲಿಂಗಯ್ಯ, ಕಲಾವಿದರಾದ ಕೈಲಾಸಮೂರ್ತಿ, ಕೆಬ್ಬೇಪುರ ಸಿದ್ದರಾಜು, ಪುಟ್ಟಮ್ಮ, ಸರಸ್ವತಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.

ಕಲಾವಿದರ ಆಕ್ರೋಶ: ಕಾರ್ಯಕ್ರಮದಲ್ಲಿ ರಾಮಣ್ಣ ಎಂಬ ಕಲಾವಿದ ವೇದಿಕೆಯ ಮೇಲೆ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯ ಕಲಾವಿದರಿಗೆ ಸಮರ್ಪಕವಾಗಿ ಕಾರ್ಯ ಕ್ರಮಗಳನ್ನು ನೀಡುತ್ತಿಲ್ಲ ಎಂದು ದೂರಿದರು.

ರಂಗಮಂದಿರದ ಹೊರಗೂ ಆಕ್ರೋಶ ವ್ಯಕ್ತಪಡಿಸಿದ ಕಲಾವಿದರು ಇಲಾಖೆಯಿಂದ ಕಾರ್ಯಕ್ರಮ ಪಡೆದುಕೊಳ್ಳಲು ಕಚೇರಿಗೆ ದಿನನಿತ್ಯ ಅಲೆದಾಡಬೇಕಿದೆ. ಈ ಸಂಬಂಧ ಸಹಾಯಕ ನಿರ್ದೇಶಕರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಸೋಬಾನೆ ಕಲಾವಿದರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT