ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು, ಉಪನ್ಯಾಸಕರ ಪ್ರತಿಭಟನೆ ಜುಗಲ್ಬಂದಿ

ತರಗತಿಗಳ ಆರಂಭಕ್ಕೆ ಎಬಿವಿಪಿ ಆಗ್ರಹ; ಸೇವೆ ಕಾಯಂಗೆ ಅತಿಥಿ ಉಪನ್ಯಾಸಕರ ಒತ್ತಾಯ
Last Updated 22 ಡಿಸೆಂಬರ್ 2021, 16:45 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿರುವುದರಿಂದ ತರಗತಿಗಳು ನಡೆಯುತ್ತಿಲ್ಲ. ಇದರಿಂದ ನಮಗೆ ತೊಂದರೆಯಾಗಿದೆ. ಶೀಘ್ರದಲ್ಲಿ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಆಶ್ರಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಇದೇ ವೇಳೆಯಲ್ಲಿ, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ಬುಧವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಜಿಲ್ಲಾಡಳಿತ ಭವನದ ಎದುರಿನ ಹುಲ್ಲು ಹಾಸಿನ ಒಂದು ಬದಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಇನ್ನೊಂದು ಬದಿಯಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟಿಸಿದರು.

ಪೂರ್ಣ ಪ್ರಮಾಣದ ತರಗತಿಗಳಿಗೆ ಆಗ್ರಹ: ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಬಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಭವನದ ಮುಂದೆ ಧರಣಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ 2ನೇ ಅಲೆಗೆ ತತ್ತರಿಸಿರುವ ರಾಜ್ಯವು ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮರು ಪ್ರಾರಂಭವಾಗಿ ವಿದ್ಯಾರ್ಥಿಗಳೆಲ್ಲ ಉತ್ಸಾಹದಿಂದ ಕಾಲೇಜುಗಳಿಗೆ ಬರುತ್ತಿದ್ದಾರೆ. ಆದರೆ, ಭೌತಿಕ ತರಗತಿಗಳು ಆರಂಭಗೊಂಡರೂ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪಾಠಗಳು ಇನ್ನೂ ನಡೆಯುತ್ತಿಲ್ಲ’ ಎಂದು ದೂರಿದರು.

‘ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ಸರ್ಕಾರ ಒಂದು ತಿಂಗಳು ತಡವಾಗಿ ನೇಮಿಸಿದೆ. ಉಪನ್ಯಾಸಕರ ಸಂಖ್ಯೆ ಕೂಡ ಅವಶ್ಯಕತೆಗಿಂತ ಕಡಿಮೆ ಇದೆ. ಅ.28ರಿಂದ ಅತಿಥಿ ಉಪನ್ಯಾಸಕರು ಪಾಠಗಳನ್ನು ಪ್ರಾರಂಭಿಸಿದ್ದರು. ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ, ಡಿ.10ರಿಂದ ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಇದರಿಂದ ತರಗತಿಗಳು ನಡೆಯುತ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಆದ್ದರಿಂದ ಸರ್ಕಾರವು ಕೂಡಲೇ ಈ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಶೃತನ್, ತಾಲ್ಲೂಕು ಸಂಚಾಲಕ ಶ್ರೀನಿಧಿ, ಕಿರಣ್, ಶರತ್, ಗಗನ್, ನಿತೀಶ್, ರಾಜಶೇಖರಮೂರ್ತಿ, ರಮ್ಯಾ, ನಾಗಶ್ರೀ, ಕನ್ಯಾಕುಮಾರಿ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಅನಿರ್ದಿಷ್ಟಾವಧಿ ತರಗತಿ ಬಹಿಷ್ಕಾರದ ಎಚ್ಚರಿಕೆ

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಬುಧವಾರವೂ ಪ್ರತಿಭಟ‌ನೆ ನಡೆಸಿದರು.

ಸೇವೆ ಕಾಯಂಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಡಿ.10ರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ‌ ನಡೆಸುತ್ತಿದ್ದಾರೆ.

ಬೇಡಿಕೆ ಈಡೇರುವವರೆಗೂ ತರಗತಿಗಳನ್ನು ಅನಿರ್ದಿಷ್ಟಾವಧಿಗೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಕಾರರು ಹೇಳಿದರು. ನಂತರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಗುರುರಾಜ್‌, ಅತಿಥಿ ಉಪನ್ಯಾಸಕರಾದ ದೊಡ್ಡಮ್ಮ, ಸುಧಾರಾಣಿ, ಸುವರ್ಣ, ರೋಹಿಣಿ, ಲಕ್ಷ್ಮೀ, ವರದರಾಜು, ದೀಪಕ್ ವಿಲ್ಸನ್, ಮೇಗೇಶ್, ರೇವಣ್ಣಸ್ವಾಮಿ, ಪ್ರದೀಪ್ ಕುಮಾರ್, ಸಿದ್ದರಾಜು, ಮಹದೇವಕುಮಾರ್, ನಾಗಭೂಷಣ, ಉಮಾಶಂಕರ್, ಸುರೇಶ್, ಶಿವಕುಮಾರ್, ಮುರುಗೇಶ್, ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT