ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಪುಟ್ಟರಂಗಶೆಟ್ಟಿಗೆ ಒಲಿದ ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನ

Published 27 ಜನವರಿ 2024, 4:40 IST
Last Updated 27 ಜನವರಿ 2024, 4:40 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಸರ್ಕಾರವು ಶುಕ್ರವಾರ 34 ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಶಾಸಕರ ಪೈಕಿ ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಕೂಡ ಇದ್ದಾರೆ. 

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಅಧ್ಯಕ್ಷರನ್ನಾಗಿ ಅವರನ್ನು ಸರ್ಕಾರ ನೇಮಿಸಿದೆ. 

ಪಾನೀಯ, ಮುದ್ರಣ ಕಾಗದ, ಚಿಟ್‌ ಫಂಡ್‌, ಮರಳು, ಕೈಗಾರಿಕಾ ಉತ್ಪನ್ನಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಈ ಸಂಸ್ಥೆಯು ಸರ್ಕಾರಕ್ಕೆ ಉತ್ತಮ ಆದಾಯ ತರುವ ನಿಗಮಗಳಲ್ಲಿ ಒಂದಾಗಿದೆ.  ಪ್ರಮುಖ ನಿಗಮದ ಅಧ್ಯಕ್ಷ ಸ್ಥಾನವನ್ನು ಪಡೆಯುವಲ್ಲಿ  ಪುಟ್ಟರಂಗಶೆಟ್ಟಿಯವರು ಯಶಸ್ಸು ಕಂಡಿದ್ದಾರೆ.   

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಅವರಿಗೆ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ತಪ್ಪಿತ್ತು. ಆ ಬಳಿಕ ಅವರಿಗೆ ಉಪ ಸಭಾಧ್ಯಕ್ಷರ ಹುದ್ದೆ ವಹಿಸುವಂತೆ ಸೂಚಿಸಲಾಗಿತ್ತು. ಆದರೆ, ಕ್ಷೇತ್ರದವರೊಂದಿಗೆ ಒಡನಾಟ ಕಡಿಮೆಯಾಗುತ್ತದೆ ಎಂಬ ಕಾರಂಣ ಹೇಳಿ, ಉಪಸಭಾಧ್ಯಕ್ಷ ಸ್ಥಾನವನ್ನು ಅವರು ಒಪ್ಪಿರಲಿಲ್ಲ. 

ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಅವರಿಗೆ ದೊರಕಿದೆ. ಸಂಪುಟ ದರ್ಜೆಯ ಸ್ಥಾನಮಾನವೇ ಅವರಿಗೆ ಸಿಗಲಿದೆ.  

ಲಾಬಿ ಮಾಡಿದ್ದರು: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಪುಟ್ಟರಂಗಶೆಟ್ಟಿ ಒಲವು ಹೊಂದಿಲ್ಲ. ಹಾಗಾಗಿ, ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆ ಸಂದರ್ಭದಲ್ಲಿ ಅವರನ್ನು ಸಿದ್ದರಾಮಯ್ಯ ಪರಿಗಣಿಸಲಿದ್ದಾರೆ ಎಂದು ಹೇಳಲಾಗಿತ್ತು. 

‘ಆದರೆ, ನಿಗಮ ಮಂಡಳಿ ಕೊಟ್ಟರೆ ಪ್ರಮುಖ ನಿಗಮದ ಹೊಣೆಯನ್ನೇ ವಹಿಸಬೇಕು  ಎಂದು ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು. ಸಣ್ಣ ಪುಟ್ಟ ನಿಗಮಗಳಿಗೆ ನೇಮಕ ಮಾಡದಂತೆ ಮನವಿ ಮಾಡಿದ್ದರು’ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. 

ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪುಟ್ಟರಂಗಶೆಟ್ಟಿ ಅವರು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಅವರು ಸಚಿವರೂ ಆಗಿದ್ದರು.  

2008ರಿಂದ ಸತತ ನಾಲ್ಕು ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅವರು ಉಪ್ಪಾರ ಸಮುದಾಯದ ಏಕೈಕ ಶಾಸಕರು. ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದೊರೆತಿರುವುದರಿಂದ ಅವರಿಗೆ ಮುಂದೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂದು ಹೇಳುತ್ತಾರೆ ಕಾಂಗ್ರೆಸ್‌ ಮುಖಂಡರು. 

ಎರಡನೇ ಹಂತದಲ್ಲಿ ಜಯಣ್ಣಗೆ ಅವಕಾಶ?

ಜಿಲ್ಲೆಯಿಂದ ನಿಗಮ ಮತ್ತು ಮಂಡಳಿಗೆ ಕೊಳ್ಳೇಗಾಲದ ಮಾಜಿ ಶಾಸಕ ಎಸ್‌.ಜಯಣ್ಣ ಅವರ ಹೆಸರು ಪ‍್ರಬಲವಾಗಿ ಕೇಳಿ ಬಂದಿತ್ತು.  ‘ಕೊಳ್ಳೇಗಾಲ ಕ್ಷೇತ್ರದಲ್ಲಿ ಟಿಕೆಟ್‌ ಹಂಚಿಕೆ ಕಗ್ಗಂಟು ಆಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಹಾಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಸ್‌.ಜಯಣ್ಣ ಅವರಿಗೆ ಸರ್ಕಾರ ಬಂದರೆ ನಿಗಮ ಮಂಡಳಿಗೆ ನೇಮಕ ಮಾಡುವ ಭರವಸೆ ನೀಡಿದ್ದರು. ಅದರಂತೆ ಜಯಣ್ಣ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ’ ಎಂದು ಮೂಲಗಳು ತಿಳಿಸಿವೆ. ‘ಮೊದಲ ಹಂತದ ನೇಮಕಾತಿಯಲ್ಲಿ ಶಾಸಕರನ್ನು ಮಾತ್ರ ಪರಿಗಣಿಸಲಾಗಿದೆ. ಎರಡನೇ ಹಂತದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ. ಆ ಪಟ್ಟಿಯಲ್ಲಿ ಜಯಣ್ಣ ಹೆಸರು ಇರಲಿದೆ’ ಎಂದು ಮುಖಂಡರು ಹೇಳಿದ್ದಾರೆ. 

ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಸಂಸ್ಥೆಯ ಅಭಿವೃದ್ಧಿಗಾಗಿ ದುಡಿಯುತ್ತೇನೆ.
ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT