ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಹಾಸಿಗೆಗಳ ವಾರ್ಡ್‌, ಪರೀಕ್ಷೆಗೆ ವಿಶೇಷ ಘಟಕ

ಕೊರೊನಾ ವಿರುದ್ಧ ಸಮರ: ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ವಿಶೇಷ ತಂಡ
Last Updated 4 ಏಪ್ರಿಲ್ 2020, 15:40 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಡುವುದಕ್ಕಾಗಿ ಇಲ್ಲಿನ ಸರ್ಕಾರಿ ಉಪವಿಭಾಗದ ಆಸ್ಪತ್ರೆಯಲ್ಲಿ ‘ಕೋವಿಡ್‌– 19’ ವಿಶೇಷ ಘಟಕವನ್ನು ತೆರೆಯಲಾಗಿದೆ. ಇಲ್ಲಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಾಯಿ– ಮಗುವಿನ ಆಸ್ಪತ್ರೆಯಲ್ಲಿ ವಿಶೇಷ ಘಟಕ ತೆರೆಯಲಾಗಿದೆ. ಹಳೆಯ ಕಟ್ಟಡದಲ್ಲಿ 40 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಅನ್ನು ಇದಕ್ಕಾಗಿ ಮೀಸಲಿಡಲಾಗಿದೆ.

ಸದ್ಯಕ್ಕೆ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಘಟಕದಲ್ಲಿ ಆರೋಗ್ಯ ತಪಾಸಣೆ ಮಾತ್ರ ನಡೆಸಲಾಗುತ್ತಿದೆ. ಶಂಕಿತ ಪ್ರಕರಣಗಳನ್ನೆಲ್ಲ ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ.

ಗಂಟಲು ನೋವು, ಜ್ವರ, ಕೆಮ್ಮು, ನೆಗಡಿ, ತಲೆನೋವು ಮುಂತಾದ ರೋಗ ಲಕ್ಷಣಗಳನ್ನು ಹೊಂದಿರುವವರು ಆಸ್ಪತ್ರೆಗೆ ಬಂದರೆ ಅವರನ್ನು ಇದೇ ಘಟಕಕ್ಕೆ ಕಳುಹಿಸಲಾಗುತ್ತಿದೆ.

ವಿಶೇಷ ತಂಡ: ವಿಶೇಷ ಘಟಕಕ್ಕಾಗಿ ಡಾ.ತ್ರಿವೇಣಿ, ಡಾ.ಕುಸುಮಾ, ಡಾ.ರವೀಂದ್ರ ಹಾಗೂ ಇತರೆ 12 ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ. ಮೂರು ಪಾಳಿಯಲ್ಲಿ ದಿನದ 24 ಗಂಟೆಗಳ ಕಾಲವೂ ಈ ತಂಡ ಕಾರ್ಯನಿರ್ವಹಿಸುತ್ತಿದೆ.

ಸಾಮಾನ್ಯ ಜ್ವರಕ್ಕೆ ವೈದ್ಯರು ಅಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ಒಂದು ವೇಳೆ ಕೊರೊನಾ ವೈರಸ್‌ನ ಶಂಕಿತ ರೋಗಿಗಳು ಕಂಡು ಬಂದಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದಾರೆ.

ಅಗತ್ಯ ಸೌಲಭ್ಯ: ವಿಶೇಷ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿಗೆ ಅಗತ್ಯವಾದ ಎಲ್ಲ ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಪೂರೈಸಲಾಗಿದೆ. ಅದನ್ನು ಧರಿಸಿಯೇ ಅವರು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಎರಡು ವೆಂಟಿಲೇಟರ್‌ಗಳಿವೆ.

ಕುಟುಂಬದಿಂದ ದೂರ: ‘ಕೊರೊನಾ ಸೋಂಕು ವಿರುದ್ಧ ಹೋರಾಟಲು ನಾವು ಸಿದ್ಧರಾಗಿದ್ದೇವೆ. ನಾವು ನಮ್ಮ ಮನೆಗಳಿಗೆ ಹೋಗದೆ, ನಮ್ಮ ಕುಟುಂಬದವರಿಂದ ದೂರ ಉಳಿದಿದ್ದೇವೆ. ವೈದ್ಯರಾಗಿ ನಮ್ಮ ಕರ್ತವ್ಯವನ್ನು ಮಾಡಲೇಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು‌ಧೈರ್ಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಡಾ.ತ್ರಿವೇಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲೇ ಚಿಕಿತ್ಸೆ

‘ಕೋವಿಡ್‌–19 ಪರೀಕ್ಷೆಗಾಗಿ ವಿಶೇಷ ಘಟಕವನ್ನು ಆಸ್ಪತ್ರೆಯಲ್ಲಿ ತೆರೆದಿದ್ದೇವೆ. ಜ್ವರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಅಲ್ಲಿಯೇ ಪರೀಕ್ಷೆ ಮಾಡಲಾಗುತ್ತಿದೆ. ಕೊರೊನಾ ವೈರಸ್‌ ಸೋಂಕಿನ ಶಂಕೆ ಕಂಡು ಬಂದರೆ ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತೇವೆ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗಣೇಶ್‌ ತಿಳಿಸಿದರು.

‘ಸದ್ಯಕ್ಕೆ ಶಂಕಿತರಿಗೆಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನೂ ಹೆಚ್ಚಿನ ಹಾಸಿಗೆಗಳು ಅಗತ್ಯವಿದ್ದಾಗ ಇಲ್ಲಿನ ವಾರ್ಡ್‌ನಲ್ಲಿರುವ ಹಾಸಿಗೆಗಳ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT