ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜೋಡಿ ರಸ್ತೆ- ಮರುಕಳಿಸಿದ ಸಮಸ್ಯೆ

ಚಾಮರಾಜನಗರದ ಸುತ್ತಮುತ್ತ ಬಹುದಿನಗಳ ನಂತರ ಬಿರುಸಿನ ಮಳೆ
Published 11 ಆಗಸ್ಟ್ 2023, 7:49 IST
Last Updated 11 ಆಗಸ್ಟ್ 2023, 7:49 IST
ಅಕ್ಷರ ಗಾತ್ರ

ಚಾಮರಾಜನಗರ: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಸಂಜೆ ಬಿರುಸಿನ ಮಳೆಯಾಗಿದೆ. 

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ವರ್ಷಧಾರೆಯಾಗಿದೆ. ಸಂಜೆ 4.30ಕ್ಕೆ ಆರಂಭಗೊಂಡ ಮಳೆ ಆರು ಗಂಟೆಯವರೆಗೂ ಸುರಿಯಿತು. ಆ ಬಳಿಕವೂ ಬಿಟ್ಟು ಬಿಟ್ಟು ಮಳೆಯಾಯಿತು. 

ಹಲವು ದಿನಗಳ ನಂತರ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಯಿತು. 

ಬಿರುಸಿನ ಮಳೆಗೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನೀರು ಕಟ್ಟಿಕೊಳ್ಳುವ ಸಮಸ್ಯೆ ಮರುಕಳಿಸಿತು. ಇತ್ತೀಚೆಗಷ್ಟೇ, ರಾಜಕಾಲುವೆಗೆ ಅಡ್ಡಲಾಗಿದ್ದ ಕಾವೇರಿ ನೀರಿನ ಪೈಪ್‌ ಅನ್ನು ₹11 ಲಕ್ಷ ವೆಚ್ಚದಲ್ಲಿ ತೆರವುಗೊಳಿಸಲಾಗಿತ್ತು. ಹಾಗಿದ್ದರೂ, ಗುರುವಾರ ಸಂಜೆ, ರಾಜಕಾಲುವೆ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆಯ ಸೆಸ್ಕ್‌ ಕಚೇರಿ ಮುಂಭಾಗ‌ದ ಚರಂಡಿ ಕಟ್ಟಿಕೊಂಡು ನೀರು ರಸ್ತೆಗೆ ಉಕ್ಕಿತು. ಜನರು ಓಡಾಡಲು ತೊಂದರೆ ಅನುಭವಿಸಿದರು. 

ನಗರಸಭೆ ತಕ್ಷಣವೇ ಜೆಸಿಬಿ ಮೂಲಕ ಚರಂಡಿಯಲ್ಲಿ ಕಟ್ಟಿಕೊಂಡ ಕಸ, ಕಡ್ಡಿ, ಪ್ಲಾಸ್ಟಿಕ್‌ಗಳನ್ನು ತೆರವುಗೊಳಿಸಿತಾದರೂ, ನೀರಿನ ಪ್ರಮಾಣ ಹೆಚ್ಚಿದ್ದುದರಿಂದ ನೀರು ಉಕ್ಕಿ ಹರಿಯುವುದು ನಿಲ್ಲಲಿಲ್ಲ. 

ಜನರಿಗೆ ಅಡಚಣೆ: ದಿಢೀರ್‌ ಆಗಿ ಸುರಿದ ಮಳೆಯಿಂದಾಗಿ ಜನರು ಅದರಲ್ಲೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮನೆಗೆ ಮರಳಲು ತೊಂದರೆ ಅನುಭವಿಸಿದರು. ಮಕ್ಕಳು ಮಳೆಯಲ್ಲಿ ನೆನೆದುಕೊಂಡೇ ಮನೆಯತ್ತ ಹೆಜ್ಜೆ ಹಾಕಿದರು. 

ಸಂಜೆ ಹೊತ್ತು ವಸ್ತುಗಳ ಖರೀದಿಗಾಗಿ ನಗರಕ್ಕೆ ಬಂದಿದ್ದ ಗ್ರಾಹಕರು ಮಳೆಯಿಂದ ರಕ್ಷಿಸಿಕೊಳ್ಳಲು ಮರಗಳ ಕೆಳಗೆ, ಅಂಗಡಿಗಳು, ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದರು. 

ಗೌಡಹಳ್ಳಿ ಸುತ್ತಮುತ್ತ ಮಳೆ: ಯಳಂದೂರು ತಾಲ್ಲೂಕು ವ್ಯಾಪ್ತಿಯ ಗೌಡಳ್ಳಿ ಗ್ರಾಮದ ಸುತ್ತಮುತ್ತ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಗುರುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು.

ಮುಸುಕಿನ ಜೋಳ, ಟೊಮೆಟೊ, ಮೆಣಸಿನಕಾಯಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಮಳೆ ತಂಪೆರೆಯಿತು.

ದಿನವಿಡೀ ಬಿಸಿಲು ಹಾಗೂ ಉಷ್ಣಾಂಶದಲ್ಲಿ ಏರಿಕೆ ಇತ್ತು. ಬಿಳಿಗಿರಿರಂಗನ ಬೆಟ್ಟದಲ್ಲಿ ತುಂತುರು ಮಳೆಯಾಗಿದೆ. 

ಚಾಮರಾಜನಗರದಲ್ಲಿ ಗುರುವಾರ ಸಂಜೆ ಸುರಿಯುತ್ತಿದ್ದ ಮಳೆಯ ನಡುವೆಯೇ ವಿದ್ಯಾರ್ಥಿಗಳು ಮನೆಯತ್ತ ಹೆಜ್ಜೆ ಹಾಕಿದರು
ಚಾಮರಾಜನಗರದಲ್ಲಿ ಗುರುವಾರ ಸಂಜೆ ಸುರಿಯುತ್ತಿದ್ದ ಮಳೆಯ ನಡುವೆಯೇ ವಿದ್ಯಾರ್ಥಿಗಳು ಮನೆಯತ್ತ ಹೆಜ್ಜೆ ಹಾಕಿದರು
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದ ಜೋಳದ ಬೆಳೆಗೆ ತಂಪೆರೆಯಿತು
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದ ಜೋಳದ ಬೆಳೆಗೆ ತಂಪೆರೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT