ಬುಧವಾರ, ಮಾರ್ಚ್ 29, 2023
27 °C
ಹೂವುಗಳಿಗೆ ಹೆಚ್ಚು ಬೇಡಿಕೆ, ಧಾರಣೆಯೂ ದುಬಾರಿ

ಮಳೆ, ಶುಭ ಸಮಾರಂಭ: ತರಕಾರಿ ತುಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ದೀಪಾವಳಿ ಹಬ್ಬ ಮುಗಿಯುತ್ತಲೇ ಮದುವೆ, ಗೃಹಪ್ರವೇಶ ಇನ್ನಿತರ ಶುಭ ಸಮಾರಂಭಗಳ ಋತು ಆರಂಭವಾಗಿದ್ದು ಮಾರುಕಟ್ಟೆಯಲ್ಲಿ ತರಕಾರಿಗಳು ಹಾಗೂ ಹೂವಿನ ಧಾರಣೆ ಹೆಚ್ಚಳವಾಗಿದೆ. 

ನಿರಂತರವಾಗಿ ಸುರಿಯುತ್ತಿರುವ ಮಳೆ ಕೂಡ ತರಕಾರಿಗಳ ಬೆಲೆಯ ಮೇಲೆ ಪರಿಣಾಮ ಬೀರಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. 

ಟೊಮೆಟೊ ಸೇರಿದಂತೆ ದಿನನಿತ್ಯ ಬಳಸುವ ಬಹುತೇಕ ತರಕಾರಿಗಳ ಬೆಲೆಯಲ್ಲಿ ಈ ವಾರ ಏರಿಕೆ ಕಂಡು ಬಂದಿದೆ. ಹಾಪ್‌ಕಾಮ್ಸ್‌ನಲ್ಲಿ ಟೊಮೆಟೊ, ಕ್ಯಾರೆಟ್‌, ಆಲೂಗಡ್ಡೆ, ಮೂಲಂಗಿ, ಗೆಡ್ಡೆಕೋಸು, ಹಸಿಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆ ಹೆಚ್ಚಿದೆ. 

ಕಳೆದ ವಾರ ಕೆಜಿಗೆ ₹40 ಇದ್ದ ಟೊಮೆಟೊ ಬೆಲೆ ಈ ವಾರ ₹50ಕ್ಕೆ ಏರಿದೆ. ಕ್ಯಾರೆಟ್‌ ಬೆಲೆ ₹10 ಹೆಚ್ಚಾಗಿ ₹40 ಕ್ಕೆ ತಲುಪಿದೆ. ₹20 ಇದ್ದ ಮೂಲಂಗಿ ₹30 ಆಗಿದೆ. ಗೆಡ್ಡೆಕೋಸಿಗೆ ₹60ರಿಂದ ₹80ರವರೆಗೂ ಬೆಲೆ ಇದೆ.  ₹25ರಿಂದ ₹30ರವರೆಗಿದ್ದ ಆಲೂಗಡ್ಡೆ ಕೆಜಿಗೆ ₹40 ಆಗಿದೆ.  ಹಸಿಮೆಣಸಿನಕಾಯಿ ಬೆಲೆ ₹10 ಏರಿಕೆ ಕಂಡಿದೆ. ದಪ್ಪಮೆಣಸಿನಕಾಯಿ, ನುಗ್ಗೆಕಾಯಿ ದುಬಾರಿ ತರಕಾರಿಗಳಾಗಿದ್ದು ಕೆಜಿಎಗೆ ₹120ಕ್ಕೆ ಮಾರಾಟವಾಗುತ್ತಿದೆ. 

‘ಮಳೆಯಿಂದಾಗಿ ಟೊಮೆಟೊ ಬೆಳೆಗೆ ತೊಂದರೆಯಾಗಿದೆ. ಇದರ ಜೊತೆಗೆ ಮದುವೆ ಸೀಸನ್‌ ಆರಂಭವಾಗಿದೆ. ಹಾಗಾಗಿ, ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ತಿಳಿಸಿದರು. 

ಹಣ್ಣುಗಳ ಧಾರಣೆ ಯಥಾಸ್ಥಿತಿ: ಕೆಲವು ವಾರಗಳಿಂದ ಹಣ್ಣುಗಳ ಧಾರಣೆ ಸ್ಥಿರವಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಸೇಬು, ದ್ರಾಕ್ಷಿ ಬೆಲೆ ₹120 ಇದೆ. ಮೂಸಂಬಿ, ಕಿತ್ತಳೆಗಳು ₹60ಕ್ಕೆ ಸಿಗುತ್ತಿವೆ. ದಾಳಿಂಬೆಗೆ ಕೆಜಿಗೆ ₹120ರಿಂದ ₹140ರವರೆಗೆ ಇದೆ. ಏಲಕ್ಕಿ ಬಾಳೆ (₹40) ಪಚ್ಚೆಬಾಳೆ (₹20) ಬೆಲೆಯಲ್ಲೂ ವ್ಯತ್ಯಾಸವಾಗಿಲ್ಲ. 

ಹೂವಿನ ಧಾರಣೆ ಗಗನಮುಖಿ

ದೀಪಾವಳಿ ಸಂದರ್ಭದಲ್ಲಿ ಏರುಮುಖವಾಗಿದ್ದ ಹೂವಿನ ಧಾರಣೆ ಈ ವಾರ ಮತ್ತಷ್ಟು ಹೆಚ್ಚಿದೆ. ಕಾರ್ತಿಕ ಸೋಮವಾರ ಸೇರಿದಂತೆ ಕಾರ್ತಿಕ ಮಾಸದ ವಿಶೇಷ ಪೂಜೆಗಳು ನಡೆಯುವುದರಿಂದ ಹಾಗೂ ಮದುವೆ ಸೇರಿದಂತೆ ಇತರೆ ಶುಭಸಮಾರಂಭಗಳ ಮುಹೂರ್ತಗಳು ಹೆಚ್ಚು ಇರುವುದರಿಂದ ಹೂವುಗಳಿಗೆ ಬೇಡಿಕೆ ಇದೆ. ಈ ತಿಂಗಳು ಪೂರ್ತಿ ಇದೇ ಬೆಲೆ ಇರಲಿದೆ ಎಂದು ಹೇಳುತ್ತಾರೆ ಬಿಡಿ ಹೂವಿನ ವ್ಯಾಪಾರಿಗಳು.

ನಗರಕ್ಕೆ ಸಮೀಪದ ಚೆನ್ನೀಪುರದಮೋಳೆಯ ಬಿಡಿಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರಕ್ಕೆ ₹800ರಿಂದ ₹1000ವರೆಗೆ ಬೆಲೆ ಇದೆ. ಕಾಕಡಕ್ಕೆ ₹400, ಸೇವಂತಿಗೆಗೆ ₹50ರಿಂದ ₹100, ಸುಗಂಧರಾಜಕ್ಕೆ ಕೆಜಿಗೆ ₹60, ಚೆಂಡು ಹೂವಿಗೆ ಕೆಜಿಗೆ ₹40 ಬೆಲೆ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.