ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಗುರು ಸೊಸೈಟಿ ಅವ್ಯವಹಾರ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

Published 17 ಮೇ 2024, 4:12 IST
Last Updated 17 ಮೇ 2024, 4:12 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಶ್ರೀ ವಿಶ್ವಗುರು ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಪೊಲೀಸರು ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಮಾಡ್ರಳ್ಳಿ ಮಹದೇವಪ್ಪ ಗುರುವಾರ ಒತ್ತಾಯಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ ಮೂಲದ ಸೊಸೈಟಿಯ ಚಾಮರಾಜನಗರ ಶಾಖೆಗೆ ಎಂ.ಕೆ.ಶಶಿಕುಮಾರ್‌ ಅಲಿಯಾಸ್‌ ಪೃಥ್ವಿ ಎಂಬುವವರನ್ನು ಮ್ಯಾನೇಜರ್‌ ಆಗಿ ನೇಮಕ ಮಾಡಲಾಗಿತ್ತು. ಅವರು ತಮ್ಮ ಹೆಸರಿಗೆ ₹16 ಲಕ್ಷ ಹಾಗೂ ಸಹೋದರ ವಿಜಯ್‌ಕುಮಾರ್ ಹೆಸರಿಗೆ ₹20 ಲಕ್ಷ ಸಾಲ ನೀಡಿದ್ದಲ್ಲದೆ, ಅವರಿಗೆ ಬೇಕಾದ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಿ ಸೊಸೈಟಿಯನ್ನು ಮುಚ್ಚಿದ್ದಾರೆ. ಈಗ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ’ ಎಂದರು. 

ಪ್ರಕರಣ ದಾಖಲಾದ ನಂತರ ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಪೃಥ್ವಿ ಸಾಕ್ಷ್ಯಗಳನ್ನು ನಾಶ ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಂತರ ಶರಣಾಗಿದ್ದಾರೆ. ಸೊಸೈಟಿಗೆ 400ಕ್ಕೂ ಹೆಚ್ಚು ಸದಸ್ಯರಿದ್ದರು. ನಾವು ಸೊಸೈಟಿಯಲ್ಲಿ ಇಟ್ಟ ಠೇವಣಿಗೆ ಸಂಬಂಧಿಸಿದ ದಾಖಲೆಗಳು, ಸೊಸೈಟಿ ವ್ಯವಹಾರ, ಷೇರುದಾರರಿಗೆ ಸಂಬಂಧಿಸಿದ ದಾಖಲೆಗಳನ್ನು ಆತ ನೀಡುತ್ತಿಲ್ಲ’ ಎಂದು ದೂರಿದರು. 

‘ನನ್ನನ್ನೂ ಸೇರಿದಂತೆ ರೈತ ಸಂಘದ ಹಲವರು ಲಕ್ಷಾಂತರ ರೂಪಾಯಿ ಠೇವಣಿ ಇರಿಸಿದ್ದಾರೆ. ಪೃಥ್ವಿ ಮೇಲೆ ವಿಶ್ವಾಸವಿಟ್ಟು, ನಮ್ಮ ಸ್ನೇಹಿತರು, ನೆಂಟರಿಷ್ಟರು ಅವರನ್ನೂ ಸೊಸೈಟಿಯ ಸದಸ್ಯರನ್ನಾಗಿ ಮಾಡಲಾಗಿತ್ತು. ಈಗ ಎಲ್ಲರಿಗೂ ವಂಚಿಸಿದ್ದಾರೆ’ ಎಂದು ಆರೋಪಿಸಿದರು. 

‘ಬೆಳಗಾವಿಯಲ್ಲಿರುವ ಪ್ರಧಾನ ಶಾಖೆ ಎರಡು ವರ್ಷಗಳ ಹಿಂದೆಯೇ ಮುಚ್ಚಿದ್ದರೂ, ಅದಿನ್ನೂ ನಡೆಯುತ್ತಿದೆ ಎಂದು ನಂಬಿಸಿ, ಇಲ್ಲಿ ವ್ಯವಹಾರ ನಡೆಸಿದ್ದಾರೆ. ದೊಡ್ಡ ಮಟ್ಟಿನ ವಂಚನೆ ನಡೆಸಿದ್ದರೂ, ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ. ಹಾಗಾಗಿ, ಹಿರಿಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ, ನ್ಯಾಯಸಮ್ಮತ, ಪಾರದರ್ಶಕ ತನಿಖೆ ನಡೆಸಬೇಕು’ ಎಂದು ಮಹದೇವಪ್ಪ ಆಗ್ರಹಿಸಿದರು. 

ರೈತಸಂಘದ ಉಪಾಧ್ಯಕ್ಷ ಕುಂದುಕೆರೆ ಸಂಪತ್ತು, ರೈತ ಮುಖಂಡರಾದ ಮಹೇಶ್, ಪುಟ್ಟರಾಜು, ಕಂದೇಗಾಲ ಮಹೇಶ್, ಶಿವಣ್ಣ, ತಂಗವೇಲು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT