ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಟೆ ಬಿಟ್ಟು ಕಂಪ್ಯೂಟರ್‌ನತ್ತ ಮಕ್ಕಳ ಚಿತ್ತ

ತೆಂಕಲಮೋಳೆ ಗ್ರಾಮದಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮದಿಂದ ಹಲವು ಚಟುವಟಿಕೆಗಳು
Last Updated 3 ಜುಲೈ 2022, 1:58 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿಯ ತೆಂಕಲಮೋಳೆ ಗ್ರಾಮದ ಮಕ್ಕಳು ಪ್ರತಿದಿನ ಶಾಲೆ ಮುಗಿದ ನಂತರ ತಮ್ಮ ಪೋಷಕರ ಜೊತೆಗೂಡಿ ಪ್ಲಾಸ್ಟಿಕ್ ಚೀಲದಿಂದ ಹಗ್ಗ ತಯಾರಿಸಲು ರಾಟೆ ಸುತ್ತುತ್ತಿದ್ದರು. ಇದೀಗ ಆ ಮಕ್ಕಳು ಕಂಪ್ಯೂಟರ್, ಯೋಗ, ಧ್ಯಾನ ಹಾಗೂ ಶಿಕ್ಷಣದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಇದಕ್ಕೆ ಕಾರಣವಾಗಿರುವುದು ಗ್ರಾಮದಲ್ಲಿಮೈಸೂರಿನ ರಾಮಕೃಷ್ಣ ಮಠ ನಿರ್ಮಿಸಿರುವ ರಾಮಕೃಷ್ಣ ಸೇವಾ ಮಂದಿರ.

ಮೈಸೂರಿನ ರಾಮಕೃಷ್ಣ ಮಠದ ಸುರೇಶಾನಂದಾಜೀ ಮಹಾರಾಜ್ ಅವರು ಈ ಗ್ರಾಮವನ್ನು ಅಭಿವೃದ್ಧಿಪಡಿಸುವ ಕನಸು ಹೊಂದಿದ್ದರು. ಅವರ ಕನಸನ್ನು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಅವರು ಸಾಕಾರಗೊಳಿಸುತ್ತಿದ್ದಾರೆ.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮವನ್ನು ಮೇಲಕ್ಕೆತ್ತಲು ಮಠವು 2016ರಲ್ಲಿ ರಾಮಕೃಷ್ಣ ಸೇವಾ ಮಂದಿರ ಆರಂಭಿಸಿತ್ತು.

ಸಾಮಾಜಿಕ ಕಾರ್ಯಗಳು: ಗ್ರಾಮದ ಜನರಿಗಾಗಿ ಇಲ್ಲಿ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ, ಔಷಧ ವಿತರಿಸುವ ಕಾರ್ಯಕ್ರಮ ನಡೆಯುತ್ತದೆ. ಚಳಿಗಾಲ, ಮಳೆಗಾಲ ಹಾಗೂ ಬೇಸಿಗೆಯಲ್ಲಿ ಗ್ರಾಮಸ್ಥರಿಗೆ ಉಡುಪುಗಳು ಹಾಗೂ ಉಣ್ಣೆ ಹೊದಿಕೆಗಳನ್ನು ನೀಡಲಾಗುತ್ತಿದೆ.

ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಗ್ರಾಮದ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ದೊರಕುವಂತೆ ಮಠವು ಮಾಡಿದೆ. ಆಗಾಗ್ಗೆ ಆಹಾರ ಕಿಟ್‍ಗಳನ್ನು ನೀಡಲಾಗುತ್ತಿದೆ. ಸುತ್ತಲಿನ ತೊರವಳ್ಳಿ ಮೋಳೆ, ಮೂಡಲ ಅಗ್ರಹಾರ, ಬಡಗಲ ಮೋಳೆ ಹಾಗೂ ದೇಮಹಳ್ಳಿ ಮೋಳೆ ಗ್ರಾಮಸ್ಥರು ಈ ಸೌಲಭ್ಯಗಳನ್ನು ಪಡೆದಿದ್ದಾರೆ.

ವಸತಿ ವಂಚಿತರಿಗೆ 125 ಮನೆಗಳನ್ನು ನಿರ್ಮಿಸಿಕೊಡುವುದರ ಜತೆಗೆ ಕುದೇರು ನಂಜನಗೂಡು ಮುಖ್ಯ ರಸ್ತೆಯಲ್ಲಿ ಪ್ರತ್ಯೇಕವಾಗಿ ಜೋಗಿ (ಹಂದಿ) ಕುಟುಂಬಗಳಿಗೆ ಸ್ವಾಮಿ ವಿವೇಕಾನಂದ ಕಾಲೊನಿಯನ್ನೂ ಮಠ ನಿರ್ಮಿಸಿದೆ.

ಮಕ್ಕಳಿಗೆ ಕಾಳಜಿ: ಮಠವು ಈ ಮಂದಿರದ ಮೂಲಕ ಗ್ರಾಮದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ.

ಶಾಲೆಗೆ ಹೋಗುವ ಮಕ್ಕಳು ಶಾಲೆ ಮುಗಿದ ನಂತರ ಆಶ್ರಮದಲ್ಲಿ ಕೊಟ್ಟಿರುವ ಸಮವಸ್ತ್ರ ಧರಿಸಿ ಆಶ್ರಮಕ್ಕೆ ಬರುತ್ತಾರೆ. ಮಂದಿರದಲ್ಲಿರುವ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ಗರ್ಭ ಗುಡಿಯಲ್ಲಿ ಧ್ಯಾನ, ಪ್ರಾರ್ಥನೆ ಸಲ್ಲಿಸುತ್ತಾರೆ.

ಮಕ್ಕಳನ್ನು ನೋಡಿಕೊಳ್ಳುವುದಕ್ಕಾಗಿ ಮೂವರು ಶಿಕ್ಷಕರನ್ನು ನಿಯೋಜಿಸಲಾಗಿದೆ.ಧ್ಯಾನ ಮುಗಿದ ನಂತರ ಪಠ್ಯಕ್ಕೆ ಸಂಬಂಧಿಸಿದಂತೆ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಮಕ್ಕಳು ಶಾಲೆಯಲ್ಲಿ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಆಶ್ರಮದ ಶಿಕ್ಷಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತಾರೆ. ಕಂಪ್ಯೂಟರ್ ಶಿಕ್ಷಣವನ್ನೂ ಹೇಳಿ ಕೊಡಲಾಗುತ್ತದೆ. ಪ್ರತಿದಿನ ತರಗತಿ ಮುಗಿದ ಮೇಲೆ ಹಾಲು ಹಾಗೂ ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ನೀಡಲಾಗುತ್ತದೆ.

ಶನಿವಾರ ಪಠ್ಯಕ್ಕೆ ಸಂಬಂಧಿಸಿದಂತೆ ಚಿತ್ರಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಪ್ರತಿ ಭಾನುವಾರ ಯೋಗ ತರಗತಿಯೂ ನಡೆಯುತ್ತದೆ. ಸಮವಸ್ತ್ರ, ನೋಟ್ ಪುಸ್ತಕ, ಪೆನ್‌, ಪೆನ್ಸಿಲ್, ಬ್ಯಾಗ್‍ಗಳು ಹಾಗೂ ತಿಂಗಳಿಗೊಮ್ಮೆ ಕೊಬ್ಬರಿ ಎಣ್ಣೆ, ಸೋಪ್‍ಗಳನ್ನು ನೀಡಲಾಗುತ್ತಿದೆ. ಬಾಲಕ, ಬಾಲಕಿಯರು ಸೇರಿದಂತೆ 55 ಮಕ್ಕಳು ಈ ಆಶ್ರಮದ ಸೌಲಭ್ಯ ಪಡೆಯುತ್ತಿದ್ದಾರೆ.

‘ಸಾಧನೆ ಮಾಡುತ್ತಿರುವ ಮಕ್ಕಳು’

ಆಶ್ರಮದ ಮೇಲ್ವಿಚಾರಕ ಹಾಗೂ ಶಿಕ್ಷಕ ಚೇತನ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ತರಗತಿ ವೇಳೆಯಲ್ಲಿ ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಚೆಸ್, ಥ್ರೋ ಬಾಲ್ ಆಟಗಳನ್ನು ಆಡಿಸಲಾಗುತ್ತದೆ. ಜತೆಗೆ ಆಶ್ರಮದಲ್ಲಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಕ್ಕಳೇ ಪುಸ್ತಕಗಳನ್ನು ವಾರಕ್ಕೊಮ್ಮೆ ಎರವಲು ಮಾಡಿಕೊಳ್ಳುತ್ತಾ ಬಂದಿದ್ದಾರೆ’ ಎಂದರು.

‘ಗ್ರಾಮದ ಮಕ್ಕಳು ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದ್ದರು. ಆಶ್ರಮಕ್ಕೆ ಬಂದ ಮೇಲೆ ಅವರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸುಧಾರಣೆ ಕಂಡಿದ್ದಾರೆ. ಬೇರೆ ಸ್ಥಳಗಳಲ್ಲಿ ಯಾವುದೇ ಸ್ಪರ್ಧೆ ನಡೆದರೂ ನಮ್ಮ ಆಶ್ರಮದ ಮಕ್ಕಳು ಬಹುಮಾನ ಗೆಲ್ಲುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT