ಗುರುವಾರ , ಸೆಪ್ಟೆಂಬರ್ 23, 2021
20 °C
ಪಡಿತರ ಚೀಟಿ ಇ-ಕೆವೈಸಿ: ಪೂರ್ಣಗೊಳ್ಳದ ಪ್ರಕ್ರಿಯೆ, ಪಡಿತರ ಕೈ ತಪ್ಪುವ ಆತಂಕ

ಪಡಿತರ ಚೀಟಿ ಇ–ಕೆವೈಸಿಗೆ ಮುಗಿದ ಗಡುವು, ಮುಗಿಯದ ದೃಢೀಕರಣ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅಂತ್ಯೋದಯ, ಬಿಪಿಎಲ್ ಸೇರಿದಂತೆ ಎಲ್ಲ ಪಡಿತರ ಚೀಟಿದಾರರು ಇ-ಕೆವೈಸಿ  (ಗ್ರಾಹಕರ ವಿವರ ದೃಢೀಕರಣ) ಮಾಡಿಸಿಕೊಳ್ಳಲು ನೀಡಿದ್ದ ಗಡುವು ಮುಗಿದಿದ್ದು, ಎಲ್ಲರ ಇ-ಕೆವೈಸಿ ಇನ್ನೂ ಆಗಿಲ್ಲ. 

ಆಹಾರ ಇಲಾಖೆಯು ಆಗಸ್ಟ್ 1ರಿಂದ 10ರವರೆಗೆ ಜಿಲ್ಲೆಯ ಎಲ್ಲ ‌ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ನೀಡಿತ್ತು. ಇದೇ ಅಂತಿಮ ಅವಕಾಶವಾಗಿದ್ದು, ವಿವರ ದೃಢೀಕರಣ ಮಾಡಿಸದವರಿಗೆ ಮುಂದಿನ ದಿನಗಳಲ್ಲಿ ಪಡಿತರ ಸ್ಥಗಿತಗೊಳಿಸಲಾಗುವುದು ಎಂದೂ ಹೇಳಿತ್ತು.

ಅದರಂತೆ ಜಿಲ್ಲೆಯಾದ್ಯಂತ 10 ದಿನಗಳ ಅಭಿಯಾನ ನಡೆದಿದೆ. ಸರ್ವರ್ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಮಾಹಿತಿ ಕೊರತೆಯಿಂದ ಎಲ್ಲರಿಗೂ ಇ-ಕೆವೈಸಿ ಮಾಡಿಸಲು ಸಾಧ್ಯವಾಗಿಲ್ಲ.

ದೃಢೀಕರಣ ಮಾಡಿಸದವರಿಗೆ ಇನ್ನು‌ಮುಂದೆ ಪಡಿತರ ನೀಡುವುದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಿರುವುದರಿಂದ ಫಲಾನುಭವಿಗಳು ಪಡಿತರ ಕೈ ತಪ್ಪುವ ಆತಂಕಕ್ಕೆ ಒಳಗಾಗಿದ್ದಾರೆ.

‘ನಮ್ಮ ಗ್ರಾಮ‌ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಶೇ 50ರಷ್ಟು ಮಂದಿ‌ ಇ-ಕೆವೈಸಿ ಮಾಡಿಸಿಕೊಳ್ಳಲು ಬಾಕಿ ಇದ್ದಾರೆ. ನ್ಯಾಯಬೆಲೆ ಅಂಗಡಿಯವರು ಈ ಬಗ್ಗೆ ಗ್ರಾಮದಲ್ಲಿ ಪ್ರಚಾರ ನಡೆಸಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದು ಜನರಿಗೆ ಗೊತ್ತಿಲ್ಲ. ಹೀಗಾಗಿ‌ ಎಲ್ಲರೂ ದೃಢೀಕರಣ ಮಾಡಿಸಿಕೊಂಡಿಲ್ಲ’ ಎಂದು ತಾಲ್ಲೂಕಿನ ಕೋಳಿಪಾಳ್ಯದ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘10ನೇ ತಾರೀಖು ಇ-ಕೆವೈಸಿ ಮಾಡಿಸಲು ಕೊನೆಯ‌ ದಿನವಾಗಿತ್ತು. ಆ ದಿನ ನಮ್ಮ ಊರಿನಲ್ಲಿ ವಿದ್ಯುತ್ ಇರಲಿಲ್ಲ. ಹೀಗಿರುವಾಗ ಇ-ಕೆವೈಸಿ ಮಾಡಿಸುವುದಾದರೂ ಹೇಗೆ? 10ರ ನಂತರ ಅವಧಿ‌ ವಿಸ್ತರಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ಅವರು ಮಾಹಿತಿ‌ ನೀಡಿದರು.

ಕೋಳಿ ಪಾಳ್ಯದ್ದು ಮಾತ್ರ ಅಲ್ಲ, ಜಿಲ್ಲೆಯ ಹಲವು ಕಡೆಗಳಲ್ಲಿ ಇದೇ ಸಮಸ್ಯೆ ಎದುರಾಗಿದೆ. ಪಡಿತರ ಚೀಟಿಗಳಲ್ಲಿ ಹೆಸರು‌ ಇರುವ ಎಲ್ಲರೂ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ, ಬೆರಳಚ್ಚು ಹಾಗೂ ಇತರ ವಿವರಗಳನ್ನು‌ ನೀಡಿ ದೃಢೀಕರಣ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ವಿದ್ಯುತ್ ಇರಬೇಕು. ಎಲ್ಲವೂ ಆನ್ ಲೈನ್‌ನಲ್ಲೇ ಆಗುವುದರಿಂದ ಇಂಟರ್‌ನೆಟ್‌ ಕೂಡ ಇರಬೇಕು. ಹಲವು ಕಡೆಗಳಲ್ಲಿ ಇಂಟರ್‌ನೆಟ್ ಸಮಸ್ಯೆಯೂ ಇದೆ. ಸರ್ವರ್ ಸಮಸ್ಯೆಯೂ‌ ಕೆಲವು ಕಡೆಗಳಲ್ಲಿ ಬಾಧಿಸಿದೆ. ಹೀಗಾಗಿ ನಿಗದಿಯಂತೆ ಇ-ಕೆವೈಸಿ ಮಾಡಲು ಸಾಧ್ಯವಾಗಿಲ್ಲ.

ಅವಧಿ ವಿಸ್ತರಣೆ ಸಾಧ್ಯತೆ

ರಾಜ್ಯದಾದ್ಯಂತ 10 ದಿನಗಳಲ್ಲಿ ನಡೆದಿರುವ ಇ-ಕೆವೈಸಿ ಅಂಕಿ ಅಂಶಗಳನ್ನು ಪರಿಶೀಲಿಸಿ ಒಂದೆರಡು ದಿನಗಳಲ್ಲಿ ‌ನಿರ್ಧಾರ‌ ಕೈಗೊಳ್ಳಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ದೃಢೀಕರಣ ಮಾಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಕೊನೆಯ ಅವಕಾಶ ಎಂದು ಹೇಳಲಾಗಿತ್ತು. ಮತ್ತೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ ಇಲಾಖೆಯ ಅಧಿಕಾರಿಗಳು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ‌ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ ಅವರು, ‘ಸರ್ಕಾರ ಇ-ಕೆವೈಸಿ ಮಾಡಿಸಲು 10 ದಿನಗಳ ಅವಕಾಶ ನೀಡಿತ್ತು. ಅವಧಿ ವಿಸ್ತರಿಸುವ ಬಗ್ಗೆ ರಾಜ್ಯ ಮಟ್ಟದಲ್ಲೇ ನಿರ್ಧಾರ‌ ಕೈಗೊಳ್ಳಬೇಕಿದೆ. ಸರ್ಕಾರದ ಆದೇಶದಂತೆ ನಡೆದುಕೊಳ್ಳಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.