ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಲಿಯೋ ನಿರ್ಮೂಲನೆ ರೋಟರಿ ಗುರಿ: ಕೇಶವ್‌

ಚಾ.ನಗರ ವಿವಿ ಮಹಿಳಾ ಹಾಸ್ಟೆಲ್‌ಗೆ ಕುಡಿಯುವ ನೀರಿನ ಘಟಕದ ಕೊಡುಗೆ
Published 21 ಫೆಬ್ರುವರಿ 2024, 4:44 IST
Last Updated 21 ಫೆಬ್ರುವರಿ 2024, 4:44 IST
ಅಕ್ಷರ ಗಾತ್ರ

ಚಾಮರಾಜನಗರ: ‘ರೋಟರಿ ಸಂಸ್ಥೆಯು ಜಗತ್ತಿನಲ್ಲಿ ಪೋಲಿಯೋ ನಿರ್ಮೂಲನೆಗಾಗಿ ಶ್ರಮಿಸುತ್ತಿದ್ದು ಈ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡಿದೆ’ ಎಂದು ರೋಟರಿ ಜಿಲ್ಲೆ 3181ರ ಗವರ್ನರ್‌ ಎಚ್.ಆರ್.ಕೇಶವ್‌ ಮಂಗಳವಾರ ಹೇಳಿದರು.

ತಾಲ್ಲೂಕಿನ ಬೇಡರಪುರದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್‌ಗೆ ರೋಟರಿ ಸಂಸ್ಥೆ ಕೊಡುಗೆಯಾಗಿ ನೀಡಿರುವ ಶುದ್ಧ ಕುಡಿಯುವ ನೀರಿನ ಘಟಕದ (ಆರ್‌ಒ ಪ್ಲಾಂಟ್) ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಮಹಾಮಾರಿ ಪೋಲಿಯೋ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ. ಇದರಲ್ಲಿ ರೋಟರಿಯ ಕೊಡುಗೆ ಅಪಾರ. ಸಂಸ್ಥೆಯು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ’ ಎಂದರು.

ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ‘ನಮ್ಮ ಸಂಸ್ಥೆಯಲ್ಲಿ ಅನೇಕ ಮೂಲ ಸೌಕರ್ಯಗಳು ಆಗಬೇಕಿವೆ. ಮಕ್ಕಳಿಗೆ ಶುದ್ದ ಕುಡಿಯುವ ನೀರು ಕೊಡಿಸುವ ನಿಟ್ಟಿನಲ್ಲಿ ನಮ್ಮ ಮನವಿಗೆ ರೋಟರಿ ಸ್ಪಂದಿಸಿ ಆರ್‌ಒ ಪ್ಲಾಂಟ್ ಅಳವಡಿಸಿರುವುದು ಸಂತಸ ತಂದಿದೆ’ ಎಂದರು.

ಡಯಾಲಿಸಿಸ್ ಕೇಂದ್ರದ ಕಟ್ಟಡ ಉದ್ಘಾಟನೆ: ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ‌  ರೋಟರಿ ಭವನದಲ್ಲಿ ಡಯಾಲಿಸಿಸ್ ಕೇಂದ್ರಕ್ಕಾಗಿ ನವೀಕರಿಸಿರುವ ಕಟ್ಟಡವನ್ನು ಕೇಶವ್‌ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಸಂಸ್ಥೆಯು ನಗರದ ಕ್ಷೇಮ ಆಸ್ಪತ್ರೆಯಲ್ಲಿ ಈಗಾಗಲೇ ₹499ಕ್ಕೆ ಡಯಾಲಿಸಿಸ್ ಸೇವೆ ಮಾಡುತ್ತಿದ್ದು, ಆ ಸೇವೆಯನ್ನು ಸ್ವಂತ ಕಟ್ಟಡದಲ್ಲಿ ಕೊಡಬೇಕು ಎಂದು ರೋಟರಿ ಭವನದಲ್ಲಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಮಾಡಲಾಗಿದೆ. ಇದರ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ವಿಜ್ಞಾನ ಪ್ರಯೋಗಾಲಯ ಕೊಡುಗೆ: ತಾಲ್ಲೂಕಿನ ವೆಂಕಟಯ್ಯನಛತ್ರ ಸರ್ಕಾರಿ ಶಾಲೆಗೆ ವಿಜ್ಞಾನ ಪ್ರಯೋಗಾಲಯಕ್ಕಾಗಿ ರೋಟರಿ ಸಂಸ್ಥೆ ₹ 50 ಸಾವಿರ ಮೌಲ್ಯದ ಸಲಕರಣೆಗಳನ್ನು ನೀಡಿದ್ದು, ಮಂಗಳವಾರ ಕೇಶವ್‌ ಅವರು ಹಸ್ತಾಂತರಿಸಿದರು.

ರೋಟರಿ ಅಧ್ಯಕ್ಷ ಸಿ.ಎನ್.ಚಂದ್ರಪ್ರಭ ಜೈನ್, ಕಾರ್ಯದರ್ಶಿ ಅಬ್ದುಲ್ ಅಜೀಜ್ ದೀನಾ, ಸಿಲ್ಕ್ ಸಿಟಿ ಅಧ್ಯಕ್ಷ ಅಕ್ಷಯ್, ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆರ್. ಅಶ್ವಥ್‌ನಾರಾಯಣ್, ಶ್ರೀನಿವಾಸಶೆಟ್ಟಿ, ಸಹಾಯಕ ಜಿಲ್ಲಾ ಗವರ್ನರ್‌ ಪ್ರಕಾಶ್, ವಲಯ ಪ್ರತಿನಿಧಿ ಚೈತನ್ಯ ಹೆಗಡೆ. ಖಜಾಂಚಿ ಆರ್.ಎನ್.ಸ್ವಾಮಿ, ಉಪಾಧ್ಯಕ್ಷ ಕಾಗಲವಾಡಿ ಚಂದ್ರು, ಸದಸ್ಯರಾದ ಕೆಂಪನಪುರ ಮಹದೇವಸ್ವಾಮಿ, ಸಿದ್ದರಾಜು, ಕಮಲ್ ರಾಜ್, ರಾಮು, ನಾರಾಯಣ, ಸಂಜಯ್ ಕುಮಾರ್ ಜೈನ್, ವಿಶ್ವಾಸ್, ರಾಜು ವರ್ಗೀಸ್, ರತ್ನಮ್ಮ, ವಿವಿಯ ಪಿಎಂಇಬಿ ನಿರ್ದೇಶಕ ಡಾ.ಸಿದ್ದರಾಜು, ವಾರ್ಡನ್‌ ಭಾಗ್ಯ, ಪ್ರಾಧ್ಯಾಪಕದ ಡಾ.ಕುಮಾರ್, ಚೇತನ್, ಮಹದೇವಸ್ವಾಮಿ, ಡಾ.ನಾಗಾರ್ಜನ್, ವೆಂಕಟನಾಗಪ್ಪಶೆಟ್ಟಿ, ರಮೇಶ್, ರಾಮಸಮುದ್ರ ನಾಗರಾಜು, ದೊಡ್ಡರಾಯಪೇಟೆ ಗಿರೀಶ್, ಅಜೇಯ್ ಇತರರು ಇದ್ದರು.

‘ಮಳೆ ನೀರು ಸಂಗ್ರಹ ಅಂಗನವಾಡಿ ಅಭಿವೃದ್ಧಿ ಗುರಿ’

ಚಾಮರಾಜನಗರ: ‘ರೋಟರಿ ಸಂಸ್ಥೆಯು 118 ವರ್ಷಗಳಿಂದ ವೈವಿಧ್ಯತೆ ಸಮಾನತೆ ಮತ್ತು ಎಲ್ಲವನ್ನೂ ಒಳಗೊಳ್ಳುವಿಕೆ ಎಂಬ ತತ್ವಗಳ ಅಡಿಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಚಾಮರಾನಗರದಲ್ಲಿ ರೋಟರಿ ಸಂಸ್ಥೆ ಹಾಗೂ ರೋಟರಿ ಸಿಲ್ಕ್‌ ಸಿಟಿಗಳು ಅತ್ಯುತ್ತಮ ಕೆಲಸ ಮಾಡುತ್ತಿವೆ’ ಎಂದು ರೋಟರಿ ಜಿಲ್ಲೆ 3181ರ ಗವರ್ನರ್‌ ಎಚ್‌.ಆರ್‌.ಕೇಶವ್‌ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಎರಡೂ ಕ್ಲಬ್‌ಗಳು ಆರೋಗ್ಯ ಶಿಬಿರ ರಕ್ತದಾನ ಶಿಬಿರಗಳಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುತ್ತಿವೆ. ಸಂಸ್ಥೆಯ ವತಿಯಿಂದ ಸಿಮ್ಸ್‌ಗೆ ರಕ್ತ ನಿಧಿ ಕೇಂದ್ರ ಡಯಾಲಿಸಿಸ್‌ ಕೇಂದ್ರಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಕ್ಷೇಮ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರವನ್ನು ನಿರ್ವಹಿಸುತ್ತಿದೆ. ರೋಟರಿ ಭವನದಲ್ಲಿ 10 ಯಂತ್ರಗಳುಳ್ಳ ಡಯಾಲಿಸಿಸ್‌ ಕೇಂದ್ರ ಸ್ಥಾಪಿಸುತ್ತಿದೆ. ವೆಂಕಟಯ್ಯನ ಛತ್ರದ ಶಾಲೆಗೆ ವಿಜ್ಞಾನ ಪ್ರಯೋಗಾಲಯವನ್ನು ಕೊಡುಗಡೆಯಾಗಿ ನೀಡಿದೆ’ ಎಂದರು. ‘ಈ ವರ್ಷ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮತ್ತು ಮಳೆ ನೀರ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಿದೆ’ ಎಂದರು.   ಸಹಾಯಕ ಗವರ್ನರ್‌ ಪ್ರಕಾಶ್‌ ವಲಯ ಪ್ರತಿನಿಧಿ ಚೈತನ್ಯ ಹೆಗಡೆ ರೋಟರಿ ಅಧ್ಯಕ್ಷ ಚಂದ್ರಪ್ರಭ ಜೈನ್‌ ಕಾರ್ಯದರ್ಶಿ ಅಬ್ದುಲ್ ಅಜೀಜ್ ದೀನಾ ರೋಟರಿ ಸಿಲ್ಕ್‌ ಸಿಟಿ ಅಧ್ಯಕ್ಷ ಅಕ್ಷಯ್‌ ಕಾರ್ಯದರ್ಶಿ ಮಾಣಿಕ್ ಚಂದ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT