ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚದ ಅತ್ಯಂತ ಶಕ್ತಿಯುತ ಭಾಷೆ ಕನ್ನಡ: ಪ್ರೊ.ಕೃಷ್ಣೇಗೌಡ

ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ, ಮೂರು ನಿರ್ಣಯಗಳ ಅಂಗೀಕಾರ
Last Updated 17 ಫೆಬ್ರುವರಿ 2021, 3:34 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭಾಷೆ ಎನ್ನುವುದು ಕೇವಲ ಸಂವಹನ ಮಾತ್ರವಲ್ಲ; ಅದು ಒಂದು ಅಸ್ಮಿತೆ, ವ್ಯಕ್ತಿತ್ವ. ಪ್ರಪಂಚದ ಅತ್ಯಂತ ಶಕ್ತಿಯುತ ಹಾಗೂ ಅದ್ಭುತ ಅರಿವಿನ ಭಾಷೆ ಎಂದರೆ ಅದು ಕನ್ನಡ’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರು ಮಂಗಳವಾರ ಬಣ್ಣಿಸಿದರು.

ಚಾಮರಾಜನಗರ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬದುಕು ಇಲ್ಲದಿದ್ದರೆ, ಬರೀ ಭಾಷೆಗೆ ಅರ್ಥ ಇರುವುದಿಲ್ಲ. ಅದಕ್ಕೆ ಅರ್ಥವನ್ನು ಕೊಟ್ಟಿದ್ದು ನಾವು.ಹಿಂದೆ ಬದುಕಿದ್ದ ಕೋಟ್ಯಂತರ ಜನ ಕನ್ನಡದಲ್ಲೇ ಬಾಳಿದ್ದಾರೆ. ಈಗಲೂ ಬದುಕುತ್ತಿದ್ದಾರೆ. ನನಗೂ ಅನ್ನ, ಗೌರವ ನೀಡಿದ ಭಾಷೆ ಕನ್ನಡ’ ಎಂದರು.

‘ಕನ್ನಡ ನಮಗೆ ಸಹಜ ಭಾಷೆ. ಇಂಗ್ಲಿಷ್‌ ಕಲಿತ ಭಾಷೆ. ಕನ್ನಡದಲ್ಲಿ ನಾವು ಅಂತರಂಗದಿಂದ ಮಾತನಾಡುತ್ತೇವೆ. ಆದರೆ, ಇಂಗ್ಲಿಷ್‌ನಲ್ಲಿ ನಮಗೆ ಅದು ಸಾಧ್ಯವಾಗುವುದಿಲ್ಲ. ಕನ್ನಡ ಭಾಷೆಯಲ್ಲಿ ನಮ್ಮ ಅಂತರರಂಗದ ಅಭಿವ್ಯಕ್ತಿ ತೆರೆದುಕೊಳ್ಳುತ್ತದೆ’ ಎಂದು ವಿವರಿಸಿದರು.

‘ಒಂದು ವೇಳೆ, ಕನ್ನಡಕ್ಕೆ ಆತಂಕ ಇದೆ ಎಂದಾದರೆ ಅದು ಭಾಷೆಗೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ಹಾಗೂ ಜನರ ಅಸ್ತಿತ್ವಕ್ಕೆ ಬಂದ ಆತಂಕ’ ಎಂದು ಕೃಷ್ಣೇಗೌಡ ಅವರು ಹೇಳಿದರು.

ಜಿಲ್ಲೆಯ ಭಾಷೆ ಸೊಗಸು: ಚಾಮರಾಜನಗರ ಜಿಲ್ಲೆಯ ಜಾನಪದ ಸಂಸ್ಕೃತಿ ಹಾಗೂ ಭಾಷಾ ಸೊಗಡಿನ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಅವರು, ‘ಮಣ್ಣಿನಲ್ಲಿ ತಾಕತ್ತಿದ್ದರೆ, ಅಲ್ಲಿ ಘನವಾದ ವ್ಯಕ್ತಿಗಳು ಜನಿಸುತ್ತಾರೆ. ಜಿಲ್ಲೆಯ ಮಣ್ಣಿನಲ್ಲಿ ಅಂತಹ ತಾಕತ್ತಿದೆ. ಜಾನಪದ ಜಗದ್ಗುರುಗಳಾದ ಮಹದೇಶ್ವರರು, ಮಂಟೇಸ್ವಾಮಿ, ಬಿಳಿಗಿರಿರಂಗಯ್ಯ ಎಲ್ಲ ಇಲ್ಲಿಯವರೇ’ ಎಂದರು.

ಕುವೆಂಪು ಅವರ ಶಿಷ್ಯರಾಗಿದ್ದ ಸಾಹಿತಿ ಹಾಗೂ ತಾಲ್ಲೂಕಿನವರಾದ ಪ್ರಭುಶಂಕರ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಅವರು, ‘ಶ್ರೇಷ್ಠ ವ್ಯಕ್ತಿಯಾದ ಪ್ರಭುಶಂಕರ ಅವರಂತಹವರಿಗೆ ಜನ್ಮಕೊಡುವ ಶಕ್ತಿ ಇಲ್ಲಿನ ಮಣ್ಣಿಗೆ ಇದೆ’ ಎಂದು ಅಭಿಪ್ರಾಯಟ್ಟರು.

ಸಮಾರೋಪ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಸಮ್ಮೇಳನಾಧ್ಯಕ್ಷ ಮಂಜು ಕೋಡಿಉಗನೆ, ಅವರ ಪತ್ನಿ ರಾಜಮಣಿ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರವೀಶ್‌ ಇತರರು ಇದ್ದರು.

ನಗೆಗಡಲಲ್ಲಿ ತೇಲಿದ ಸಭಿಕರು

ಸಮಾರೋಪ ಸಮಾರಂಭದ ಭಾಷಣದಲ್ಲಿ ಪ್ರೊ.ಕೃಷ್ಣೇಗೌಡರು ಹಾಸ್ಯದ ಹೊನಲನ್ನೇ ಹರಿಸಿದರು. ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಭರ್ತಿಯಾಗಿದ್ದ ಸಭಿಕರು ನಗೆಗಡಲಲ್ಲಿ ತೇಲಿದರು. ಸಮಾರೋಪ ಸಮಾರಂಭವು ಗಂಭೀರವಾದ ಸಮಾರಂಭದ ಬದಲು, ಬದಲು ಹಾಸ್ಯ ಸಂಜೆಯಾಗಿ ಬದಲಾಯಿತು.

ಒಂದು ಗಂಟೆ ಕಾಲ ಮಾತನಾಡಿದ ಅವರು ಭಾಷೆಯಲ್ಲಿರುವ ವೈವಿಧ್ಯ, ಜನ ಸಾಮಾನ್ಯರು ಕೋಪ, ದುಃಖದ ಸಮಯದಲ್ಲಿ ತಮ್ಮ ಅಂತರಂಗವನ್ನು ವ್ಯಕ್ತಪಡಿಸುವ ರೀತಿ, ಕವಿಗಳು ತಮ್ಮ ಕಲ್ಪನೆಯ ಲೋಕಗಳನ್ನು ಪದಗಳಲ್ಲಿ ಹಿಡಿದಿಡುವ ಪರಿಗಳನ್ನು ವಿವಿಧ ಕವಿಗಳ ಹಾಡಿನ ಮೂಲಕ, ದಾಸರ ಪದಗಳ ಮೂಲಕ, ವಚನಕಾರರ ವಚನಗಳ ಮೂಲಕ ವಿವರಿಸಿದರು.

ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಹಾಸನ, ಉತ್ತರ ಕರ್ನಾಟಕ ಭಾಗದಲ್ಲಿ ಬಳಕೆಯಾಗುವ ಬೈಗುಳಗಳು, ಗ್ರಾಮೀಣ ಭಾಗದ ಜನರು ಹಾಗೂ ನಗರದ ಮಂದಿ ಹೆಣ್ಣುಮಕ್ಕಳ ಸೌಂದರ್ಯವನ್ನು ವಿಶ್ಲೇಷಿಸುವ ರೀತಿ... ಎಲ್ಲವನ್ನೂ ಕೃಷ್ಣೇಗೌಡರು ಉದಾಹರಣೆಯೊಂದಿಗೆ ವಿವರಿಸುತ್ತಿದ್ದರೆ, ಸೇರಿದ್ದ ಜನರು ನಕ್ಕೂ ನಕ್ಕೂ ಸುಸ್ತಾದರು.

‘ಮೊದಲಿನ ಪ್ರೇಮಿಗಳು ಪರೀಕ್ಷೆಯಲ್ಲಿ ಬರೆಯಲು ಬರದಿದ್ದರೂ, ಪ್ರೇಮ ಪತ್ರಗಳನ್ನು ಕಾವ್ಯಾತ್ಮಕವಾಗಿ ಬರೆಯುತ್ತಿದ್ದರು. ಈಗಿನ ಪ್ರೇಮಿಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಕೋಟ್‌ಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಫಾರ್ವಾರ್ಡ್‌ ಮಾಡುತ್ತಾರೆ’ ಎಂದು ಕಾಲೆಳೆದರು.

ಭಾಷಣ ಮುಕ್ತಾಯ ಆಗುವ ಹೊತ್ತಿಗೆ ಪ್ರೇಕ್ಷಕರೊಬ್ಬರು, ಚಾಮರಾಜನಗರ ಭಾಷೆಯಲ್ಲಿ ಅರ್ಜುನ–ಬಬ್ರುವಾಹನರ ನಡುವಿನ ಸಂಭಾಷಣೆ ಹೇಳುವಂತೆ ಮನವಿ ಮಾಡಿದರು.

ಡಾ.ರಾಜ್‌ಕುಮಾರ್‌ ನಟನೆಯ ಬಬ್ರುವಾಹನ ಚಿತ್ರದ ಸಂಭಾಷಣೆಯನ್ನು ಮೊದಲು ಕನ್ನಡದಲ್ಲಿ ಹೇಳಿ ನಂತರ, ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಭಾಷೆಯಲ್ಲಿ ಹೇಳಿದಾಗ ಇಡೀ ಸಭೆ ಗೊಳ್ ಎಂದಿತು.

ಮೂರು ನಿರ್ಣಯಗಳ ಅಂಗೀಕಾರ

ಜಿಲ್ಲಾ 11ನೇ ಸಾಹಿತ್ಯ ಸಮ್ಮೇಳನದಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು

1. ತಾಳವಾಡಿಯನ್ನು ಕರ್ನಾಟಕಕ್ಕೆ ಸೇರಿಸುವುದು

2. ದೇಸಿ ಅಧ್ಯಯನ ಕೇಂದ್ರಕ್ಕೆ ಕಾಯಕಲ್ಪ ಒದಗಿಸುವುದು

3. ಚಾಮರಾಜನಗರಕ್ಕೆ ಪ್ರತ್ಯೇಕ ವಿವಿ ಸ್ಥಾಪಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT