ಭಾನುವಾರ, ಜುಲೈ 25, 2021
22 °C
ಬೈಲೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ನಡುವೆ ಗುದ್ದಾಟ, ಚೆಕ್‌ಗೆ ಸಹಿ ಹಾಕದ ಅಧ್ಯಕ್ಷ–ಆರೋಪ

ಹನೂರು | ಬಂದಿಲ್ಲ 13 ತಿಂಗಳ ಪಗಾರ; ನೀರುಗಂಟಿಗಳು ಕಂಗಾಲು

ಬಿ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಬೈಲೂರು ಗ್ರಾಮಪಂಚಾಯಿತಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀರುಗಂಟಿಗಳು 13 ತಿಂಗಳಿನಿಂದಲೂ ಸಂಬಳವಿಲ್ಲದೇ ಪರದಾಡುವಂತಾಗಿದೆ.

ಗ್ರಾಮಪಂಚಾಯಿತಿ ವ್ಯಾಪ್ತಿಗೆ ಅರೆಕಡುವಿನದೊಡ್ಡಿ, ಅರ್ಧನಾರಿಪುರ, ಕಂಬಿಗುಡ್ಡೆ, ಅರೆಪಾಳ್ಯ, ಹೊಸಪಾಳ್ಯ, ಕೆರೆದೊಡ್ಡಿ, ಹುಣಸೆಪಾಳ್ಯ, ಅಂಡೆಕುರುಬನದೊಡ್ಡಿ ಸೇರಿ 12 ಹಳ್ಳಿಗಳು ಬರುತ್ತವೆ. ಇಲ್ಲಿ 11 ನೀರುಗಂಟಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 13 ತಿಂಗಳುಗಳಿಂದ ಇವರಿಗೆ ವೇತನ ಪಾವತಿಯಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಅಧ್ಯಕ್ಷರ ನಡುವಿನ ಕಿತ್ತಾಟದಿಂದಾಗಿ ಸಿಬ್ಬಂದಿಗೆ ಸಂಬಳ ಆಗುತ್ತಿಲ್ಲ ಎಂದು ನೀರುಗಂಟಿಗಳು ಆರೋಪಿಸಿದ್ದಾರೆ.

ಪಿಡಿಒ ಕೇಳಿದರೆ ‘ಅಧ್ಯಕ್ಷರು ಚೆಕ್‌ಗೆ ಸಹಿ ಮಾಡಬೇಕು’ ಎನ್ನುತ್ತಾರೆ. ಮೂರು ತಿಂಗಳಿನಿಂದ ಅಧ್ಯಕ್ಷ ಭಾಗ್ಯ ಕೆಂಪರಾಜು ಗ್ರಾಮಪಂಚಾಯಿತಿಗೆ ಬಂದೇ ಇಲ್ಲ. ಇವರಿಬ್ಬರ ಕಚ್ಚಾಟದಿಂದಾಗಿ ನಮಗೆ ಸಂಬಳ ಬರುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ನೀರುಗಂಟಿಗಳು ಆಗ್ರಹಿಸಿದ್ದಾರೆ. 

ಗದರಿಸುವ ಅಧ್ಯಕ್ಷ: ‘ವರ್ಷದಿಂದ ನಮಗೆ ವೇತನ ನೀಡಿಲ್ಲ, ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ. ಸಂಬಳ ನೀಡಿ ಎಂದು ಗ್ರಾಮಸಭೆ, ವಾರ್ಡ್ ಸಭೆ ಹಾಗೂ ಸಾಮಾನ್ಯ ಸಭೆಗಳಲ್ಲಿ ಅಹವಾಲು ಸಲ್ಲಿಸಿ ಸಾಕಾಗಿ ಹೋಗಿದೆ. ಇದೇ ರೀತಿ ತೊಂದರೆ ಕೊಟ್ಟರೆ ನಿನ್ನ ಕೆಲಸವನ್ನು ಬೇರೆಯವರಿಗೆ ಕೊಡಬೇಕಾಗುತ್ತದೆ ಎಂದು ಗದರಿಸುತ್ತಾರೆ ಗ್ರಾಮಪಂಚಾಯಿತಿ ಅಧ್ಯಕ್ಷ ಭಾಗ್ಯಕೆಂಪರಾಜು. ಏನು ಮಾಡಬೇಕೆಂಬುದೇ ತೋಚುತಿಲ್ಲ. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಮಗೆ ನ್ಯಾಯ ಕೊಡಿಸಬೇಕು’ ಎಂದು ಬೈಲೂರು ಗ್ರಾಮದ ನೀರುಗಂಟಿ ವಿಶ್ವನಾಥ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಿಡಿಒ ರಾಜು ಅವರು, ‘ಪಂಚಾಯಿತಿ ಖಾತೆಯಲ್ಲಿ ಹಣ ಇದೆ. ಅಧ್ಯಕ್ಷರು ಚೆಕ್‌ಗೆ ಸಹಿ ಮಾಡಿದರೆ ವೇತನ ಪಾವತಿಸಬಹುದು. ಆದರೆ, ಅವರು ಮಾಡುತ್ತಿಲ್ಲ’ ಎಂದರು. 

ದುಡ್ಡು ವಸೂಲಿ ಆರೋಪ: ಅಧ್ಯಕ್ಷ ಭಾಗ್ಯ ಕೆಂಪರಾಜು ಅವರ ವಿರುದ್ಧ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಲಿಖಿತ ದೂರು ನೀಡಿದ್ದು, ಆಶ್ರಯ ಯೋಜನೆಯಲ್ಲಿ ಮನೆ ಕೊಡಿಸುವುದಾಗಿ ಹಾಗೂ ನೀರುಗಂಟಿ ಕೆಲಸ ಕೊಡಿಸುವುದಾಗಿ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.  

ಈ ಬಗ್ಗೆ ಪ್ರತಿಕ್ರಿಯೆ ಪಡೆಯುವುದಕ್ಕಾಗಿ ಗ್ರಾಮಪಂಚಾಯಿತಿ ಅಧ್ಯಕ್ಷ ಭಾಗ್ಯಕೆಂಪರಾಜುವಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗಲಿಲ್ಲ.

ಪ್ರತಿಭಟನೆಯ ಎಚ್ಚರಿಕೆ

‘ಇಲ್ಲಿನ ಗ್ರಾಮಪಂಚಾಯಿತಿ ಅಧ್ಯಕ್ಷರು ಕಚೇರಿಗೆ ಬಂದು ಆರು ತಿಂಗಳಾಗಿದೆ. ಪ್ರತಿ ಸಭೆಯಲ್ಲೂ ಪಂಚಾಯಿತಿ ನೌಕರರ ವೇತನದ ಬಗ್ಗೆ ಚರ್ಚೆಯಾಗುತ್ತಲೇ ಇದೆ ಆದರೆ ಇದುವರೆಗೂ ಸಿಬ್ಬಂದಿಗೆ ಸಂಬಳ ಆಗಿಲ್ಲ. ಇದನ್ನು ಕೇಳಲು ಹೋದರೆ ಅಧ್ಯಕ್ಷರು ನೌಕರರಿಗೆ ಬೆದರಿಕೆ ಹಾಕಿ ಕಳುಹಿಸುತ್ತಿದ್ದಾರೆ. ಅಧ್ಯಕ್ಷರ ದಬ್ಬಾಳಿಕೆ ವಿರುದ್ಧ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಮಾಡಿದ್ದೇವೆ. ಯಾವ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕೂಡಲೇ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು, ಇಲ್ಲದಿದ್ದರೆ ತಾಲ್ಲೂಕು ಕೇಂದ್ರದಲ್ಲಿ ಗ್ರಾಮಸ್ಥರೊಡಗೂಡಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಗ್ರಾಮದ ನಾಗೇಂದ್ರ ಅವರು ಎಚ್ಚರಿಸಿದರು.

ಅಧಿಕಾರದಿಂದ ಕೆಳಗಿಳಿಸಿ ವೇತನ ಪಾವತಿ

ಈ ವಿಚಾರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ಅವರು, ‘ಸಿಬ್ಬಂದಿ ವೇತನ ನೀಡಲು ಗ್ರಾಮಪಂಚಾಯಿತಿ ಅಧ್ಯಕ್ಷ ಭಾಗ್ಯಕೆಂಪರಾಜು ಅವರು ಸಹಿ ಮಾಡದಿರುವುದು ಬಗ್ಗೆ ಗಮನಕ್ಕೆ ಬಂದಿದೆ. ಹಿರಿಯ ‌ಅಧಿಕಾರಿಗಳಿಗೂ ಸಿಬ್ಬಂದಿ ಲಿಖಿತ ದೂರು ನೀಡಿದ್ದಾರೆ. ಎರಡು ದಿನದೊಳಗೆ ಸಹಿ ಮಾಡದಿದ್ದರೆ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಿ ಸಿಬ್ಬಂದಿಗೆ ವೇತನ ಪಾವತಿ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು