ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರು, ಅಂಗವಿಕಲರಿಗೆ ಮನೆಯಲ್ಲೇ ಮತದಾನ

ಇದೇ 18ರವರೆಗೆ ಹಕ್ಕು ಚಲಾಯಿಸಲು ಅವಕಾಶ‌: ಜಿಲ್ಲಾಧಿಕಾರಿ ಶಿಲ್ಪಾ ನಾಗ್‌
Published 12 ಏಪ್ರಿಲ್ 2024, 16:30 IST
Last Updated 12 ಏಪ್ರಿಲ್ 2024, 16:30 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲಿ 85 ವರ್ಷ ಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ಹಾಗೂ ಅಂಗವಿಕಲ ಮತದಾರರಿಗೆ ಶನಿವಾರದಿಂದ (ಏ.13) 18ರವರೆಗೆ ಅಂಚೆ ಮತಪತ್ರದ ಮೂಲಕ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮನೆಯಲ್ಲಿಯೇ ಮತದಾನ ಮಾಡುವ ಸಂಬಂಧ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು, ಪ್ರತಿನಿಧಿಗಳೊಂದಿಗೆ ನಡೆದ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.

‘ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಿರಿಯ ನಾಗರಿಕರು ಹಾಗೂ ಅಂಗವಿಕಲ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಎಲೆಕ್ಟೋನ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಎಚ್.ಡಿ.ಕೋಟೆ, ನಂಜನಗೂಡು, ವರುಣ, ತಿ. ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 26,019 ಮಂದಿ 85ಕ್ಕಿಂತ ಹೆಚ್ಚು ವಯಸ್ಸಿನ ನಾಗರಿಕರು ಹಾಗೂ 25,589 ಅಂಗವಿಕಲರನ್ನು ಗುರುತಿಸಲಾಗಿದೆ. ಈ ಪೈಕಿ 982 ಹಿರಿಯ ನಾಗರಿಕರು ಹಾಗೂ 445 ಅಂಗವಿಕಲರು ಮತದಾರರು ಮನೆಯಲ್ಲಿ ಮತದಾನ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ’ ಎಂದು ತಿಳಿಸಿದರು.

‘ಎಲ್ಲ ಮತದಾರರಿಗೂ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಕ್ಷೇತ್ರ ಮತಗಟ್ಟೆ ಅಧಿಕಾರಿಗಳು ಪ್ರಮಾಣೀಕರಿಸಿರುವ ‘ನಮೂನೆ-12ಡಿ’ ಯನ್ನು ಈಗಾಗಲೇ ವಿತರಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 96 ತಂಡಗಳನ್ನು ರಚಿಸಲಾಗಿದ್ದು, ತಂಡಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ. ತಂಡದಲ್ಲಿ ಕ್ಷೇತ್ರ ಮತಗಟ್ಟೆ ಅಧಿಕಾರಿ, ಮತಗಟ್ಟೆ ಅಧಿಕಾರಿ, ಮೈಕ್ರೋ ಅಬ್ಸರ್‍ವರ್, ಪೊಲೀಸ್ ಹಾಗೂ ವಿಡಿಯೊಗ್ರಾಫರ್ ಇರಲಿದ್ದಾರೆ. ತಂಡಗಳಿಗೆ ಈಗಾಗಲೇ ಮಾರ್ಗ ನಕ್ಷೆಗಳನ್ನು ಸಿದ್ದಪಡಿಸಿ ನೀಡಲಾಗಿದೆ’ ಎಂದು ಶಿಲ್ಪಾ ನಾಗ್‌ ತಿಳಿಸಿದರು.

‘ಅಂಚೆ ಮತಪತ್ರದ ಮೂಲಕ ನಡೆಯುವ ಮತದಾನದಲ್ಲಿ ನೋಟಾ ಮತದಾನ ಮಾಡಲು ಅವಕಾಶವಿರುವುದಿಲ್ಲ. ಮನೆಯಲ್ಲಿಯೇ ಮತದಾನ ಮಾಡಿಸಲು ನಿಯೋಜಿಸಲಾಗಿರುವ ತಂಡ ಮನೆಗೆ ಭೇಟಿ ನೀಡಿದ ಸಮಯದಲ್ಲಿ ಮತದಾರರು ಮನೆಯಲ್ಲಿರದೇ ಬೇರೆಡೆ ಹೋಗಿದ್ದ ಸಂದರ್ಭದಲ್ಲಿ ಮತದಾನ ಮಾಡಲು 2ನೇ ಅವಕಾಶವನ್ನೂ ಸಹ ಕಲ್ಪಿಸಲಾಗಿದೆ. ರಾಜಕೀಯ ಪಕ್ಷಗಳ ನಿಯೋಜಿತ ಏಜೆಂಟರು ಕೂಡ ಅಂಚೆ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಬಹುದಾಗಿದೆ’ ಎಂದು ತಿಳಿಸಿದರು.

ಅಧಿಕಾರಿಗಳಿಗೆ ತರಬೇತಿ: ‘ಎರಡನೇ ಹಂತದ ಮತಗಟ್ಟೆ ಅಧಿಕಾರಿಗಳ ತರಬೇತಿಯನ್ನು ಇದೇ 20 ಮತ್ತು 21ರಂದು ನಿಗದಿಪಡಿಸಲಾಗಿದೆ. ಅಲ್ಲದೇ ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮೊಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ (ಇಟಿಪಿಬಿಎಸ್) ವ್ಯವಸ್ಥೆಯಡಿ ಕ್ಷೇತ್ರ ವ್ಯಾಪ್ತಿಯಲ್ಲಿ 357 ಸೇವಾ ಮತದಾರರಿಗೆ ಅಂಚೆ ಪತ್ರ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಶಿಲ್ಪಾ ನಾಗ್ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಗೀತಾ ಹುಡೇದ, ಎಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಪಕ್ಷೇತರ ಅಭ್ಯರ್ಥಿಗಳಾದ ಜಿ.ಡಿ. ರಾಜಗೋಪಾಲ, ಎಚ್.ಕೆ. ಸ್ವಾಮಿ, ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಏಜೆಂಟರು ಭಾಗವಹಿಸಿದ್ದರು.

ಯಳಂದೂರಿನಲ್ಲಿ 176 ಮತದಾರರು.

ಯಳಂದೂರು: ತಾಲ್ಲೂಕಿನಲ್ಲಿ ಮಹಿಳೆ 85 ಪುರುಷ 109 ಅಂಗವಿಕಲ 67 ಹಾಗೂ ಇತರೆ 16 ಸೇರಿ ಒಟ್ಟು 176 ಮಂದಿಯನ್ನು ಗುರುತಿಸಲಾಗಿದೆ. ನಾಲ್ಕು ಮಾರ್ಗಗಳನ್ನು ಗುರುತಿಸಲಾಗಿದ್ದು ಚುನಾವಣಾ ಸಿಬ್ಬಂದಿ ಬೆಳಿಗ್ಗೆ 7.30 ರಿಂದ ಸಂಜೆ 6.30ರ ತನಕ ಮನೆಗೆ ಭೇಟಿ ನೀಡಲಿದ್ದಾರೆ.  ‘ಮಾರ್ಗ ಸಂಖ್ಯೆ-1 ರಲ್ಲಿ ಕಾವುದವಾಡಿ ಬಸವಟ್ಟಿ ದೇಶವಳ್ಳಿ ಕಮರವಾಡಿ ದೇಮಹಳ್ಳಿ ಬಾಗಳಿ ಜನ್ನೂರು ಜನ್ನೂರು ಹೊಸೂರು ಹಳ್ಳಿಕೆರೆಹುಂಡಿ ಗಣಿಗನೂರು ಮಾರ್ಗ-2ರಲ್ಲಿ  ಹೆಗ್ಗವಾಡಿ ಉಮ್ಮತ್ತೂರು ಕುದೇರು ತೆಂಕಲಮೋಳೆ ಬಡಗಲಮೋಳೆ ಕಸ್ತೂರು ಕೆ.ಮೂಕಳ್ಳಿ ಮಾರ್ಗ-3ರಲ್ಲಿ ಹೊಂಗನೂರು ಎಚ್.ಮೂಕಳ್ಳಿ ಕೋಟಂಬಳ್ಳಿ ಹೊಮ್ಮ ಕಣ್ಣೇಗಾಲ ಕೆಂಪನಪುರ ಚುಂಗಡಿಪುರ ಹಾಗೂ ಮಾರ್ಗ-4ರಲ್ಲಿ ಗೂಳಿಪುರ ಇರಸವಾಡಿ ಹೊನ್ನೂರು ಮತಗಟ್ಟೆಗಳಲ್ಲಿ ಸೆಕ್ಟರ್ ಅಧಿಕಾರಿಗಳು ಮತಗಟ್ಟೆ ಸಿಬ್ಬಂದಿ ಹಾಗೂ ಪೊಲೀಸರು ಭಾಗವಹಿಸಲಿದ್ದಾರೆ’ ಎಂದು ತಹಶೀಲ್ದಾರ್ ನಿಸರ್ಗಪ್ರಿಯ ಮಾಹಿತಿ ನೀಡಿದರು.

19ರಿಂದ 21ರವರೆಗೆ ಅಂಚೆ ಮತದಾನ

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರನ್ನು (ಎ.ವಿ.ಇ.ಎಸ್) ಗೈರು ಮತದಾರರ ವರ್ಗದಡಿ 701 ಸೇವಾ ವೃತ್ತಿ ನಿರತರನ್ನು ಗುರುತಿಸಲಾಗಿದ್ದು ಇವರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾನವನ್ನು ಇದೇ 19ರಿಂದ 21ರವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದ ಕೊಠಡಿ ಸಂಖ್ಯೆ 6ರಲ್ಲಿ ಮತದಾನ ಕೇಂದ್ರನು ಸ್ಥಾಪಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ತಮ್ಮ ಅಧಿಕೃತ ಪ್ರತಿನಿಧಿಗಳನ್ನು ಅಂಚೆ ಮತದಾನ ಕೇಂದ್ರಕ್ಕೆ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಲು ಕಳುಹಿಸಬೇಕು’ ಎಂದು ಶಿಲ್ಪಾ ನಾಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT