ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಲಸಿಕೆ ಹಾಕಿಸಿಕೊಂಡಿದ್ದ ಐವರು ಸೇರಿ ಏಳು ವೈದ್ಯರಿಗೆ ಕೋವಿಡ್‌-19 ದೃಢ

Last Updated 30 ಜನವರಿ 2021, 12:01 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ವಾರದ ಅವಧಿಯಲ್ಲಿ ಏಳು ಮಂದಿ ವೈದ್ಯರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇವರಲ್ಲಿ ಐವರು ಇತ್ತೀಚೆಗೆ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದರು.

ಸೋಂಕಿತ ವೈದ್ಯರ ಪೈಕಿ ಜಿಲ್ಲಾ ಕೋವಿಡ್‌ ನೋಡೆಲ್‌ ಅಧಿಕಾರಿ ಕೂಡ ಸೇರಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗಲು ಆರಂಭವಾದಾಗಿನಿಂದ ಅವರು ಕೋವಿಡ್‌ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾರೆ.

‘ಏಳು ಮಂದಿಗೂ ಕೋವಿಡ್‌ ಇರುವುದು ಒಂದೇ ದಿನ ದೃಢಪಟ್ಟಿಲ್ಲ. ವಾರದಿಂದೀಚೆಗೆ ಒಬ್ಬೊಬ್ಬರಲ್ಲಿ ಸೋಂಕು ಕಂಡು ಬಂದಿದೆ. ಎಲ್ಲರೂ ಉತ್ತಮ ಆರೋಗ್ಯ ಹೊಂದಿದ್ದು, ಯಾರಿಗೂ ಅಪಾಯ ಇಲ್ಲ’ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಲಸಿಕೆ ಹಾಕಿಸಿಕೊಂಡ ಐವರು ವೈದ್ಯರ ಪೈಕಿ ಇಬ್ಬರು ಕೋವಿಶೀಲ್ಡ್‌ ಹಾಗೂ ಮೂವರು ಕೋವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ. ನಾಲ್ವರು ಹೋಂ ಐಸೊಲೇಷನ್‌ನಲ್ಲಿದ್ದು, ಒಬ್ಬರು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಇದೇ 16ರಿಂದ ಲಸಿಕೆ ಅಭಿಯಾನ ಆರಂಭಗೊಂಡಿತ್ತು. ಲಸಿಕೆ ಹಾಕಿಸಿಕೊಂಡ ವಾರದ ನಂತರ ಈ ವೈದ್ಯರಲ್ಲಿ ರೋಗ ಲಕ್ಷಣಗಳು ಕಂಡು ಬಂದಿದ್ದು, ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಖಚಿತವಾಗಿದೆ.

‘ಸೋಂಕು ದೃಢಪಟ್ಟ ವೈದ್ಯರು ಸೇರಿದಂತೆ ಲಸಿಕೆ ಹಾಕಿಸಿಕೊಂಡಿರುವ ಎಲ್ಲರೂ ಒಂದು ಡೋಸ್‌ ಮಾತ್ರ ಪಡೆದಿದ್ದಾರೆ. ಇನ್ನೊಂದು ಡೋಸ್‌ ಬಾಕಿ ಇದೆ. ನಾಲ್ಕು ವಾರಗಳ ನಂತರ ಎರಡನೇ ಡೋಸ್‌ ಲಸಿಕೆ ಹಾಕಲಾಗುತ್ತದೆ. ಆ ಬಳಿಕವೂ ದೇಹದಲ್ಲಿ ಪ್ರತಿಕಾಯ (ಆ್ಯಂಡಿ ಬಾಡಿ‌) ಸೃಷ್ಟಿಯಾಗಲು ಸಮಯ ಬೇಕಾಗುತ್ತದೆ. ಹಾಗಾಗಿ, ಲಸಿಕೆ ಹಾಕಿದ ತಕ್ಷಣ ಕೋವಿಡ್‌ ಬರುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಲಸಿಕೆ ಪಡೆದುಕೊಂಡರೂ ಎಚ್ಚರಿಕೆಯಿಂದ ಇರಬೇಕು’ ಎಂದು ಡಾ.ಎಂ.ಸಿ‌.ರವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT