ಭಾನುವಾರ, ಆಗಸ್ಟ್ 18, 2019
21 °C
119 ವರ್ಷಗಳ ಹಿಂದೆ ಆರಂಭವಾಗಿದ್ದ ಶಾಲೆ, ಅಭಿವೃದ್ಧಿಗೆ ಶಿಕ್ಷಣ ಇಲಾಖೆಯಿಂದ ವಿಶೇಷ ಅನುದಾನ

ರಾಮಾಪುರ ಶಾಲೆಗೆ ‘ಪಾರಂಪರಿಕ ಶಾಲೆ’ಯ ಗರಿ

Published:
Updated:
Prajavani

ಹನೂರು: ಶತಮಾನದ ಇತಿಹಾಸವಿರುವ ತಾಲ್ಲೂಕಿನ ರಾಮಾಪುರ ಉನ್ನತೀಕರಿಸಿದ ಸರ್ಕಾರಿ ಶಾಲೆಯ ಮುಕುಟಕ್ಕೆ ಈಗ ಪಾರಂಪರಿಕ ಶಾಲೆ ಎಂಬ ಗರಿ ಸೇರ್ಪಡೆಗೊಂಡಿದೆ. ಶಾಲೆಯ ಅಭಿವೃದ್ಧಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಿದೆ. 

ಪ್ರತಿ ಶೈಕ್ಷಣಿಕ ವಲಯದಲ್ಲಿ 100 ವರ್ಷಗಳನ್ನು ಪೂರೈಸಿರುವ ಶಾಲೆಯನ್ನು ಗುರುತಿಸುವ ಇಲಾಖೆಯು ಪ್ರತಿ ವರ್ಷವೂ ಆ ಶಾಲೆಯ ಅಭಿವೃದ್ಧಿಗೆ ಅನುದಾನ ನೀಡುತ್ತಾ ಬಂದಿದೆ. ಅದರಂತೆ, ಹನೂರು ಶೈಕ್ಷಣಿಕ ವಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗುರುತಿಸಲಾಗಿದೆ. ಅದರ ಅಭಿವೃದ್ಧಿಗೆ ₹2.5 ಲಕ್ಷ ಹಣ ಬಿಡುಗಡೆ ಮಾಡಿದೆ.

1900ರಲ್ಲಿ ಮದ್ರಾಸ್ ಮಹಾಸಂಸ್ಥಾನದ ಆಡಳಿತಾವಧಿಯಲ್ಲಿ ಎರಡು ಕೊಠಡಿಗಳೊಂದಿಗೆ ಆರಂಭವಾದ ಶಾಲೆಗೆ ಇದೀಗ ಭರ್ತಿ 119 ವರ್ಷ. 1 ರಿಂದ 7ನೇ ತರಗತಿಯವರೆಗೆ ನಡೆಯುತ್ತಿದ್ದ ಶಾಲೆಯನ್ನು 2013ರಲ್ಲಿ 8ನೇ ತರಗತಿವರೆಗೆ ಉನ್ನತೀಕರಿಸಲಾಯಿತು. 

ದ್ವಿಭಾಷಾ ಕಲಿಕಾ ಕೇಂದ್ರ: ಈ ಭಾಗದಲ್ಲಿ ತಮಿಳು ಭಾಷೆಯ ಪ್ರಭಾವ ಹೆಚ್ಚಾಗಿದ್ದರಿಂದ ಜತೆಗೆ ಸಾಕಷ್ಟು ಜನರ ಮಾತೃಭಾಷೆ ತಮಿಳೇ ಆಗಿದ್ದರಿಂದ, ಈ ಶಾಲೆಯಲ್ಲಿ ತಮಿಳು ಹಾಗೂ ಕನ್ನಡ ಭಾಷೆಯನ್ನು ಕಲಿಸಲಾಗುತ್ತಿತ್ತು. 80ರ ದಶಕದ ಹೊತ್ತಿಗೆ ತಮಿಳು ಕಲಿಯುವವರ ಸಂಖ್ಯೆ ಕ್ಷೀಣಿಸಿದ ಕಾರಣ ತಮಿಳು ಬೋಧನೆ ಸ್ಥಗಿತಗೊಂಡಿತು.

ಹಳೆಯ ಕಟ್ಟಡವನ್ನು ದಶಕದ ಹಿಂದೆ ತೆರವುಗೊಳಿಸಿ, ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ತಾಲ್ಲೂಕಿನ ಮೂರು ಹೋಬಳಿ ಪೈಕಿ ಅತಿ ದೊಡ್ಡ ಹೋಬಳಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಮಾಪುರದ ಮೊದಲ ಸರ್ಕಾರಿ ಶಾಲೆ ಇದು. ಇದು ತಾಳಬೆಟ್ಟ, ಕೌದಳ್ಳಿ, ದಿನ್ನಳ್ಳಿ, ಅಜ್ಜೀಪುರ ಸೇರಿದಂತೆ ಹತ್ತಾರು ಕಾಡಂಚಿನ ಗ್ರಾಮದ ಮಕ್ಕಳ ಕಲಿಕೆಗೆ ಏಕೈಕ ಕೇಂದ್ರವಾಗಿತ್ತು.

360 ಮಕ್ಕಳು: ಶಾಲೆಯಲ್ಲಿ 16 ಕೊಠಡಿಗಳಿದ್ದು, ಪ್ರಸ್ತುತ 16 ಕೊಠಡಿಗಳಿದ್ದು 390 ಮಕ್ಕಳು ಕಲಿಯುತ್ತಿದ್ದಾರೆ.

ಖಾಸಗಿ ಶಾಲೆಗಳ ಹೊಡೆತದಿಂದಾಗಿ ದಾಖಲಾತಿಯಲ್ಲಿ ಕುಸಿತ ಕಂಡಿದ್ದ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭವಾಗಿರುವುದರಿಂದ ದಾಖಲಾತಿಯಲ್ಲಿ ಏರಿಕೆ ಕಂಡಿದೆ.

ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಹೆಚ್ಚಿನ ಅರ್ಜಿಗಳು ಬಂದಿದ್ದವು. ಆದರೆ, 30 ಮಕ್ಕಳಿಗೆ ಮಾತ್ರ ಅವಕಾಶ ಇದ್ದುದರಿಂದ ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಲಾಯಿತು ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ

ಗ್ರಾಮೀಣ ಪ್ರತಿಭೆಗಳನ್ನು ಹೊರತರುವಲ್ಲಿ ಶ್ರಮಿಸುತ್ತಿರುವ ಇಲ್ಲಿನ ಶಿಕ್ಷಕರು, ಮಕ್ಕಳನ್ನು ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸುವಂತೆ ಮಾಡುತ್ತಿದ್ದಾರೆ. ಆ ಮೂಲಕ ಮಕ್ಕಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ.

ಆವರಣದ ಕೊರತೆಯಿದ್ದರೂ ಶಾಲೆಯ ಮಕ್ಕಳು ಅಥ್ಲೆಟಿಕ್ಸ್‌ನಲ್ಲಿ 8 ಬಾರಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಅಲ್ಲದೇ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿದ್ದಾರೆ.

 

Post Comments (+)