ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಶಿಮ್ಲಾ ಸೇಬಿನ ದರ್ಬಾರು

ಇಳಿದ ಕ್ಯಾರೆಟ್‌ ಬೆಲೆ, ಹೂವುಗಳ ಬೆಲೆ ಮತ್ತಷ್ಟು ಇಳಿಕೆ; ಹೂವಿನ ಧಾರಣೆಯಲ್ಲಿ ಇಳಿಕೆ ದಾಖಲು
Last Updated 30 ಆಗಸ್ಟ್ 2021, 16:40 IST
ಅಕ್ಷರ ಗಾತ್ರ

ಚಾಮರಾಜನಗರ: ಸೇಬಿನ ಋತು ಆರಂಭವಾಗಿದ್ದು, ಹಣ್ಣಿನ ಮಾರುಕಟ್ಟೆಗೆ ಶಿಮ್ಲಾ ಸೇಬು ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿದೆ.

ಜಿಲ್ಲೆಯಾದ್ಯಂತ ಹಣ್ಣುಗಳ ಮಾರುಕಟ್ಟೆಯಲ್ಲಿ ಈಗ ಆಕರ್ಷಕ ಬಣ್ಣದ ಸೇಬುಗಳೇ ಕಣ್ಣು ಕುಕ್ಕುತ್ತಿವೆ. ಹಾಪ್‌ಕಾಮ್ಸ್‌ ಸೇರಿದಂತೆ ಇತರೆ ಹಣ್ಣುಗಳ ಅಂಗಡಿ ಮಾತ್ರವಲ್ಲದೇ, ಬೀದಿ ಬದಿ, ತಳ್ಳುಗಾಡಿಗಳ ವ್ಯಾಪಾರಿಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಸೇಬು ಸಂಗ್ರಹಿಸಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದಂತೆಯೇಹಲವು ತಿಂಗಳುಗಳಿಂದ ದುಬಾರಿಯಾಗಿದ್ದ ಸೇಬಿನ ಬೆಲೆ ಈಗ ಇಳಿಮುಖವಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಇನ್ನಷ್ಟು ಇಳಿಯಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಕೆಜಿ ಸೇಬಿನ ಬೆಲೆ ಮತ್ತೆ ₹20 ಇಳಿದಿದೆ. ಹಾಪ್‌ಕಾಮ್ಸ್‌ನಲ್ಲಿ ಹೋದ ವಾರ ಕೆಜಿಗೆ ₹140 ಇತ್ತು. ಸೋಮವಾರ ₹120 ಇದೆ. ಇತರ ಹಣ್ಣಿನ ಅಂಗಡಿಗಳು, ತಳ್ಳುಗಾಡಿಗಳಲ್ಲೂ ಶಿಮ್ಲಾ ಸೇಬಿಗೆ ಅಷ್ಟೇ ಬೆಲೆ ಇದೆ.

‘ಸೇಬು ಸೀಸನ್‌ ಆರಂಭವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಹಾಗಾಗಿ, ಬೆಲೆ ಕಡಿಮೆಯಾಗಿದೆ. ಗ್ರಾಹಕರು ಕೂಡ ಖರೀದಿಸುತ್ತಿದ್ದಾರೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಿತ್ತಳೆ ಇಳಿಕೆ: ಇತರ ಹಣ್ಣುಗಳ ಪೈಕಿ ಕಿತ್ತಳೆ ಬೆಲೆ ₹20 ಕಡಿಮೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹80 ಬೆಲೆ ಇದೆ. ಮೂಸಂಬಿ ಬೆಲೆ ₹60 ಈ ವಾರವೂ ಮುಂದುವರಿದಿದೆ. ದಾಳಿಂಬೆ ಕೆಜಿಗೆ ₹120 ಇದೆ.

ಕ್ಯಾರೆಟ್‌ ಅಗ್ಗ: ತರಕಾರಿಗಳ ಪೈಕಿ ಕಳೆದ ವಾರ ತುಟ್ಟಿಯಾಗಿದ್ದ ಕ್ಯಾರೆಟ್‌ ಬೆಲೆ ಈ ವಾರ ಕೆಜಿಗೆ ₹10 ಇಳಿದಿದೆ. ಟೊಮೆಟೊ (₹20), ಆಲೂಗಡ್ಡೆ (₹25), ಬೀನ್ಸ್‌ (₹40), ಈರುಳ್ಳಿ (₹30) ಸೇರಿದಂತೆ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಮಾಂಸ ಮಾರುಕಟ್ಟೆಯಲ್ಲಿ ಮಟನ್‌ (₹560), ಚಿಕನ್‌ (200–220) ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಹೂವುಗಳನ್ನು ಕೇಳುವವರೇ ಇಲ್ಲ

ವರಮಹಾಲಕ್ಷ್ಮಿ ಹಬ್ಬದ ನಂತರ ಇಳಿಹಾದಿಯಲ್ಲಿರುವ ಹೂವುಗಳ ಧಾರಣೆ ಈ ವಾರ ಇನ್ನಷ್ಟು ಕುಸಿದಿದೆ. ಹೂವುಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.

ಬೇಡಿಕೆ ಹೆಚ್ಚಾಗಬೇಕಾದರೆ ಗಣೇಶನ ಹಬ್ಬದವರೆಗೆ ಕಾಯಬೇಕು. ಆಗ ಬೆಲೆಯೂ ಹೆಚ್ಚಾಗಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ಎಲ್ಲ ಹೂವುಗಳ ಬೆಲೆ ದುಪ್ಪಟ್ಟು ಕಡಿಮೆಯಾಗಿದೆ.

ನಗರಕ್ಕೆ ಸಮೀಪದ ಚೆನ್ನೀಪುರ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರ ಕೆಜಿಗೆ ₹600–₹800ರಷ್ಟಿದ್ದ ಕನಕಾಂಬರದ ಬೆಲೆ ₹300–₹400ಕ್ಕೆ ಇಳಿದಿದೆ. ಕಾಕಡ ₹60ರಿಂದ ₹80ಕ್ಕೆ ಸಿಗುತ್ತಿದೆ. ₹160 ಇದ್ದ ಕೆಜಿ ಸೇವತಿಗೆ ಬೆಲೆ ₹40ಕ್ಕೆ ಕುಸಿದಿದೆ.

‘ವಾರದಿಂದೀಚೆಗೆ ದಿನದಿಂದ ದಿನಕ್ಕೆ ಹೂವಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಕೊಳ್ಳುವವರು ಇಲ್ಲದಿರುವುದರಿಂದ ಬೆಲೆಯೂ ಇಳಿಮುಖವಾಗಿದೆ. ಮುಂದಿನವಾರ ಗಣೇಶನ ಹಬ್ಬ ಇದ್ದು, ಆ ಸಂದರ್ಭದಲ್ಲಿ ಬೇಡಿಕೆ ಹೆಚ್ಚಲಿದೆ. ಬೆಲೆಯೂ ಜಾಸ್ತಿಯಾಗಬಹುದು’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT