ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಾಂತದ ಜೊತೆ ರಾಜಿ ಮಾಡಿಕೊಳ್ಳದ ರಾಜಕಾರಣಿ: ಸಿದ್ದರಾಮಯ್ಯ

ಹೆಗ್ಗವಾಡಿ: ಧ್ರುವನಾರಾಯಣ ಅವರ 11ನೇ ದಿನದ ಕಾರ್ಯ, ಮುಖಂಡರಿಂದ ಶ್ರದ್ಧಾಂಜಲಿ
Last Updated 22 ಮಾರ್ಚ್ 2023, 6:29 IST
ಅಕ್ಷರ ಗಾತ್ರ

ಚಾಮರಾಜನಗರ: ‘ಒಬ್ಬ ಆದರ್ಶ ರಾಜಕಾರಣಿಗೆ ಇರಬೇಕಾಗಿದ್ದ ಎಲ್ಲ ಗುಣಗಳೂ ಧ್ರುವನಾರಾಯಣ ಅವರಲ್ಲಿದ್ದವು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಬಣ್ಣಿಸಿದರು.

ಈಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಹುಟ್ಟೂರು ತಾಲ್ಲೂಕಿನ ಹೆಗ್ಗವಾಡಿಯಲ್ಲಿ ಅವರ 11ನೇ ದಿನ ಕಾರ್ಯದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿಯಲ್ಲಿ ಅವರು ಮಾತನಾಡಿದರು.

‘ಅಪರೂಪದ ರಾಜಕಾರಣಿಯಾಗಿದ್ದ ಧ್ರುವನಾರಾಯಣ ನಮ್ಮನ್ನು ಇಷ್ಟು ಬೇಗ ಅಗಲುತ್ತಾರೆ ಎಂದುಕೊಂಡಿರಲಿಲ್ಲ. ಕಾಂಗ್ರೆಸಿನ ಸಿದ್ದಾಂತ, ನಾಯಕತ್ವವನ್ನು ವಿದ್ಯಾರ್ಥಿ ದೆಸೆಯಿಂದಲೇ ಒಪ್ಪಿಕೊಂಡಿದ್ದರು. ಕೊನೆಯವರೆಗೂ ಅದನ್ನು ಉಸಿರಾಗಿ ಇಟ್ಟುಕೊಂಡಿದ್ದರು. ಸಾಮಾನ್ಯ ಕುಟುಂಬದಿಂದ ಬಂದು ಜನಪರ ಕಾಳಜಿ ಇಟ್ಟುಕೊಂಡು ಬದ್ಧತೆಯಿಂದ ಜನಸೇವೆ ಮಾಡುತ್ತಿದ್ದರು’ ಎಂದು ಸ್ಮರಿಸಿದರು.

‘ತಾವು ನಂಬಿದ ರಾಜಕೀಯ ಸಿದ್ಧಾಂತದ ಜೊತೆ ಅವರು ಎಂದೂ ರಾಜಿ ಮಾಡಿಕೊಂಡಿರಲಿಲ್ಲ. ಅವರು ಅಜಾತಶತ್ರು. ಯಾರ ಜೊತೆಗೂ ಖಾರವಾಗಿ ಮಾತನಾಡಿರಲಿಲ್ಲ. ಸೌಜನ್ಯವಾಗಿ ಮಾತನಾಡಿ ಮನಸ್ಸನ್ನು ಗೆಲ್ಲುತ್ತಿದ್ದರು’ ಎಂದರು.

‘ಸಾಮಾನ್ಯವಾಗಿ ಸಂಸದರು ಹಳ್ಳಿಗಳಿಗೆ ಭೇಟಿ ನೀಡುವುದಿಲ್ಲ. ಆದರೆ, ಧ್ರುವ ಪ್ರತಿ ಹಳ್ಳಿಗೂ ಹೋಗಿ ಜನರೊಂದಿಗೆ ಬೆರೆಯುತ್ತಿದ್ದರು. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡುತ್ತಿದ್ದರು’ ಎಂದು ಹೇಳಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ‘ಶೋಷಿತರ ಪರವಾಗಿ ಕೆಲಸ ಮಾಡುವ ಗುಣ ಧ್ರುವನಾರಾಯಣ ಅವರದ್ದಾಗಿತ್ತು. ಆಡಂಬರದ, ಭ್ರಷ್ಟಾಚಾರದ ರಾಜಕಾರಣವನ್ನು ಮಾಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಿದ್ದರು. 2016ರಲ್ಲಿ ಪಕ್ಷದಲ್ಲಿ ನಾನು ಏನೂ ಆಗಿರಲಿಲ್ಲ. ಆಗ ಕ್ಷೇತ್ರದಲ್ಲಿ ಕಾರ್ಯಕ್ರಮ ರೂಪಿಸಿ ನನ್ನನ್ನು ಕರೆದುಕೊಂಡು ಹೋಗಿ ರಾಜಕೀಯವಾಗಿ ನನ್ನ ಕೈ ಹಿಡಿದು ನಡೆಸಿದರು’ ಎಂದು ನೆನಪಿಸಿಕೊಂಡರು.

ಕಾಂಗ್ರೆಸ್‌ ನಾಯಕ ಶರಣಪ್ರಕಾಶ ಪಾಟೀಲ ಮಾತನಾಡಿ ‘ಸಕ್ರಿಯ ರಾಜಕಾರಣಿಯನ್ನು ಕಳೆದುಕೊಂಡಿದ್ದು ದುಃಖದ ವಿಚಾರ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ನಷ್ಟವಾಗಿದೆ’ ಎಂದರು.

ಧ್ರುವ ಸ್ಮರಣೆ ಗೀತೆಗಳು: ಜನಪದ ಗಾಯಕ ಶಿವಾರ ಉಮೇಶ್, ಕಾಂಗ್ರೆಸ್‌ ಮುಖಂಡ ಎಸ್.ಬಾಲರಾಜು ಧ್ರುವ ಸ್ಮರಣೆ ಗೀತೆಗಳನ್ನು ಹಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಅಕ್ಕಪಕ್ಕದ ಗ್ರಾಮಸ್ಥರು, ಸ್ಥಳೀಯರು, ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಧ್ರುವನಾರಾಯಣ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಧ್ರುವನಾರಾಯಣ ಪುತ್ರರಾದ ದರ್ಶನ್, ಧೀರೇನ್, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಮುಖಂಡರಾದ ಕಾಗಲವಾಡಿ ಶಿವಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ನರೇಂದ್ರ ಸ್ವಾಮಿ, ಸಂದೇಶ್‌ ನಾಗರಾಜ್‌, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಕಾಗಲವಾಡಿ ಚಂದ್ರು ಇದ್ದರು.

‘ಮಗನಿಗೆ ಸಂಪೂರ್ಣ ಸಹಕಾರ’

‘ಇನ್ನೊಬ್ಬ ಧ್ರುವನಾರಾಯಣ ಆಗಲು ಯಾರಿಗೂ ಸಾಧ್ಯವಿಲ್ಲ. ಆದರೆ, ಅವರ ಮಗ ಆ ಪ್ರಯತ್ನ ಮಾಡಲಿ. ನಮ್ಮ ಸಂಪೂರ್ಣ ಬೆಂಬಲ ಸಹಕಾರವನ್ನು ನೀಡುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

ಸಮಾಧಿಗೆ ನಮನ: ಇದಕ್ಕೂ ಮೊದಲು ಸಿದ್ದರಾಮಯ್ಯ ಧ್ರುವನಾರಾಯಣ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT