ಹನೂರು: ಕಾಡುಗಳ್ಳ ವೀರಪ್ಪನ್ ಹುಟ್ಟೂರು, ತಾಲ್ಲೂಕಿನ ಗಡಿಭಾಗ ಗೋಪಿನಾಥಂನಲ್ಲಿ ಜನರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿ ಜನಾರುರಾಗಿಯಾಗಿದ್ದ, ವೀರಪ್ಪನ್ನಿಂದ ಹತ್ಯೆಗೊಳಗಾಗಿದ್ದ ಅರಣ್ಯ ಅಧಿಕಾರಿ ಪಿ.ಶ್ರೀನಿವಾಸ್ ಅವರ ಪುತ್ಥಳಿಯನ್ನು ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಸ್ಥಳೀಯರು ಸಿದ್ಧತೆ ನಡೆಸಿದ್ದಾರೆ.

‘ನಮಗೆ ಶ್ರೀನಿವಾಸ್ ಸಾಹೇಬರ ಪುತ್ಥಳಿ ಮಾಡಿಕೊಡಿ’ ಎಂದು ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದೇಣಿಗೆ ಸಂಗ್ರಹಿಸಿ, ಲೋಹದಿಂದ ಮಾಡಿದ ಸುಂದರವಾದ ಪುತ್ಥಳಿಯನ್ನು ಗ್ರಾಮಸ್ಥರಿಗೆ ಕೊಡುಗೆಯಾಗಿ ನೀಡಿದ್ದಾರೆ.

ಶ್ರೀನಿವಾಸ್ ಅವರು ಸ್ವತಃ ಮುಂದೆ ನಿಂತು ನಿರ್ಮಿಸಿದ್ದ ಮಾರಮ್ಮ ದೇವಾಲಯದಲ್ಲಿ ಸದ್ಯ ಪುತ್ಥಳಿಯನ್ನು ಇರಿಸಲಾಗಿದೆ.

ದೇವಾಲಯದ ಸಮೀಪದಲ್ಲೇ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದ್ದು, ದೇವಸ್ಥಾನದ ಟ್ರಸ್ಟಿಯವರು ಮಂಟಪ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದಾರೆ. ಬಳಿಕ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವೀರಪ್ಪನ್ ಉಪಟಳ ಹೆಚ್ಚಿದ್ದ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದ ಪಿ.ಶ್ರೀನಿವಾಸ್ ಅವರು, ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಅಲ್ಲಿನ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸಿ ಪ್ರೀತಿ ವಿಶ್ವಾಸಗಳಿಸಿದ್ದರು.

ಗೋಪಿನಾಥಂನಿಂದ ಹೊಗೆನಕಲ್ಗೆ ತೆರಳುವ ರಸ್ತೆಯಲ್ಲಿರುವ ಜನರು ತಮ್ಮ ಮನೆಗಳಲ್ಲಿ ಇಂದಿಗೂ ಶ್ರೀನಿವಾಸ್ ಅವರ ಭಾವಚಿತ್ರ ಇಟ್ಟುಕೊಂಡಿದ್ದಾರೆ. ಮನೆಗಳಿಲ್ಲದೇ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ 40 ಕುಟುಂಬಗಳಿಗೆ ಶ್ರೀನಿವಾಸ್ ಅವರು ಮನೆ ನಿರ್ಮಿಸಿಕೊಟ್ಟಿದ್ದರು.

ಪ್ರತಿ ಆಗಸ್ಟ್ ತಿಂಗಳಲ್ಲಿ ನಡೆಯುವ ಮಾರಮ್ಮನ ಹಬ್ಬದಂದು ಗ್ರಾಮದ ಮುಖ್ಯರಸ್ತೆಯಲ್ಲಿ .ಶ್ರೀನಿವಾಸ್ ಅವರ ಫ್ಲೆಕ್ಸ್ಗಳನ್ನು ಅಳವಡಿಸಿ ಗ್ರಾಮಸ್ಥರು ತಮ್ಮ ನಮನ ಸಲ್ಲಿಸುತ್ತಾ ಬಂದಿದ್ದಾರೆ. ಗ್ರಾಮದ ಹೃದಯ ಭಾಗದಲ್ಲಿರುವ ಮಾರಮ್ಮನ ದೇವಾಲಯದಲ್ಲಿ ಇಂದಿಗೂ ಶ್ರೀನಿವಾಸ್ ಭಾವಚಿತ್ರವನ್ನಿಟ್ಟು ಪೂಜಿಸಲಾಗುತ್ತಿದೆ.

ಮೋಸದಿಂದ ಹತ್ಯೆ: ಶರಣಾಗತನಾಗುವೆ ಎಂಬ ಸಂದೇಶ ಕಳುಹಿಸಿ ಪಿ.ಶ್ರೀನಿವಾಸ್ ಅವರನ್ನು ಕರೆಸಿಕೊಂಡ ವೀರಪ್ಪನ್, ಎರಕೆಯಂ ಅರಣ್ಯ ಪ್ರದೇಶದ ಬಳಿ ಬರುತ್ತಿದ್ದಂತೆ ಗುಂಡು ಹಾರಿಸಿ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದ.

‘ಶರಣಾಗುವುದಾಗಿ ಆತ ಹೇಳಿದಾಗ ‘ನಾವು ಬೇಡ’ ಎಂದು ಹೇಳಿದೆವು. ಆದರೂ ಸಾಹೇಬರು ನಮ್ಮ ಮಾತು ಕೇಳದೇ ಅವನ ಮನಸ್ಸು ಪರಿವರ್ತನೆ ಮಾಡುತ್ತೇನೆ ಎಂದು ಹೇಳಿ ಅವನಿಂದ ಹತರಾದರು’ ಎಂದು 30 ವರ್ಷಗಳ ಹಿಂದಿನ ಘಟನೆಯನ್ನು ಮೆಲುಕು ಹಾಕುತ್ತಾರೆ ಶ್ರೀನಿವಾಸ್ ಒಡನಾಡಿಯಾಗಿದ್ದ ನಲ್ಲೂರು ಮಾದಯ್ಯ.

ಇಲಾಖೆಯ ಅಧಿಕಾರಿಗಳ ಕೊಡುಗೆ

ಪುತ್ಥಳಿ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರು ಜಿಲ್ಲೆಯ ಹಿಂದಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್. ಶಿಲ್ಪಿಗೆ ಶ್ರೀನಿವಾಸ್ ಅವರ ಮುಖದ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟ್ಟವರು, ಅವರೊಂದಿಗೆ ಕೆಲಸ ಮಾಡಿದ್ದ, ಹಾಲಿ ಎಸಿಎಫ್ ಅಂಕರಾಜು ಅವರು.

‘ನಾನು ಒಂದೂವರೆ ವರ್ಷದ ಹಿಂದೆ ಗೋಪಿನಾಥಂ ಗ್ರಾಮಸ್ಥರು ಆಯೋಜಿಸಿದ್ದ ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಗ್ರಾಮಸ್ಥರು ದೇಣಿಗೆ ನೀಡಿ ಆ ಸಭಾ ಭವನ ನಿರ್ಮಿಸಿದ್ದರು. ಏನಾಗಬೇಕು ಎಂದು ಹೇಳಿದರೆ ನನ್ನಿಂದಲೂ ಕೈಲಾದ ಸಹಾಯ ಮಾಡುವೆ ಎಂದು ಹೇಳಿದ್ದೆ. ಆ ಸಂದರ್ಭದಲ್ಲಿ ಗ್ರಾಮಸ್ಥರು ತಮಗೆ ಶ್ರೀನಿವಾಸ್ ಸಾಹೇಬರ ಪುತ್ಥಳಿ ಮಾಡಿಕೊಡಿ ಎಂದು ಮನವಿ ಮಾಡಿದ್ದರು. ಅದರಂತೆ ಅಧಿಕಾರಿಗಳು, ಸಿಬ್ಬಂದಿ ದೇಣಿಗೆ ಸಂಗ್ರಹಿಸಿ ಲೋಹದ ಪುತ್ಥಳಿ ನಿರ್ಮಿಸಿ ಕೊಟ್ಟಿದ್ದೇವೆ’ ಎಂದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಲಾರ ಜಿಲ್ಲೆಯ ಮಾಲೂರಿನ ಶಿಲ್ಪಿ ಹರಿಪ್ರಸಾದ್ ಅವರು ಈ ಪುತ್ಥಳಿಯನ್ನು ನಿರ್ಮಿಸಿದ್ದಾರೆ.

‘ನಮ್ಮಲ್ಲಿ ಶ್ರೀನಿವಾಸ್ ಸಾಹೇಬರ ಫೋಟೊ ಪಾತ್ರ ಇತ್ತು. ಪುತ್ಥಳಿ ತಯಾರಿಸಲು 3ಡಿ ಚಿತ್ರ ಬೇಕು. ಎಸಿಎಫ್ ಆಗಿರುವ ಅಂಕರಾಜು ಅವರು ಶ್ರೀನಿವಾಸ್ ಅವರೊಂದಿಗೆ ಕೆಲಸ ಮಾಡಿದ್ದರು. ಅವರು ಶಿಲ್ಪಿ ಅವರೊಂದಿಗೆ ಕುಳಿತು ಸಾಹೇಬರ ಮುಖ ಚರ್ಯೆ ವಿವರಿಸಿದ್ದರು. ಶಿಲ್ಪ ಹರಿಪ್ರಸಾದ್ ಅವರು ಅತ್ಯಂತ ತಾಳ್ಮೆಯಿಂದ, ದೀರ್ಘ ಸಮಯ ತೆಗೆದುಕೊಂಡು ಸುಂದರ ಪುತ್ಥಳಿ ತಯಾರಿಸಿದ್ದಾರೆ’ ಎಂದು ಮನೋಜ್ ಕುಮಾರ್ ಮಾಹಿತಿ ನೀಡಿದರು.

ಗೋಪಿನಾಥಂನಲ್ಲಿ ಇದೇ 31ರಂದು ಮಾರಮ್ಮನ ಹಬ್ಬವಿದೆ. ಅದು ಮುಗಿದ ಬಳಿಕ ಪುತ್ಥಳಿ ಪ್ರತಿಸ್ಠಾಪನಾ ಕಾರ್ಯ ನಡೆಯಲಿದೆ

-ಎಂ.ಎನ್ ಅಂಕರಾಜು, ಎಸಿಎಫ್, ಕಾವೇರಿ ವನ್ಯಧಾಮ

ಗೋಪಿನಾಥಂ ಗ್ರಾಮಸ್ಥರು ಶ್ರೀನಿವಾಸ್ ಸಾಹೇಬರ ಮೇಲೆ ಇಟ್ಟಿರುವ ಪ್ರೀತಿ ಅನನ್ಯ. ಅವರು ಮನವಿ ಮಾಡುವಾಗ ಇಲ್ಲ ಎನ್ನಲಾಗಲಿಲ್ಲ

-ಮನೋಜ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಜೆಎಲ್ಆರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.