ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನೋಪಾಯಕ್ಕೆ ‘ಸೂರ್ಯ’ನೇ ಆಧಾರ!

ಸೆಲ್ಕೊ ಸೋಲಾರ್‌ ಕಂಪನಿ, ಫೌಂಡೇಷನ್‌, ದಾನಿಗಳ ನೆರವಿನಿಂದ ಬದುಕು ಕಟ್ಟಿಕೊಂಡರು
Last Updated 8 ಜೂನ್ 2022, 2:37 IST
ಅಕ್ಷರ ಗಾತ್ರ

ಚಾಮರಾಜನಗರ: ‘ದಿನಪೂರ್ತಿ ಬಟ್ಟೆಗಳಿಗೆ ಇಸ್ತ್ರಿ ಹಾಕಿದರೂ ₹400ಕ್ಕಿಂತ ಹೆಚ್ಚು ದುಡಿಮೆ ಆಗುತ್ತಿರಲಿಲ್ಲ. ಇಸ್ತ್ರಿಯ ಜೊತೆಗೆ ಚಹಾ, ಆಮ್ಲೆಟ್‌ ಮಾರಾಟ, ಸೋಲಾರ್‌ ಜೆರಾಕ್ಸ್‌ ಆರಂಭಿಸಿದ ನಂತರ ದಿನದ ಆದಾಯ ದುಪ್ಪಟ್ಟಾಗಿದೆ. ಮೂವರ ಜೀವನ ಸಾಗುತ್ತಿದೆ...’

ಹಾಸನ ಜಿಲ್ಲೆಯ ಪ್ರವಾಸಿ ತಾಣ ಹಳೆಬೀಡಿನಲ್ಲಿ ಗೂಡಂಗಡಿಯಲ್ಲಿ ಸೋಲಾರ್‌ ಜೆರಾಕ್ಸ್‌ ಸೌಲಭ್ಯ ಹೊಂದಿರುವ ಮಹಿಳೆ ಆಶಾ ಅವರ ಮಾತುಗಳಿವು.

ಬದುಕು ಹಸನಾಗಲು ಕಾರಣವಾದಸೆಲ್ಕೋ ಸೋಲಾರ್‌ ಲೈಟ್‌ ಪ್ರೈ ಲಿಮಿಟೆಡ್‌ ಹಾಗೂ ಸೆಲ್ಕೋ ಫೌಂಡೇಷನ್‌ ನೀಡಿದ ನೆರವನ್ನು ಅವರು ಸ್ಮರಿಸುತ್ತಾರೆ.

ಪತಿಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದ ಆಶಾ ಅವರು, ಹಳೆಬೀಡಿನ ಬೀದಿಯೊಂದರ ಬದಿ ಮರದ ಪೆಟ್ಟಿಗೆಯ ಪುಟ್ಟ ಗೂಡಂಗಡಿಯಲ್ಲಿ ಇದ್ದಿಲು ಬಳಸಿ ಇಸ್ತ್ರಿ ಹಾಕುವ ಕಾಯಕದಲ್ಲಿ ತೊಡಗಿಗೊಂಡಿದ್ದರು. ಅದರಲ್ಲಿ ಬಂದ ಹಣದಲ್ಲಿ ಮನೆ ಬಾಡಿಗೆ ಕಟ್ಟುವುದರ ಜೊತೆಗೆ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣಕ್ಕೂ(ಒಬ್ಬಳು ಬಿಇಡಿ ಹಾಗೂ ಇನ್ನೊಬ್ಬಳು ಪದವಿ) ವ್ಯಯಿಸಬೇಕಾಗಿತ್ತು.

ಆಶಾ ಅವರ ಕಷ್ಟವನ್ನು ಅರಿತ ಸೆಲ್ಕೊ ಫೌಂಡೇಷನ್‌ ಅವರಿಗೆ ₹1.30 ಲಕ್ಷ ‌ವೆಚ್ಚದಲ್ಲಿ ದೊಡ್ಡದಾದ, ಸುಲಭವಾಗಿ ಸ್ಥಳಾಂತರಿಸಬಹುದಾದ ಗೂಡಂಗಡಿಯನ್ನು ನಿರ್ಮಿಸಿಕೊಟ್ಟಿತ್ತು. ಸೆಲ್ಕೋ ಸೋಲಾರ್‌ ಲೈಟ್‌ ಕಂಪನಿಯು ಸೋಲಾರ್‌ ಜೆರಾಕ್ಸ್‌ಗೆ ಬೇಕಾದ ವ್ಯವಸ್ಥೆಯನ್ನು ಮಾಡಿತ್ತು. ಇದಕ್ಕಾಗಿ ಕೆನರಾ ಬ್ಯಾಂಕ್‌ನಿಂದ ₹35 ಸಾವಿರ ಸಾಲ ಪಡೆಯಲು ನೆರವಾಗಿತ್ತು.

ಬರೀ ಇಸ್ತ್ರಿ ಮಾತ್ರ ಮಾಡುತ್ತಿದ್ದ ಅವರು ಈಗ ಅಂಗಡಿಯಲ್ಲಿ ಚಹಾ, ಸಂಜೆ ಹೊತ್ತು ಆಮ್ಲೆಟ್‌, ಬಿಸ್ಕತ್ತು, ಚಾಕೊಲೆಟ್‌ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಸೋಲಾರ್ ಜೆರಾಕ್ಸ್‌ನಿಂದಲೂ ಆದಾಯ ಬರುತ್ತಿದೆ. ಹಳೆಬೀಡು ವ್ಯಾಪ್ತಿಯಲ್ಲಿ ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ಗ್ರಾಹಕರು ಇವರ ಜೆರಾಕ್ಸ್‌ ಅಂಗಡಿಯನ್ನೇ ಹುಡುಕಿಕೊಂಡು ಬರುತ್ತಾರೆ.

ನೆರವಾದ ಸೌರಶಕ್ತಿ: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಂದೂರು ಗ್ರಾಮದ75 ವರ್ಷದ ಬಸವಲಿಂಗಶೆಟ್ಟಿ ಅವರ ಕುಟುಂಬದ ಆದಾಯದ ಮೂಲ ಕುಂಬಾರಿಕೆ. ಕೆಲವು ವರ್ಷಗಳ ಹಿಂದೆ ಇಬ್ಬರು ಪುತ್ರರನ್ನು ಈ ದಂಪತಿ ಕಳೆದುಕೊಂಡಿದ್ದಾರೆ. ಕುಂಬಾರಿಕೆ ಬಿಟ್ಟು ಬೇರೆ ಕೆಲಸ ಇವರಿಗೆ ಗೊತ್ತಿಲ್ಲ. ವಯಸ್ಸಿನ ಕಾರಣಕ್ಕೆ ಮೊದಲಿನ ರೀತಿ ಮಣ್ಣಿನ ಪಾತ್ರೆಗಳನ್ನು ತಯಾರಿಸುವುದಕ್ಕೆ ಅವರಿಗೆ ಆಗುತ್ತಿರಲಿಲ್ಲ.

ಇವರ ಕಷ್ಟ ಅರಿತ ಸೆಲ್ಕೋ ಸಂಸ್ಥೆಯು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಕುಂಬಾರಿಕೆ ಯಂತ್ರವನ್ನು ಅವರ ಮನೆಯಲ್ಲಿ ಅಳವಡಿಸಿದೆ. ಇದಕ್ಕೆ ₹65 ಸಾವಿರ ವೆಚ್ಚವಾಗಿದೆ. ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಯಿಂದ ₹45 ಸಾವಿರ ಹಣ ಅವರಿಗೆ ಸಿಗುವಂತೆ ಮಾಡಿದೆ. ಜೊತೆಗೆ ಗ್ರಾಮ ಪಂಚಾಯಿತಿ ಕೂಡ ₹20 ಸಾವಿರ ನೆರವು ನೀಡಿದೆ.

ಸೋಲಾರ್‌ ಯಂತ್ರದಿಂದಾಗಿ ಬಸವಲಿಂಗಶೆಟ್ಟಿ ಅವರು ಮಣ್ಣಿನ ಪಾತ್ರೆಗಳನ್ನು ತಯಾರಿಸಲು ಹಾಕಬೇಕಾಗಿದ್ದ ಶ್ರಮ ಕಡಿಮೆಯಾಗಿದೆ. ಆದಾಯವೂ ಹೆಚ್ಚಾಗಿದೆ. ತಿಂಗಳಿಗೆ ₹8000ದವರೆಗೂ ದುಡಿಯುತ್ತಿದ್ದಾರೆ.ಪಿಯುಸಿ ಓದುತ್ತಿರುವ ಅವರ ಮೊಮ್ಮಗ ಈಗ ಕುಂಬಾರಿಕೆ ಕಲಿಯುತ್ತಿದ್ದು, ಆತನಿಗೆ ವಿಶೇಷ ತರಬೇತಿ ಕೊಡಿಸಲು ಸಂಸ್ಥೆ ಸಿದ್ಧತೆ ಮಾಡಿದೆ.

ಗೂಡಂಗಡಿಗಳಲ್ಲಿ ವ್ಯಾಪಾರ ಮಾಡುವ ಹಲವು ಜನರ ಕಷ್ಟಕ್ಕೆ ಸೆಲ್ಕೊ ಸ್ಪಂದಿಸಿದ್ದು, ತಡರಾತ್ರಿವರೆಗೂ ಅಂಗಡಿಗಳಲ್ಲಿ ವ್ಯಾಪಾರ ಮಾಡಲು ಅನುಕೂಲವಾಗುವುದಕ್ಕಾಗಿ ಸೋಲಾರ್‌ ದೀಪದ ವ್ಯವಸ್ಥೆ ಮಾಡಿದೆ. ಇದಕ್ಕೆ ₹10 ಸಾವಿರ ವೆಚ್ಚವಾಗಿದ್ದು, ಕಂಪನಿ ₹4,000ದವರೆಗೂ ನೆರವು ನೀಡಿದೆ. ಉಳಿದ ಮೊತ್ತವನ್ನು ಸ್ವಸಹಾಯ ಸಂಘದಿಂದ ಸಾಲದ ರೂಪದಲ್ಲಿ ಕೊಡಿಸಿದೆ. ಹಗರೆ, ಹಳೆಬೀಡು ಸೇರಿದಂತೆ ಹಾಸನ ಜಿಲ್ಲೆಯ ವಿವಿಧ ಕಡೆಗಳಲ್ಲಿ 100ಕ್ಕೂ ಹೆಚ್ಚು ಮಂದಿಯ ಮಳಿಗೆಗೆ ಸೋಲಾರ್‌ದೀಪದ ವ್ಯವಸ್ಥೆ ಮಾಡಿದೆ.

‘ಜೀವನ ಮಟ್ಟ ಸುಧಾರಿಸಲು ಯತ್ನ’

ಸೆಲ್ಕೋ ಸಂಸ್ಥೆಯು ಅಂಗವಿಕಲರು, ಆರ್ಥಿಕವಾಗಿ ದುರ್ಬಲರಾದವರನ್ನು ಗುರುತಿಸಿ ಅವರ ಜೀವನೋಪಾಯಕ್ಕಾಗಿ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಉತ್ಪನ್ನಗಳನ್ನು ಪೂರೈಸುತ್ತಾ ಬಂದಿದೆ.

ಸೌರವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ, ಜೆರಾಕ್ಸ್‌, ರೆಫ್ರಿಜರೇಟರ್‌, ಹಾಲು ಕರೆಯುವ ಯಂತ್ರ, ಕಮ್ಮಾರಿಕೆಗೆ ನೆರವಾಗುವ ಗಾಳಿ ಊದು ಯಂತ್ರ (ಬ್ಲೋವರ್‌), ಮೆಣಸು ಪುಡಿ ಮಾಡುವ ಸಾಧನ... ಹೀಗೆ ಹಲವು ಉತ್ಪನ್ನಗಳನ್ನು ಸಂಸ್ಥೆ ಅಗತ್ಯವಿರುವವರಿಗೆ ಪೂರೈಸುತ್ತಿದೆ.

‘ನಾವು ರಾಜ್ಯದಾದ್ಯಂತ 3000ಕ್ಕೂ ಹೆಚ್ಚು ಮಂದಿಗೆ ಜೀವನೋಪಾಯಕ್ಕೆ ಬೇಕಾದ ಸೌರಉತ್ಪನ್ನಗಳನ್ನು ಪೂರೈಸಿದ್ದೇವೆ. ಇದರಲ್ಲಿ 1,250 ಮಂದಿ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರವನ್ನು ಹೊಂದಿದ್ದಾರೆ. ಕಮ್ಮಾರಿಕೆಯಲ್ಲಿ ಬಳಸುವ ಗಾಳಿ ಊದು ಯಂತ್ರವನ್ನು 600ಕ್ಕೂ ಹೆಚ್ಚು ಜನರಿಗೆ ನೀಡಿದ್ದೇವೆ. ಸಂಸ್ಥೆಯು ಬಡವರು ಹಾಗೂ ಅಂಗವಿಕಲರನ್ನು ಗುರುತಿಸಿ, ದಾನಿಗಳ ನೆರವು ಪಡೆದು ಅವರಿಗೆ ಸೌರಶಕ್ತಿ ಚಾಲಿತ ಉತ್ಪನ್ನಗಳನ್ನು ನೀಡಿ ಅವರ ಜೀವನ ಮಟ್ಟ ಸುಧಾರಿಸಲು ಕ್ರಮ ವಹಿಸುತ್ತಿದೆ’ ಎಂದುಸೆಲ್ಕೋ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT