ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಪರ ಕೆಲಸ ಮಾಡಲು ಮತ್ತೆ ಅವಕಾಶ ಕೊಡಿ: ಮರಿತಿಬ್ಬೇಗೌಡ

Published 21 ಮೇ 2024, 16:03 IST
Last Updated 21 ಮೇ 2024, 16:03 IST
ಅಕ್ಷರ ಗಾತ್ರ

ಚಾಮರಾಜನಗರ: ‘24 ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ವಿಧಾನಪರಿಷತ್‌ ಸದಸ್ಯನಾಗಿ ಶಿಕ್ಷಕರ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡಿದ್ದೇನೆ. ಐದನೇ ಬಾರಿ ಸ್ಪರ್ಧಿಸುತ್ತಿದ್ದು, ಮತ್ತೊಂದು ಅವಕಾಶವನ್ನು ನನಗೆ ನೀಡಬೇಕು. ನಾಲ್ಕು ಜಿಲ್ಲೆಗಳ ಪ್ರಜ್ಞಾವಂತ ಶಿಕ್ಷಕರು ಈ ಸಲವೂ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ’ ಎಂದು ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಮಂಗಳವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಲ್ಕು ಸಲವೂ ಶಿಕ್ಷಕ ಮತದಾರರು ನನಗೆ ಹೆಚ್ಚು ಮತಗಳನ್ನು ನೀಡಿ, ಭಾರಿ ಅಂತರದಲ್ಲಿ ಗೆಲ್ಲಿಸಿದ್ದಾರೆ. ಮೊದಲ ಬಾರಿಗೆ ಸ್ಪರ್ಧಿಸುವಾಗ ನಾನು ಕಾಂಗ್ರೆಸ್‌ನಲ್ಲಿದ್ದೆ. ಐದನೇ ಬಾರಿಗೆ ಮತ್ತೆ ತವರು ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ. ನಾಲ್ಕು ಅವಧಿಯಲ್ಲೂ ವಿಧಾನಪರಿಷತ್ತಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಧ್ಚನಿಯಾಗಿ ಕೆಲಸ ಮಾಡಿದ್ದೇನೆ’ ಎಂದರು.

‘ಸದನದಲ್ಲಿ ಅವಕಾಶ ಸಿಕ್ಕಿದಾಗಲೆಲ್ಲ ಶಿಕ್ಷಕರ ಪರವಾಗಿ ಮಾತನಾಡಿದ್ದೇನೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ’ ಎಂದರು. 

ಇಲಾಖೆಯಲ್ಲಿನ ಗೊಂದಲ ಮತ್ತು ಸಚಿವ ಮಧು ಬಂಗಾರಪ್ಪ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮರಿತಿಬ್ಬೇಗೌಡ, ‘ಮಧು ಬಂಗಾರಪ್ಪ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅನುಭವದ ಕೊರತೆ ಇರಬಹುದು. ಆದರೆ, ತಪ್ಪುಗಳಿದ್ದರೆ ಅದನ್ನು ತಿದ್ದುವ ವ್ಯವಧಾನ ಅವರಲ್ಲಿದೆ. ಶಿಕ್ಷಣ ಇಲಾಖೆ ಬಹುದೊಡ್ಡ ಜವಾಬ್ದಾರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಸೇರಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಸಚಿವರಾಗಿ 10 ತಿಂಗಳಾಗಿದೆಯಷ್ಟೇ. ಅವರಿಗೆ ಇನ್ನಷ್ಟು ಸಮಯಾವಕಾಶ ಕೊಡಬೇಕು’ ಎಂದರು. 

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಚುನಾವಣಾ ಉಸ್ತುವಾರಿ ಶ್ರೀಕಂಠು, ಎಸ್‌ಟಿ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಪು.ಶ್ರೀನಿವಾಸ ನಾಯಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಅಸ್ಗರ್‌, ಮುಖಂಡರಾದ ಬ್ರಿಜೇಶ್‌, ಮಹದೇವಯ್ಯ ಇದ್ದರು.

‘ಹಳೆ ಪಿಂಚಣಿ ವ್ಯವಸ್ಥೆ ಅಧ್ಯಯನಕ್ಕೆ ತಂಡ’

'ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹವಾದ ಬದಲಾವಣೆ ತಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ರಾಜ್ಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರಕ್ಕೆ ಒಂದು ದಿನ ಮೊಟ್ಟೆ ನೀಡುವ ವ್ಯವಸ್ಥೆ ಎಂಟನೇ ತರಗತಿಯವರೆಗೆ ಮಾತ್ರ ಇತ್ತು. ಅದನ್ನು ಸಿದ್ದರಾಮಯ್ಯ ಸರ್ಕಾರ ವಾರಕ್ಕೆ ಎರಡು ದಿನ ನೀಡುವುದರ ಜೊತೆಗೆ 10ನೇ ತರಗತಿವರೆಗೆ ವಿಸ್ತರಿಸಿದೆ’ ಎಂದರು. ‘ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿ ಮಾಡಬೇಕು ಎಂದು ಹೋರಾಟ ನಡೆಯುತ್ತಿದೆ. ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಈ ಹೋರಾಟವನ್ನು ಬೆಂಬಲಿಸಿದ್ದರು. ಸರ್ಕಾರ ಬಂದರೆ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಭರವಸೆ ನೀಡಿದ್ದರು. ಅದರಂತೆ ಅಧಿಕಾರಕ್ಕೆ ಬಂದ ತಕ್ಷಣ ಹೊಸ ಪಿಂಚಣಿ ವ್ಯವಸ್ಥೆ ಮತ್ತು ಬೇರೆ ರಾಜ್ಯಗಳಲ್ಲಿ ಇರುವ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲು ಐಎಎಸ್‌ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ’ ಎಂದರು.  ‘ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ ಬೋಧಕರಿಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂಬ ಒತ್ತಾಯವಿದ್ದು ಸರ್ಕಾರ ಆ ಬಗ್ಗೆಯೂ ಅಧ್ಯಯನ ನಡೆಸಲಿದೆ’ ಎಂದು ಮರಿತಿಬ್ಬೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT