ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎಸ್ಸೆಸ್ಸೆಲ್ಸಿ ಸಾಧಕರ ಪ್ರತಿಕ್ರಿಯೆ

Last Updated 19 ಮೇ 2022, 16:35 IST
ಅಕ್ಷರ ಗಾತ್ರ

ಪ್ರಥಮ ಸ್ಥಾನ ಪಡೆದ (621 ಅಂಕ) ಸಾಧಕರ ಮಾತು

ಎಂಟು ಗಂಟೆ ಅಭ್ಯಾಸ

ಶಾಲಾ ತರಗತಿಯಲ್ಲದೆ, ನಿತ್ಯವೂ ಎಂಟು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಇಷ್ಟು ಅಂಕ ಗಳಿಸಲು ಶಾಲಾ ಶಿಕ್ಷಕರು ಹಾಗೂ ಪೋಷಕರ ಪ್ರೇರಣೆಯಿಂದ ಸಾಧ್ಯವಾಯಿತು. ನನ್ನದು ರೈತ ಕುಟುಂಬ. ಆರನೇ ತರಗತಿಗೆ ಈ ಶಾಲೆಗೆ ಪ್ರವೇಶ ಪಡೆದೆ. ಓದುವುದಕ್ಕೆ ಉತ್ತಮ ಪರಿಸರ ಇದೆ. ಎಲ್ಲರೂ ಉತ್ತಮವಾಗಿ ಸಹಕರಿಸಿದರು.

–ಅನುಷಾ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಗುಂಡ್ಲುಪೇಟೆ

ವೈದ್ಯೆಯಾಗಬೇಕೆಂಬ ಆಸೆ

ನನ್ನ ಈ ಸಾಧನೆಗೆ ಶಿಕ್ಷಕರು, ಪೋಷಕರು ಕಾರಣಕರ್ತರು. ಮುಂದಿನ ದಿನಗಳಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿ ಅಲ್ಲೂ ಹೆಚ್ಚಿನ ಅಂಕಗಳಿಸಿ ವೈದ್ಯೆಯಾಗಬೇಕು ಎಂಬ ಆಸೆಯಿದೆ. ಪರೀಕ್ಷೆ ಸಮಯದಲ್ಲಿ ನನಗೆ ಭಯವಿತ್ತು. ಆ ಭಯ ಹೋಗಲಾಡಿಸಿದವರು ನನ್ನ ಗುರುಗಳು. ಅವರ ಘನತೆ ಉಳಿಸುವ ಕೆಲಸ ಮಾಡಿದ್ದೇನೆ.

–ದೇವಿ, ಕೆ.ವಿ.ಎನ್‌, ಆದರ್ಶ ವಿದ್ಯಾಲಯ

ಚೆನ್ನಾಗಿ ಅಭ್ಯಾಸ ಮಾಡಿದ್ದೆ

ನಮ್ಮದು ಬಡ ಕುಟುಂಬ. ಅ‍ಪ್ಪ ವ್ಯವಸಾಯ ಮಾಡುತ್ತಾರೆ. ಹೆಚ್ಚು ಆದಾಯ ಇಲ್ಲ. ಚೆನ್ನಾಗಿ ಓದಿದರಷ್ಟೇ ಏನಾದರೂ ಸಾಧಿಸಬಹುದು ಎಂಬುದು ಗೊತ್ತಿತ್ತು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಸೇರಿದೆ. ಚೆನ್ನಾಗಿ ಓದಿದ್ದೇನೆ. ಬೋಧಕರ ಮಾರ್ಗದರ್ಶನವೂ ಚೆನ್ನಾಗಿತ್ತು. ಜಿಲ್ಲೆಗೆ ಮೊದಲ ಸ್ಥಾನ ಬಂದಿರುವುದು ಖುಷಿಯಿದೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಬೇಕೆಂದಿದ್ದೇನೆ. ನಾಗರಿಕ ಸೇವೆಗಳ ಅಧಿಕಾರಿಯಾಗುವ ಬಯಕೆ ಇದೆ.

–ಪಾರ್ವತಮ್ಮ ಬಿ.ಲಕ್ಕೂರು, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಜ್ಯೋತಿಗೌಡನಪುರ, ಚಾಮರಾಜನಗರ ತಾಲ್ಲೂಕು

ಪೋಷಕರು, ಶಿಕ್ಷಕರ ಸಹಕಾರ

ನಮ್ಮ ಗ್ರಾಮದಿಂದ ಶಾಲೆ 18 ಕಿ.ಮೀ. ದೂರವಿದೆ. ನನಗೆ ತಂದೆ ಇಲ್ಲ. ತಾಯಿಯೊಂದಿಗೆ ಇದ್ದೇನೆ. ಪ್ರತಿ ದಿನವೂ ಶಾಲೆಗೆ ಹೋಗಿ ಬರುತ್ತಿದ್ದೆ. ನನ್ನ ಮಾವ, ತಾಯಿ ಮತ್ತು ಶಿಕ್ಷಕರ ಸಹಕಾರದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ಐಎಎಸ್ ಅಧಿಕಾರಿಯಾಗುವ ಕನಸಿದೆ.

–ಸಿಂಚನ ಡಿ.ಎಲ್., ಆದರ್ಶ ವಿದ್ಯಾಲಯ, ಗುಂಡ್ಲುಪೇಟೆ.

ತಂದೆ–ತಾಯಿ ಪ್ರೋತ್ಸಾಹ ಕಾರಣ

ನನ್ನತಂದೆ ಕೂಲಿ ಮಾಡುತ್ತಿದ್ದಾರೆ. ತಾಯಿ ಅಂಗನವಾಡಿ ಸಹಾಯಕಿ. ನನ್ನ ಓದಿಗೆ ತುಂಬಾ ಶ್ರಮ ಪಟ್ಟಿದ್ದಾರೆ. ಏನೇ ಕೇಳಿದರೂ ಇಲ್ಲ ಎನ್ನದೆ ಕೊಡಿಸಿದರು. ಜತೆಗೆ ನನ್ನ ಓದಿಗೆ ಸಹಕರಿಸಿದರು. ನಾನು ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವುದರಿಂದ ಖುಷಿಯಾಗಿದ್ದಾರೆ. ಈ ವರ್ಷ ಓದಿಗೆ ತುಂಬಾ ಶ್ರಮ ಹಾಕಿದೆ. ಶಾಲೆಯಲ್ಲಿ ಶಿಕ್ಷಕರು ಸಹಾಯ ಮಾಡಿದರು. ಇದರ ಪ್ರತಿಫಲವಾಗಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು.

-ಸ್ಫೂರ್ತಿ, ಕಲ್ಪುರ,ಮರಿಯಾಲದ ಮುರುಘಾ ರಾಜೇಂದ್ರಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿನಿ

620 ಅಂಕ ಗಳಿಸಿದವರ ಅಭಿಪ್ರಾಯ

ಟ್ಯೂಷನ್‌ ಪಡೆದಿಲ್ಲ

ಶಾಲೆಯಲ್ಲಿ ಶಿಕ್ಷಕರು ಅರ್ಥವಾಗುವ ರೀತಿಯಲ್ಲಿ ಕಲಿಸುತ್ತಿದ್ದರು. ಮನೆಯಲ್ಲೂ ಓದಿಗೆ ಪ್ರೋತ್ಸಾಹ ಇತ್ತು. ಟ್ಯೂಷನ್‌ಗೆ ಹೋಗದೆ ಮನೆಯಲ್ಲಿ ಹೆಚ್ಚು ಓದುತ್ತಿದ್ದೆ. ಮುಂದೆ ಏನಾಗಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.

–ಚಂದನ.ಎಸ್.ಬಿ., ಸೇಂಟ್ ಜಾನ್ ಇಂಗ್ಲಿಷ್‌ ಮಾಧ್ಯಮ ಶಾ‌ಲೆ, ಗುಂಡ್ಲುಪೇಟೆ

ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ

ವರ್ಷವಿಡೀ ಶ್ರಮ ಹಾಕಿದ್ದೆ. ಹಗಲು–ರಾತ್ರಿ ಎಡೆಬಿಡದೆ ಓದಿದ್ದೇನೆ. ಹಾಗಾಗಿ, ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲೂ ಚೆನ್ನಾಗಿ ಓದಿ ಕಾಲೇಜು, ಪೋಷಕರಿಗೆ ಗೌರವ ತರುತ್ತೇನೆ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ ತಂದೆ–ತಾಯಿಗೆ ಕೀರ್ತಿ ತರುವ ಕೆಲಸ ಮಾಡಬೇಕು

–ಅನುಷಾ,ಎನ್.,ನಿಸರ್ಗ ವಿದ್ಯಾನಿಕೇತನ ಇಂಗ್ಲಿಷ್‌ ಮಾಧ್ಯಮ ಶಾಲೆ, ಕೊಳ್ಳೇಗಾಲ

ಎಲ್ಲರ ಸಹಕಾರದಿಂದ ಸಾಧನೆ

620 ಅಂಕ ಬಂದಿರುವುದು ಖುಷಿ ತಂದಿದೆ. ಪ್ರತಿ ದಿನವೂ ಚೆನ್ನಾಗಿ ಓದುತ್ತಿದ್ದೆ. ಕಷ್ಟದ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೆ. ಶಿಕ್ಷಕರು, ನನ್ನ ತಂದೆ ತಾಯಿ, ಸ್ನೇಹಿತರು ಎಲ್ಲರೂ ಸಹಕಾರ ನೀಡಿದ್ದಾರೆ. ಮುಂದೆ ವಿಜ್ಞಾನ ವಿಷಯ ಆಯ್ಕೆ ಮಾಡುತ್ತೇನೆ. ವೈದ್ಯನಾಗುವ ಆಸೆ ಇದೆ

–ಜೀವನ್‌, ಸಂತ ಜೋಸೆಫ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ, ಚಾಮರಾಜನಗರ

ಖುಷಿಯೊಂದಿಗೆ ಬೇಸರವೂ ಇದೆ

ಹೆಚ್ಚು ಅಂಕ ಬಂದಿರುವುದು ಖುಷಿಯಾಗಿದೆ. 620ಕ್ಕಿಂತ ಹೆಚ್ಚು ಅಂಕ ಬರುವ ನಿರೀಕ್ಷೆ ಇತ್ತು. ಸಮಾಜ ವಿಜ್ಞಾನ ವಿಷಯದಲ್ಲಿ ಇನ್ನೂ ಎರಡು ಅಂಕ ಬರಬೇಕಿತ್ತು. ಹಾಗಾಗಿ ಬೇಸರವಾಗಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಬೇಕು ಎಂದು ಯೋಚಿಸುತ್ತಿದ್ದೇನೆ. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ.

–ತನುಪ್ರಿಯಾ, ಸೇವಾ ಭಾರತಿ ಇಂಗ್ಲಿಷ್‌ ಮಾಧ್ಯಮ ಶಾಲೆ, ಚಾಮರಾಜನಗರ

ನಿರೀಕ್ಷೆಗೂ ಮೀರಿ ಅಂಕ

ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿದ್ದೆ. ಉತ್ತಮ ಅಂಕ ಬರಬಹುದು ಎಂಬ ನಿರೀಕ್ಷೆ ಇತ್ತು. ಅದಕ್ಕೂ ಮೀರಿ ಹೆಚ್ಚು ಅಂಕ ಬಂದಿರುವುದು ಸಂತಸ ತಂದಿದೆ.ನನ್ನ ತಂದೆ, ತಾಯಿ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ.

–ಅನುಷಾ.ಡಿ.ವಿ., ವಾಸವಿ ವಿದ್ಯಾಕೇಂದ್ರ ಕೊಳ್ಳೇಗಾಲ

ಮನೆಯಲ್ಲೇ ಕುಳಿತು ಓದಿದೆ

ವೇಳಾಪಟ್ಟಿ ಹಾಕಿಕೊಂಡು ಓದಿದೆ. ಗ್ರಾಮದಿಂದ ಶಾಲೆಗೆ ಹೋಗುತ್ತಿದ್ದರಿಂದ ಟ್ಯೂಷನ್‌ಗೆ ಹೋಗಿ ಬರಲು ಸಮಯ ಸಾಕಾಗುತ್ತಿರಲಿಲ್ಲ. ಹಾಗಾಗಿ, ಶಾಲೆಯಲ್ಲಿ ಕಲಿತದ್ದನ್ನು ಮನೆಯಲ್ಲಿ ಕುಳಿತು ಓದುತ್ತಿದ್ದೆ. ಶಿಕ್ಷಕರು, ಪೋಷಕರು ಸಹಕಾರ ಹೆಚ್ಚಿದೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಮನಸ್ಸಿದೆ.

–ಜಿ.ವರ್ಷಿಣಿ, ಸೇಂಟ್‌ ಜಾನ್ ಇಂಗ್ಲಿಷ್‌ ಮಾಧ್ಯಮ ಶಾಲೆ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT