ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಣಪತಿ ವಿಸರ್ಜನೆ ವೇಳೆ ಪೊಲೀಸರಿಗೆ ಕಲ್ಲೇಟು, ಮೂವರಿಗೆ ಗಾಯ

ಉಪ್ಪಾರಬೀದಿ ಘಟನೆ: 15ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್‌, ಐವರ ಬಂಧನ
Last Updated 19 ಸೆಪ್ಟೆಂಬರ್ 2022, 11:37 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಉಪ್ಪಾರ ಬೀದಿಯಲ್ಲಿ ಭಾನುವಾರ ರಾತ್ರಿ ಗಣಪತಿ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ ಗಣೇಶೋತ್ಸವದ ಸಂಘಟಕರಲ್ಲಿ ಕೆಲವರು ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿದ್ದಾರೆ.

ಪಟ್ಟಣ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮಹದೇವ್‌ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 15ಕ್ಕೂ ಹೆಚ್ಚು ಜನರ ಮೇಲೆ ‍ಪ್ರಕರಣ ದಾಖಲಿಸಿದ್ದು, ಐವರನ್ನು ಬಂಧಿಸಿದ್ದಾರೆ. ಬಂಧಿತರ ವಿವರಗಳು ತಕ್ಷಣಕ್ಕೆ ತಿಳಿದು ಬಂದಿಲ್ಲ.

ಉಪ್ಪಾರ ಬೀದಿಯ ಕೆ.ಟಿ.ನಾಗಶೆಟ್ಟಿ ಅವರ ನೇತೃತ್ವದಲ್ಲಿ ಮಂಟೇಸ್ವಾಮಿ ದೇವಾಲಯದ ಕೊಂಡ ಹಾಕುವ ಸ್ಥಳದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು. ಭಾನುವಾರ ರಾತ್ರಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮಹದೇವ್ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ರಾತ್ರಿ 10.30ರ ಬಳಿಕವೂ ಸಂಘಟಕರು ಧ್ವನಿವರ್ಧಕದಲ್ಲಿ ಜೋರಾಗಿ ಹಾಡು ಹಾಕಿ ನೃತ್ಯ ಮಾಡುತ್ತಿದ್ದಾಗ ಮಹದೇವ್‌ ಅವರು, ‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸಬಾರದು. ಧ್ವನಿ ವರ್ಧಕ, ಡಿಜೆ ಬಳಸಲು ಅನುಮತಿ ನೀಡಿಲ್ಲ. ಡಿಜೆ ನಿಲ್ಲಿಸಿ’ ಎಂದು ಸಂಘಟಕರಿಗೆ ಹೇಳಿದರು.

ಈ ಸಂದರ್ಭದಲ್ಲಿ ಕೆ.ಟಿ.ನಾಗಶೆಟ್ಟಿ ಅವರು ‘ನಾವು ಧ್ವನಿವರ್ಧಕವನ್ನು ಹೇಗಾದರೂ ಹಾಕಿಕೊಳ್ಳುತ್ತೇವೆ. ನೀವ್ಯಾರು ಪ್ರಶ್ನಿಸುವುದಕ್ಕೆ ಎಂದು ಕೂಗಾಡಿದರು. ಅಲ್ಲದೇ, ‘ಪೊಲೀಸರು ಏನು ಹೇಳಿದರೂ ಕೇಳಬೇಡಿ. ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ’ ಎಂದು ನೃತ್ಯ ಮಾಡುತ್ತಿದ್ದವರಿಗೆ ಹೇಳಿದರು’ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಬಂದೋಬಸ್ತ್‌ ಕರ್ತವ್ಯದಲ್ಲಿದ್ದ ಎಎಸ್‌ಐ ಶಿವಶಂಕರ್‌ ಅವರು ಪಟ್ಟಣ‌ ಠಾಣೆಗೆ ದೂರು ನೀಡಿದ್ದಾರೆ.

‘ಕೆ.ಟಿ.ನಾಗಶೆಟ್ಟಿ ಮಗ ಮಹೇಂದ್ರ ಅವರು ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದನ್ನು ಪ‍್ರಶ್ನಿಸಿದಾಗ, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಅಲ್ಲದೇ, ಮಹದೇವ್‌ ಸಬ್‌ ಇನ್‌ಸ್ಪೆಕ್ಟರ್‌ ಮಹದೇವ್‌ ಅವರ ಮೇಲೆ ಕಲ್ಲು ಎಸೆದರು. ಇದರಿಂದ ಅವರ ತಲೆಗೆ ಏಟಾಯಿತು. ಚೆನ್ನಿಗ, ಅವರ ತಮ್ಮ ಮಹೇಶ, ನಾಗೇಶ, ಮುರುಗೇಶ, ರಮೇಶ ಅಲಿಯಾಸ್‌ ರಮ್ಮಿ ಹಾಗೂ ಇತರ 10ರಿಂದ 15 ಮಂದಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ನನಗೆ, ಜೀಪು ಚಾಲಕ ಬಸವರಾಜು ಅವರಿಗೆ ಗಾಯಗಳಾಗಿವೆ’ ಎಂದು ದೂರಿನಲ್ಲಿ ಅವರು ಹೇಳಿದ್ದಾರೆ.

ಎಫ್‌ಐಆರ್‌: ಘಟನೆ ಸಂಬಂಧ 15ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್‌ ದಾಖಲಾಗಿಸಲಾಗಿದ್ದು, ಐವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಮಹದೇವ್‌ ಹಾಗೂ ಇತರರು ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT