ಶುಕ್ರವಾರ, ಡಿಸೆಂಬರ್ 3, 2021
20 °C
ಜಿಲ್ಲಾ ಉಪ್ಪಾರ ಸಂಘದಿಂದ ಸಮುದಾಯದ 340 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

‘ಶಿಕ್ಷಣಕ್ಕೆ ಒತ್ತು ಕೊಡಿ, ಮಕ್ಕಳ ಆಸಕ್ತಿಗೆ ಸ್ಪಂದಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಶಿಕ್ಷಣಕ್ಕಾಗಿ ಜಿಲ್ಲೆಯಲ್ಲಿ ಎಲ್ಲ ವ್ಯವಸ್ಥೆಗಳೂ ಇವೆ. ಸಮುದಾಯದ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪೋಷಕರು ಕೂಡ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ರಾಜ್ಯ ಹಾಗೂ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ಇಲ್ಲಿ ಹೇಳಿದರು. 

ಜಿಲ್ಲಾ ಉಪ್ಪಾರ ಸಂಘ ಹಮ್ಮಿಕೊಂಡಿದ್ದ 2019–20, 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಉಪ್ಪಾರ ಸಮುದಾಯದ 340 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಈಗ ವೈದ್ಯಕೀಯ, ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌, ಕೃಷಿ, ಕಾನೂನು, ಪದವಿ, ಸ್ನಾತಕೋತ್ತರ ಪದವಿ, ಪಿಯುಸಿ... ಎಲ್ಲಾ ಕೋರ್ಸ್‌ಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳಿವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೂ ಸಮುದಾಯಕ್ಕೆ ಶೈಕ್ಷಣಿಕ ಸೌಲಭ್ಯ ನೀಡಲಾಗುತ್ತಿದೆ. ಸಮುದಾಯದ ಮಕ್ಕಳು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

‘ಪೋಷಕರು, ಮಕ್ಕಳ ಆಸೆ–ಆಕಾಂಕ್ಷೆಗೆ ಅಡ್ಡಿಪಡಿಸಬಾರದು. ಎಸ್ಸೆಸ್ಸೆಲ್ಸಿ, ಪಿಯುಸಿ ಆಗುತ್ತಲೇ ಮಕ್ಕಳನ್ನು ಕರೆದು ಅವರ ಇಷ್ಟಗಳನ್ನು ಕೇಳಿ. ಯಾವ ಶಿಕ್ಷಣದಲ್ಲಿ ಮುಂದುವರೆಯಬೇಕು ಎಂಬುದನ್ನು ವಿಚಾರಿಸಿ. ಅವರ ಆಸಕ್ತಿಗೆ ಉತ್ತೇಜನ ನೀಡಿ’ ಎಂದು ಹೇಳಿದರು.

ಎಲ್ಲ ಸಹಕಾರ: ಸಮುದಾಯದ ಮುಖಂಡ ಸಿ.ಎ.ಮಹದೇವ ಶೆಟ್ಟಿ ಮಾತನಾಡಿ ‘ಎಸ್ಸೆಸ್ಸೆಲ್ಸಿ‌, ಪಿಯುಸಿ ಫಲಿತಾಂಶ ಬಂದ ತಕ್ಷಣವೇ ಸಮುದಾಯದ ಮಕ್ಕಳಿಗೆ ಮುಂದೆ ಯಾವ ಶಿಕ್ಷಣ ಪಡೆಯಬಹುದು ಎಂಬ ಮಾರ್ಗದರ್ಶನ ನೀಡುವ ವ್ಯವಸ್ಥೆ ಆಗಬೇಕು’ ಎಂದು ಸಲಹೆ ನೀಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಪುಟ್ಟರಂಗಶೆಟ್ಟಿ, ‘ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಏನೆಲ್ಲಾ ಬೇಕೋ ಅದನ್ನು ಮಾಡೋಣ. ಮಕ್ಕಳು ಅದರ ಪ್ರಯೋಜನ ಪಡೆದುಕೊಳ್ಳಬೇಕು. ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಹೋದ ನಂತರ ತಂದೆ–ತಾಯಿ, ಗುರು ಹಿರಿಯರು ಹಾಗೂ ಸಮಾಜವನ್ನು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಗಡಿಗೆ ಮಹತ್ವ ಇದೆ: ‘ಉಪ್ಪಾರ ಸಮುದಾಯದ ಗಡಿಗೆ ಮಹತ್ವ ಇದೆ. ಆದರೆ ಇತ್ತೀಚೆಗೆ ಅದರ ಮಹತ್ವ ಕಡಿಮೆಯಾಗುತ್ತಿದೆ ಎಂದೆನಿಸುತ್ತಿದೆ. ಗಡಿ ಯಜಮಾನನಾಗಿ ನನಗೇ ಕೆಲವು ಪ್ರಕರಣಗಳಲ್ಲಿ ನ್ಯಾಯ ತೀರ್ಮಾನ ಮಾಡುವುದಕ್ಕೆ ಆಗುತ್ತಿಲ್ಲ. ಯಜಮಾನರನ್ನೂ ಪ್ರಶ್ನಿಸುವ ಸಂಪ್ರದಾಯ ಬೆಳೆಯುತ್ತಿದೆ. ಯಜಮಾನರಿಗೆ ಗೌರವ ಕೊಡಿ. ಗಡಿಯ ಮಹತ್ವವನ್ನು ಉಳಿಸಿ’  ಎಂದು ಶಾಸಕರು ಕಿವಿಮಾತು ಹೇಳಿದರು.

ಸಹಕಾರ ಸಂಘ ಬೇಕು: ‘ಸಮುದಾಯದ ಜನರಿಗಾಗಿ ಜಿಲ್ಲೆಯಲ್ಲಿ ಸಹಕಾರ ಸಂಘದ ಅಗತ್ಯವಿದೆ. ಸಮುದಾಯದ ಸರ್ಕಾರಿ ನೌಕರರ ಸಹಕಾರ ಸಂಘ ಇದೆ. ಆದರೆ, ಅದರ ಪ್ರಯೋಜನ ಜನಾಂಗದ ಇತರರಿಗೆ ಆಗುವುದಿಲ್ಲ’ ಎಂದರು. 

ಲ್ಯಾಪ್‌ಟ್ಯಾಪ್‌ ವಿತರಣೆ: 2019–20, 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಪುಟ್ಟರಂಗಶೆಟ್ಟಿ ವೈಯಕ್ತಿಕವಾಗಿ ಲ್ಯಾಪ್‌ಟಾಪ್‌ ವಿತರಿಸಿ ಸನ್ಮಾನಿಸಿದರು. ಉಳಿದ 330 ಮಕ್ಕಳಿಗೆ ನಗದು ಸಹಿತ, ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯತು.

ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕೋಬಾ, ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಮಾದೇಶ್‌ ಉಪ್ಪಾರ, ಕೃಷ್ಣಸ್ವಾಮಿ,  ಪ್ರಾಂಶುಪಾಲರಾದ ಪ್ರಿಯಾ ಶಂಕರ್‌, ರಂಗಸ್ವಾಮಿ ಮಾತನಾಡಿದರು. 

ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್‌, ಮುಖಂಡರಾದ ಕೃಷ್ಣಶೆಟ್ಟಿ, ಸೋಮಣ್ಣ, ತುಂಗಶೆಟ್ಟಿ, ಚಿಕ್ಕಶೆಟ್ಟಿ, ನಿರ್ಮಲಾ, ನಗರಸಭಾ ಸದಸ್ಯ ಬಸವಣ್ಣ ಸೇರಿದಂತೆ ಗಡಿ ಯಜಮಾನರು, ಮುಖಂಡರು ಹಾಗೂ ಕುಲಸ್ಥರು ಇದ್ದರು.

‘ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡದಿರಿ’

ಸಮುದಾಯದ ಜನರು ಮೌಢ್ಯಕ್ಕೆ ಬಲಿಯಾಗಬಾರದು. ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡಬಾರದು ಎಂದು ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಮುಖಂಡ ಮಧುವನಹಳ್ಳಿ ಶಿವಕುಮಾರ್‌ ಸಲಹೆ ನೀಡಿದರು. 

ಗಡಿ ಯಜಮಾನರು ಮನಸ್ಸು ಮಾಡಿದರೆ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತಡೆ ಹಿಡಿಯಬಹುದು ಎಂದರು.

‘ಮಕ್ಕಳಿಗೆ ಮದುವೆ ನಿಶ್ಚಯ ಮಾಡುವುದಕ್ಕೂ ಮೊದಲು ಪೋಷಕರು ಮಕ್ಕಳ ಅಭಿಪ್ರಾಯ ಕೇಳಬೇಕು. ಯಾರನ್ನಾದರೂ ಪ್ರೀತಿಸುತ್ತಿದ್ದಾರೆಯೇ ಎಂಬುದನ್ನು ವಿಚಾರಿಸಿ. ಅವರ ಇಷ್ಟದಂತೆಯೇ ನಡೆದುಕೊಳ್ಳಿ. ಇಲ್ಲದಿದ್ದರೆ ಮದುವೆ ನಂತರ ಅವರ ಬದುಕಲ್ಲದೇ ಕುಟುಂಬದವರ ಜೀವನವೇ ಹಾಳಾಗುತ್ತದೆ’ ಎಂದು ಪುಟ್ಟರಂಗಶೆಟ್ಟಿ ಕಿವಿಮಾತು ಹೇಳಿದರು. 

ಸಮುದಾಯದ ನಾಯಕಿ ಕಾವೇರಿ ಮಾತನಾಡಿ, ‘ಸಮುದಾಯದ ಯುವಕ–ಯುವತಿಯರು ಆಸೆ ಆಮಿಷಗಳಿಗೆ ಸಿಲುಕಿ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೋಷಕರು ಹಾಗೂ ಗಡಿ ಯಜಮಾನರು ಕ್ರಮ ಕೈಗೊಳ್ಳಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.