ಬುಧವಾರ, ಆಗಸ್ಟ್ 17, 2022
25 °C

ಚಾಮರಾಜನಗರ: ದೆಹಲಿ ಚಳವಳಿ ಬೆಂಬಲಿಸಿ ಕಬ್ಬು ಬೆಳೆಗಾರರಿಂದ ಹೆದ್ದಾರಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳುವಳಿಯನ್ನು ಬೆಂಬಲಿಸಿ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಗುರುವಾರ ನಗರದ ಜಾಲಹಳ್ಳಿಹುಂಡಿಯ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ‍ಪ್ರತಿಭಟನೆ ನಡೆಸಿದರು. 

ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನನಿರತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಮಾತನಾಡಿ, ‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿದೆ. ರೈತರು ತಮ್ಮ ಸಮಸ್ಯೆಗಳನ್ನು ಮಂಡಿಸಲು ದೆಹಲಿಗೆ ಹೋದರೆ ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿ, ರಸ್ತೆಗಳನ್ನು ಬ್ಯಾರಿಕೇಡ್,  ಮುಳ್ಳುತಂತಿ ಹಾಕುವ ಮೂಲಕ ಬಂದ್ ಮಾಡಿ ರೈತರ ಹೋರಾಟವನ್ನು ಸರ್ಕಾರ ಹತ್ತಿಕ್ಕಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

‘ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು, ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿ‌ ಮಾಡಿ ಎಂದು ಕೃಷಿಕರು ಒತ್ತಾಯ ಮಾಡುತ್ತಿದ್ದರೆ ಕೇಂದ್ರ ಸರ್ಕಾರವು ಒಪ್ಪಂದ ಕೃಷಿ, ಕಾರ್ಪೊರೇಟ್‌ ಕೃಷಿಗೆ ಒಲವು ತೋರುತ್ತಿದೆ. ವಿದ್ಯುತ್, ಎಪಿಎಂಸಿಗಳನ್ನು ಖಾಸಗೀಕರಣಗೊಳಿಸಿ ರೈತರನ್ನು ಕೃಷಿಯಿಂದ ದೂರವಿಟ್ಟು ಕಂಪನಿಗಳ ಮೂಲಕ ಕೃಷಿ ಮಾಡುವ ಹುನ್ನಾರ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೇಂದ್ರ, ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆಯ ಮೂಲಕ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ತುಘಲಕ್‌ ಆಡಳಿತ ನಡೆಸುತ್ತಿವೆ ಎಂದು ದೂರಿದರು. 

ಹೆಚ್ಚುವರಿ ಪ್ರೋತ್ಸಾಹ ಧನಕ್ಕೆ ಆಗ್ರಹ: ‘ಕಬ್ಬಿಗೆ ನ್ಯಾಯಯುತ ಬೆಲೆ ಕೊಡಿಸಲು, ಕಾರ್ಖಾನೆಗಳು ಮಾಡುತ್ತಿರುವ ಇಳುವರಿ ಮೋಸ ತಪ್ಪಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಸಕ್ಕರೆ ಸಚಿವರು ಸಕ್ಕರೆ ಕಾರ್ಖಾನೆಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಭತ್ತಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿ ₹200 ಪ್ರೋತ್ಸಾಹಧನ  ನೀಡುವಲ್ಲಿ ವಿಫಲವಾಗಿದೆ’ ಎಂದು ದೂರಿದರು.

8 ರಂದು ವಿಧಾನಸೌಧ ಮುತ್ತಿಗೆ: ರೈತ ವಿರೋಧಿ ನೀತಿ ಖಂಡಿಸಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಇದೇ 8ರಂದು ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಭಾಗ್ಯರಾಜ್‌ ಹೇಳಿದರು. 

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಮೂಕಳ್ಳಿ ಮಹದೇವಸ್ವಾಮಿ, ಪಟೇಲ್‌ ಶಿವಮೂರ್ತಿ, ಕುಂತೂರು ಪ್ರಭುಸ್ವಾಮಿ, ಗಂಗಾಧರಪ್ಪ, ಕಿನಕಹಳ್ಳಿ ಬಸವಣ್ಣ, ಗೌಡಳ್ಳಿ ಷಡಕ್ಷರಿ, ವಿಜಯಕುಮಾರ್, ಸಿದ್ದರಾಜು, ಎಂ.ಬಿ.ರಾಜು, ರೇವಣ್ಣ, ತೆಳ್ಳನೂರು ನಾಗೇಂದ್ರ, ರಂಗಸ್ವಾಮಿ, ಶ್ರೀಕಂಠ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು