ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಬರದ ನಡುವೆ ಭತ್ತ, ರಾಗಿ ಬಿತ್ತನೆ

Published 13 ಫೆಬ್ರುವರಿ 2024, 7:33 IST
Last Updated 13 ಫೆಬ್ರುವರಿ 2024, 7:33 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಜೀವಜಲದ ಮೂಲಗಳು ಬತ್ತುತ್ತಿವೆ. ಕೆರೆ, ಕಾಲುವೆಗಳಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ. ಇದರ ನಡುವೆಯೇ, ನೀರಾವರಿ ನಂಬಿದವರು ಆಹಾರ ಧಾನ್ಯಗಳ ಬಿತ್ತನೆಗೆ ಮುಂದಾಗಿದ್ದಾರೆ. ಭತ್ತ, ರಾಗಿ ಹೊಟ್ಟಲು ಪಾತಿ ಮಾಡಿ, ಬೇಸಿಗೆ ಅವಧಿಯಲ್ಲಿ ಫಸಲು ತೆಗೆಯುವತ್ತ ಚಿತ್ತ ಹರಿಸಿದ್ದಾರೆ. ದ್ವಿದಳ ಧಾನ್ಯ ಬೆಳೆಯುವತ್ತಲೂ ಮುಂದಾಗಿದ್ದು, ಭೂಮಿ ಸಿದ್ಧತೆ ಆರಂಭಿಸಿದ್ದಾರೆ.

ತಾಲ್ಲೂಕಿನ ಕಾಡಂಚಿನ ಪ್ರದೇಶ ಹಾಗೂ ಅಗರ ಹೋಬಳಿಗಳ ಸುತ್ತಮುತ್ತ ರೈತರು ಸಣ್ಣಭತ್ತ, ರಾಗಿ, ಮುಸುಕಿನಜೋಳ ಮತ್ತು ಉದ್ದು ಬಿತ್ತನೆಗೆ ಹಿಡುವಳಿ ಸಿದ್ಧತೆ ಮಾಡುತ್ತಿದ್ದಾರೆ. ಕಳೆದ ವರ್ಷ ಮಳೆ ಅಭಾವದಿಂದ ಆಹಾರ ಬೆಳೆಗಳ ಉತ್ಪಾದನೆ ಕುಸಿದಿದ್ದು, ಧವಸ ಧಾನ್ಯಗಳಿಗೆ ಬೆಲೆ ಮತ್ತು ಬೇಡಿಕೆ ಹೆಚ್ಚಾಗಿದೆ. ಹಾಗಾಗಿ, ಅಲ್ಪಾವಧಿ ಬೆಳೆಗಳ ಬಿತ್ತನೆ ನಡೆಸಲು ಬೇಸಾಯಗಾರರು ಒಲವು ತೋರಿದ್ದಾರೆ.

‘ಕೊಳವೆ ಬಾವಿಯ ನೀರು ಬಳಸಿಕೊಂಡು ಭತ್ತದ ಬಿತ್ತನೆ ಮಾಡಿದ್ಧೇನೆ. ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾದಲ್ಲಿ ನೀರಿಗೆ ತೊಂದರೆ ಇರದು. ಮುಂಗಾರು ಹಂಗಾಮಿಗೆ ಇನ್ನೂ ಮೂರು ತಿಂಗಳು ಇದ್ದು, ಅಲ್ಲಿ ತನಕ ಹಲವು ಬೆಳೆಗಳನ್ನು ಬೆಳೆಯಬಹುದು. ಬೇಸಿಗೆ ಸಮೀಪಿಸುತ್ತಿದ್ದು, ಕೃಷಿಕರು ನೀರಾವರಿ ಮೂಲಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ವರಮಾನ ಗಳಿಸಬಹುದು. ಈ ನಡುವೆ ಮಳೆ ಸುರಿದರೆ ಇಳುವರಿ ಹೆಚ್ಚಾಗಬಹದು’ ಎಂದು ಮಲಾರಪಾಳ್ಯ ರೈತ ಶಿವಣ್ಣನಾಯಕ ಹೇಳಿದರು. 

ಬೆಲೆ ಹೆಚ್ಚಳ: ಮಾರುಕಟ್ಟೆಯಲ್ಲಿ ಸಣ್ಣ ಭತ್ತ ಕ್ವಿಂಟಲ್ 1ಕ್ಕೆ ₹3,200,  ರಾಗಿ ₹3,500, ಮುಸುಕಿನಜೋಳ ₹2300 ಹಾಗೂ ಉದ್ದು ಕ್ವಿಂಟಲ್‌ಗೆ ₹12, ಸಾವಿರ ಇದೆ.

‘ಉತ್ತಮ ದರ್ಜೆಯ ಭತ್ತ, ರಾಗಿಗೆ ಇನ್ನೂ ಅಧಿಕ ಧಾರಣೆ ಇದೆ. ಹಾಗಾಗಿ, ರೈತರು ಹೆಚ್ಚಿನ ಆದಾಯ ತಂದುಕೊಡುವ ಬೆಳೆಗಳನ್ನು ಬೆಳೆಯುವತ್ತ ಒಲವು ತೋರಿದ್ದಾರೆ. ಬರದ ನಂತರ ಬಹುತೇಕರು ಉಳುಮೆ ಮಾಡಿಲ್ಲ. ಕೆರೆ, ಕಾಲುವೆ ಮತ್ತು ಡ್ಯಾಂ ನೀರು ಸೌಲಭ್ಯ ಇರುವವರು ಭತ್ತ ಬೆಳೆದಿದ್ದರು. ಈಗ ಆರೇಳು ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದ್ದು, ಕೊಳವೆ ಬಾವಿ ಇರುವವರು ನಾಟಿಗೆ ಮುಂದಾಗಿದ್ದಾರೆ’ ಎಂದು ಬೇಸಾಯಗಾರ ಮಾಂಬಳ್ಳಿ ಮಹೇಶ್ ತಿಳಿಸಿದರು. 

‘ಈ ಬಾರಿ ಕೃಷಿ ಇಲಾಖೆ ಯಾವುದೇ ಬಿತ್ತನೆ ಬೀಜ ವಿತರಿಸಿಲ್ಲ. ಮಾಂಬಳ್ಳಿ ವಲಯದ ರೈತರು ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ಸುಧಾರಿತ ತಳಿಗಳನ್ನು ಬಿತ್ತನೆಗೆ ಬಳಸಿದ್ದಾರೆ. ತಾಲ್ಲೂಕಿನಲ್ಲಿ 1,166 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಭತ್ತ 200 ಹೆಕ್ಟೇರ್, ರಾಗಿ 150, ಮೆಕ್ಕೆಜೋಳ 200 ಹಾಗೂ ಉದ್ದು 50 ಹೆಕ್ಟೇರ್‌ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 617 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಾವರಿ, ಕೊಳವೆ ಬಾವಿ ಅವಲಂಬನೆ ಯಳಂದೂರು, ಕೊಳ್ಳೇಗಾಲದಲ್ಲಿ ನೀರಾವರಿ ಪ್ರದೇಶ ಹೆಚ್ಚು  ಸಣ್ಣಭತ್ತ, ರಾಗಿ, ಮುಸುಕಿನ ಜೋಳ ಬಿತ್ತನೆ
ಜಿಲ್ಲೆಯಲ್ಲಿ 1368 ಹೆಕ್ಟೇರ್‌ ಬಿತ್ತನೆ
ಚಾಮರಾಜನಗರ: ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲೂ ಬೇಸಿಗೆ ಬಿತ್ತನೆ ಕಾರ್ಯ ನಡೆಯುತ್ತಿದೆ. ಜಿಲ್ಲೆಯಾದ್ಯಂತ 3391 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು ಇಲ್ಲಿವರೆಗೆ 1368 ‌ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.  ಚಾಮರಾಜನಗರ ತಾಲ್ಲೂಕಿನಲ್ಲಿ 97 ಹೆಕ್ಟೇರ್‌ (ಗುರಿ 655 ಹೆಕ್ಟೇರ್‌) ಕೊಳ್ಳೇಗಾಲದಲ್ಲಿ 391 ಹೆಕ್ಟೇರ್‌ (1050) ಹನೂರಿನಲ್ಲಿ 263 ಹೆಕ್ಟೇರ್‌ (310) ಪ್ರದೇಶದಲ್ಲಿ ರೈತರು ವ್ಯವಸಾಯ ಮಾಡಿದ್ದಾರೆ. ಗುಂಡ್ಲುಪೇಟೆಯಲ್ಲಿ 60 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು ಅಲ್ಲಿ ಬೇಸಿಗೆ ಕೃಷಿ ಚಟುವಟಿಕೆ ಇನ್ನಷ್ಟೇ ಆರಂಭವಾಗಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT