ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ಬಸ್‌, ಬೈಕ್‌ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ಮೈಸೂರು–ಚಾಮರಾಜನಗರ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ
Last Updated 25 ನವೆಂಬರ್ 2021, 16:17 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಸಮೀಪದ ಮರಿಯಾಲ ರೈಲ್ವೆ ಮೇಲ್ಸೇತುವೆ ಮೇಲೆ ಗುರುವಾರ ಸಂಜೆ ಬೈಕ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚೆನ್ನಿಪುರ ಮೋಳೆ ಗ್ರಾಮದ ಅಶೋಕ (26), ಹೆಗ್ಗೊಠಾರ ಗ್ರಾಮದ ಶಾಂತಮಲ್ಲಪ್ಪ (55), ಅನಿತಾ (45) ದಂಪತಿ ಮೃತಪಟ್ಟವರು.

ಸಂಜೆ 6.15ಕ್ಕೆ ಘಟನೆ ನಡೆದಿದೆ. ಅಶೋಕ, ಶಾಂತಮಲ್ಲಪ್ಪ ಹಾಗೂ ಅನಿತಾ ಅವರು ಬೈಕ್‌ನಲ್ಲಿ ನಗರದಿಂದ ಹೆಗ್ಗೊಠಾರ ಗ್ರಾಮಕ್ಕೆ ತೆರಳುತ್ತಿದ್ದರು. ಅಶೋಕ ಅವರು ಬೈಕ್‌ ಚಲಾಯಿಸುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್‌ ಮೈಸೂರಿನಿಂದ ನಗರಕ್ಕೆ ಬರುತ್ತಿತ್ತು. ಮರಿಯಾಲದ ರೈಲ್ವೆ ಮೇಲ್ಸೇತುವೆ ಮೇಲೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬೈಕ್‌ನಿಂದ ಬಿದ್ದ ಮೂವರಿಗೂ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಶಾಂತಮಲ್ಲಪ್ಪ ಹಾಗೂ ಅನಿತಾ ಅವರು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಬಂದಿದ್ದರು. ಚೆನ್ನಿಪುರದ ಮೋಳೆಯ ಅಶೋಕ ಅವರಿಗೆ ಈ ದಂಪತಿ ಹೇಗೆ ಪರಿಚಯ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಅಶೋಕ ಅವರು ಬೈಕ್‌ನಲ್ಲಿ ಇಬ್ಬರನ್ನೂ ಹೆಗ್ಗೊಠಾರಕ್ಕೆ ಬಿಡಲು ಕರೆದುಕೊಂಡು ಹೋಗುತ್ತಿದ್ದ ಸಾಧ್ಯತೆ ಇದೆ’ ಎಂದು ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್‌ಸ್ಪೆಕ್ಟರ್ ಮಹೇಶ್, ಸಂಚಾರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ನಂದೀಶ್ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆಎಸ್‌ಆರ್‌ಟಿಸಿ ಚಾಲಕ ಮಂಜುನಾಥ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬುಧವಾರ ಸಂಜೆ ಇದೇ ಹೆದ್ದಾರಿಯ ಬದನಗುಪ್ಪೆ ಬಳಿ, ಕಾರು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT