ಶುಕ್ರವಾರ, ಡಿಸೆಂಬರ್ 3, 2021
26 °C
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಬಂಡೀಪುರದ ಶ್ವಾನ ರಾಣಾ

ಮದುಮಲೆ: ಮನುಷ್ಯರ ಬಲಿ ಪಡೆದ ಹುಲಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದ ಮದುಮಲೆ ಹಾಗೂ ಪಂದಲೂರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ, ನಾಲ್ಕು ಮಂದಿ ಮತ್ತು 30ಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 

ಸೆರೆ ಹಿಡಿದಿರುವ ಹುಲಿಯನ್ನು ಚಿಕಿತ್ಸೆಗಾಗಿ ಮೈಸೂರಿಗೆ ತೆಗೆದುಕೊಂಡು ಹೋಗಲಾಗಿದೆ. 21 ದಿನ ಸತತ ಪ್ರಯತ್ನದ ಬಳಿಕವೂ ಹುಲಿ ಸೆರೆಗೆ ಸಿಗದಿದ್ದುದರಿಂದ, ವ್ಯಾಘ್ರನ ಜಾಡು ಪತ್ತೆ ಹಚ್ಚಲು ತಮಿಳುನಾಡಿನ ಅರಣ್ಯ ಅಧಿಕಾರಿಗಳು ಬಂಡೀಪುರದ ಶ್ವಾನ ರಾಣಾನ ನೆರವು ಕೋರಿದ್ದರು. ಇಲ್ಲಿನ ಅಧಿಕಾರಿಗಳು ರಾಣಾನನ್ನು ಅಲ್ಲಿಗೆ ಕಳುಹಿಸಿಕೊಟ್ಟಿದ್ದರು. ಅದು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. 

ಮದುಮಲೆ ಅರಣ್ಯದ ಮಸಿನಗುಡಿ ವ್ಯಾಪ್ತಿಯ ದಟ್ಟ ಕಾಡು ಕೂಟ್ರುಪಾರೈ ಪ್ರದೇಶದಲ್ಲಿ ಶುಕ್ರವಾರ ಹುಲಿ ಕಂಡು ಬಂದಿದೆ. ತಕ್ಷಣ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಸಿಬ್ಬಂದಿ ಅರಿವಳಿಕೆ ಚುಚ್ಚುಮದ್ದು ಹೊಡೆದು, ಹುಲಿಯನ್ನು ಸೆರೆ ಹಿಡಿದ್ದಾರೆ. ಗಂಡು ಹುಲಿಯಾಗಿದ್ದು, ಆರು ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. 

ಹುಲಿಯು ಮಸಿನಗುಡಿ ಭಾಗದಲ್ಲಿ ಶುಕ್ರವಾರ ಇರುವುದನ್ನು ಗಮನಿಸಿದ್ದ ಸಿಬ್ಬಂದಿ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಎರಡು ಆನೆಗಳ ಸಹಾಯದಿಂದ ಕಾರ್ಯಚರಣೆ ಆರಂಭಿಸಲಾಗಿತ್ತು. 

ಹುಲಿಯ ಉಪಟಳದಿಂದ ಬೇಸತ್ತಿದ್ದ ಸ್ಥಳೀಯರು ಅದನ್ನು ಸೆರೆ ಹಿಡಿಯಬೇಕು ಎಂದು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.  

ಹುಲಿಗೆ ಟಿ-23 ನಾಮಕರಣ ಎಂದು ಮಾಡಲಾಗಿತ್ತು. ಹುಲಿ ಮೂಗಿನ ಬಳಿ ಗಾಯದ ಗುರುತು ಇದೆ. ಈ ಹಿಂದೆ ಎರಡು ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಿದ್ದರೂ, ಸೆರೆಯಾಗಿರಲಿಲ್ಲ. ಕೂಟ್ರು ಪಾರೆ ಬಳಿ ಮೂರನೇ ಯತ್ನದಲ್ಲಿ ಹುಲಿ ಸೆರೆ ಹಿಡಿಯಲು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 

‘ಹುಲಿಯನ್ನು ಜೀವಂತವಾಗಿ ಸೆರೆ ಹಿಡಿದಿರುವುದರಲ್ಲಿ ಸಿಬ್ಬಂದಿ ಶ್ರಮ ಇದೆ. ಹುಲಿಗಳ ಚಲನವಲನ ಹೆಚ್ಚಾಗಿ ರಾತ್ರಿ ಸಮಯದಲ್ಲಿ ಇರುತ್ತದೆ. ಆದರೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮಾತ್ರ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಮದುಮಲೆ ಅರಣ್ಯ ಸಂರಕ್ಷಣಾಧಿಕಾರಿ ಕುಮಾರಗುರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು