ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಜ್ವರ: ಮೂಲೆಹೊಳೆಯಲ್ಲಿ ಕಟ್ಟೆಚ್ಚರ

ಗಡಿ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ನಿಯೋಜನೆ, ಕೇರಳದಿಂದ ಬರುವ ವಾಹನಗಳ ಪರಿಶೀಲನೆ
Last Updated 12 ಮೇ 2022, 15:15 IST
ಅಕ್ಷರ ಗಾತ್ರ

ಚಾಮರಾಜನಗರ: ಕೇರಳದಲ್ಲಿ ಮಕ್ಕಳಲ್ಲಿ ಟೊಮೆಟೊ ಜ್ವರ (ಫ್ಲೂ) ಪ್ರಕರಣಗಳು ಕಂಡು ಬಂದಿರುವುದರಿಂದ ಜಿಲ್ಲೆಯ ಕೇರಳದ ಗಡಿಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ, ಐದು ವರ್ಷಕ್ಕಿಂತ ಕೆಳಗಿನ 80ಕ್ಕೂ ಹೆಚ್ಚು ಮಕ್ಕಳಲ್ಲಿ ಅಪರೂಪದ ಈ ಕಾಯಿಲೆ ಕಾಣಿಸಿಕೊಂಡಿದೆ. ವೈರಲ್‌ ಜ್ವರವಾಗಿರುವ ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

‘ಮಕ್ಕಳ ದೇಹದಲ್ಲಿ ಕೆಂಪು ಗುಳ್ಳೆಗಳು ಅಥವಾ ದದ್ದುಗಳು ಕಂಡು ಬರುತ್ತವೆ. ಇವು ಟೊಮೆಟೊದ ಬಣ್ಣವನ್ನೇ ಹೋಲುವುದರಿಂದ ಇದನ್ನು ಟೊಮೆಟೊ ಜ್ವರ ಎಂದು ಕರೆಯಲಾಗಿದೆ. ಈ ಜ್ವರಕ್ಕೆ ತುತ್ತಾದವರಲ್ಲಿ ಮೈ ಕೈನೋವು ಸೇರಿದಂತೆ ಜ್ವರದ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಎಚ್ಚರಿಕೆ ಅಗತ್ಯ. ರೋಗ ಲಕ್ಷಣವನ್ನು ನೋಡಿ ಚಿಕಿತ್ಸೆ ನೀಡಲಾಗುತ್ತದೆ‘ ಎಂದು ಹೇಳುತ್ತಾರೆ ವೈದ್ಯರು.

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಕೇರಳದೊಂದಿಗೆ ಗಡಿ ಹಂಚಿಕೊಂಡಿದೆ. ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆಯು ಎಲ್ಲ ಗಡಿ ಜಿಲ್ಲೆಗಳಿಗೆ ಸೂಚನೆ ನೀಡಿದೆ. ಇದರಂತೆ ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ಸಿಬ್ಬಂದಿಯನ್ನು ನಿಯೋಜಿಸಿದೆ.

‘ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಶುಶ್ರೂಷಕ ಸಿಬ್ಬಂದಿ ಹಾಗೂ ಇಲಾಖೆಯ ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇರಳದಿಂದ ಬರುವ ಎಲ್ಲ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾಯಿಲೆಯು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮಾತ್ರ ಕಂಡು ಬರುವುದರಿಂದ, ವಾಹನಗಳಲ್ಲಿ ಮಕ್ಕಳಿದ್ದರೆ ಅವರ ಆರೋಗ್ಯ ತಪಾಸಣೆ ಮಾಡಲಾಗುವುದು. ಟೊಮೆಟೊ ಜ್ವರದ ರೋಗ ಲಕ್ಷಣ ಕಂಡು ಬಂದರೆ, ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗುಂಡ್ಲುಪೇಟೆ ತಾಲ್ಲೂಕು ತಮಿಳುನಾಡಿನೊಂದಿಗೂ ಸಂಪರ್ಕ ಹೊಂದಿದ್ದು, ಊಟಿ ರಸ್ತೆಯಲ್ಲಿ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ ಇದೆ. ಆದರೆ, ಅಲ್ಲಿ ಸದ್ಯಕ್ಕೆ ತಪಾಸಣೆ ನಡೆಸಲಾಗುತ್ತಿಲ್ಲ. ಮೂಲೆಹೊಳೆ ನೇರವಾಗಿ ಕೇರಳ ಗಡಿ ಭಾಗ ವಾಗಿರುವುದರಿಂದ ಅಲ್ಲಿಗೆ ಒತ್ತು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗಡಿ ಭಾಗದ ಮಕ್ಕಳ ಆರೋ‌ಗ್ಯ ತಪಾಸಣೆ

‘ಜಿಲ್ಲೆಯಲ್ಲಿ ಐದು ವರ್ಷ‌ ವಯಸ್ಸಿಗಿಂತ ಕೆಳಗಿನ 67 ಸಾವಿರ ಮಕ್ಕಳಿದ್ದಾರೆ. ಕೇರಳದ ಗಡಿಭಾಗದ ಗ್ರಾಮಗಳಲ್ಲಿರುವ ಮಕ್ಕಳ ಆರೋಗ್ಯಕ್ಕೆ ಗಮನ ಹರಿಸಿದ್ದೇವೆ. ಮನೆ ಮನೆಗೆ ಭೇಟಿ ನೀಡಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆರೋಗ್ಯ ವಿಚಾರಿಸುವಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ. ಟೊಮೆಟೊ ಜ್ವರದ ರೋಗ ಲಕ್ಷಣ ಕಂಡು ಬಂದರೆ ಗಮನಕ್ಕೆ ತರುವಂತೆಯೂ ಸೂಚನೆ ನೀಡಲಾಗಿದೆ. ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಯಾರೊಬ್ಬರಲ್ಲೂ ರೋಗ ಲಕ್ಷಣ ಕಂಡು ಬಂದಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಅವರು ಮಾಹಿತಿ ನೀಡಿದರು.

---

ಈ ಕಾಯಿಲೆಗೂ, ಕೋವಿಡ್‌ಗೂ ಸಂಬಂಧ ಇಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ
ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT