ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ವರ್ಷದ ಕೊನೆಯ ದಿನ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

Published 1 ಜನವರಿ 2024, 4:18 IST
Last Updated 1 ಜನವರಿ 2024, 4:18 IST
ಅಕ್ಷರ ಗಾತ್ರ

ಚಾಮರಾಜನಗರ/ಹನೂರು/ಮಹದೇಶ್ವರ ಬೆಟ್ಟ: 2023ನೇ ಇಸವಿಯ ಕೊನೆಯ ದಿನವಾದ ಭಾನುವಾರ ಜಿಲ್ಲೆಯ ಪ್ರವಾಸಿತಾಣಗಳಲ್ಲಿ, ದೇವಾಲಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದವು. 

ಭಾನುವಾರ ರಜಾ ದಿನವೂ ಆಗಿದ್ದರಿಂದ ಪ್ರವಾಸಿಗರು ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟರು. ಹೊಸ ವರ್ಷದ ಮೊದಲ ದಿನವಾದ ಸೋಮವಾರ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಆರ್‌ಟಿಯ ಕೆ.ಗುಡಿ, ಮಹದೇಶ್ವರ ಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಹೊಗೆನಕಲ್‌ ಜಲಪಾತ ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚಿನ ಜನ ಸಂದಣಿ ಕಂಡು ಬಂತು. 

ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ದೂರದ ಊರುಗಳಿಂದ ಭಕ್ತರು ಬರಲು ಆರಂಭಿಸಿದರು. ರಾತ್ರಿ ಹೊತ್ತಿಗೆ ಬೆಟ್ಟದ ತುಂಬೆಲ್ಲ ಭಕ್ತರೇ ಕಂಡು ಬಂದರು. ಇಂಗ್ಲಿಷ್‌ ಕ್ಯಾಲೆಂಡರ್‌ ವರ್ಷದ ಕೊನೆಯ ದಿನ ರಾತ್ರಿ ನಡೆದ ಚಿನ್ನದ ರಥೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. 

ಕರ್ನಾಟಕ ರಾಜ್ಯವಲ್ಲದೆ ತಮಿಳುನಾಡಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಮಹದೇಶ್ವರ ಸ್ವಾಮಿಯ ದರ್ಶನ ಪಡೆದು ಹುಲಿವಾಹನ, ರುದ್ರಾಕ್ಷಿಮಂಟಪ, ಬಸವ ವಾಹನ, ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡರು. 

ಪ್ರಾಧಿಕಾರದ ಹಾಗೂ ಇತರ ಖಾಸಗಿ ವಸತಿಗೃಹಗಳು ಭರ್ತಿಯಾಗಿದ್ದು, ಸಾವಿರಾರು ಭಕ್ತರು ದೇವಾಲಯದ ಆವರಣ, ಬೆಟ್ಟ ವ್ಯಾಪ್ತಿಯಲ್ಲಿ ತಂಗಿದ್ದಾರೆ.

ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದ್ದುದರಿಂದ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯದ ವ್ಯವಸ್ಥೆ, ನಿರಂತರ ಅನ್ನ ದಾಸೋಹ, ನೆರಳಿನ ವ್ಯವಸ್ಥೆ, ಹೆಚ್ಚುವರಿ ಸರದಿ ಸಾಲಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಬಿಗಿ ಬಂದೋಬಸ್ತ್

ದೇವಾಲಯದ ಸುತ್ತ ಮುತ್ತ ಯಾವುದೇ ರೀತಿಯಾದ ಅಹಿತಕರ ಘಟನೆಗಳು ಜರುಗದ ಹಾಗೆ ಪೋಲೀಸ್ ಬಂದೋಬಸ್ತ್‌ ವ್ಯವಸ್ಥೆಯ ಜೊತೆಗೆ ಕೊಳ್ಳೇಗಾಲ ಹಾಗೂ ತಮಿಳುನಾಡಿಗೆ ತೆರಳುವ ರಸ್ತೆಯಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಿ ಮದ್ಯ ಬಾಟಲಿಗಳಿವೆಯೇ ಎಂದು ಪರಿಶೀಲಿಸಿದರು. 

ಹನೂರು ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಅತಿಥಿ ಗೃಹಗಳನ್ನು ಬಿಟ್ಟು ಉಳಿದ ಪ್ರವಾಸಿ ತಾಣಗಳಿಗೆ ಜನರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಗೋಪಿನಾಥಂನಲ್ಲಿ ಜಂಗಲ್ ಲಾಡ್ಜ್ ರೆಸಾರ್ಟ್‌ನಲ್ಲಿ ಎಂದಿನಂತೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.

ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಭಕ್ತರು ಬಳಿಕ ಹೊಗೇನಕಲ್  ಜಲಪಾತಕ್ಕೂ ಭೇಟಿ ನೀಡಿದರು. ಕೆಲವರು ಗೋಪಿನಾಥಂನಲ್ಲಿರುವ ಮಿಸ್ಟ್ರಿ ಟ್ರಯಲ್‌ ಕ್ಯಾಂಪ್‌ನಲ್ಲಿ ವಾಸ್ತವ್ಯ ಹೂಡಿದರು. 

ಒಡೆಯರ್‌ಪಾಳ್ಯದ ಟಿಬೆಟನ್ನರ ನಿರಾಶ್ರಿತರ ಶಿಬಿರ, ಗುಂಡಾಲ್ ಹಾಗೂ ಉಡುತೊರೆ ಜಲಾಶಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬೇಟಿ ನೀಡಿದ್ದರು.

ಜಿಲ್ಲೆಯ ಮತ್ತೊಂದು ಪ್ರಸಿದ್ಧ ಯಾತ್ರಸ್ಥಳ ಬಿಳಿಗಿರಿರಂಗನಬೆಟ್ಟದಲ್ಲಿ ಭಾನುವಾರ ಹೆಚ್ಚು ಜನ ದಟ್ಟಣೆ ಇರಲಿಲ್ಲ. ಸಾಮಾನ್ಯ ದಿನಕ್ಕಿಂತ ಹೆಚ್ಚು ಪ್ರವಾಸಿಗರಿಗರಿದ್ದರು. ವರ್ಷದ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಲಿದ್ದಾರೆ ಎಂದು ದೇವಾಲಯದ ಅರ್ಚಕರು ತಿಳಿಸಿದರು. 

ಚಾಮರಾಜನಗರ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಭಾನುವಾರ ಸಫಾರಿಗೆ ಹೆಚ್ಚಿನ ಪ್ರವಾಸಿಗರು ಬಂದಿದ್ದರು. ಸೋಮವಾರ ಇನ್ನಷ್ಟು ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. 

ಪ್ರವಾಸಿಗರಿಗೆ ಸಫಾರಿಯ ಖುಷಿ

ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮತ್ತು ಬಂಡೀಪುರಕ್ಕೆ ಭಾನುವಾರ ಹೆಚ್ಚಿನ ಪ್ರವಾಸಿಗರು ಬಂದಿದ್ದರು. ಹಿಮವದ್ ಗೋಪಾಲಸ್ವಾಮಿ ದೇವಾಲಯಕ್ಕೆ ತೆರಳಲು ಬೆಳಗಿನಿಂದಲೇ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಬಂದಿದ್ದರಿಂದ ಅರಣ್ಯ ಇಲಾಖೆ ಚೆಕ್ ಪೋಸ್ಟ್‌ನಿಂದ ಹಂಗಳ ಹೊಸಹಳ್ಳಿ ಕಡೆಗೆ  ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು. ಕೆಎಸ್‌ಆರ್‌ಟಿಸಿಯು ಹೆಚ್ಚುವರಿ ಬಸ್ ಸೇವೆ ಕಲ್ಪಿಸಿತು.  ಸಫಾರಿಯಲ್ಲೂ ಜನ: ವಾರಾಂತ್ಯದ ರಜೆ ಮತ್ತು ಹೊಸ ವರ್ಷಾಚರಣೆಗೆ ಬಂಡೀಪುರ ಮತ್ತು ಸುತ್ತಲಿನ ರೆಸಾರ್ಟ್‍ಗಳಲ್ಲಿ ತಂಗಿದ್ದ ಪ್ರವಾಸಿಗರು ಬೆಳಗ್ಗೆ ಮತ್ತು ಸಂಜೆ ಸಫಾರಿಗೆ ತೆರಳಿ ಸಂಭ್ರಮಿಸಿದರು.  ಊಟಿ ಕಡೆಗೆ ಹೆಚ್ಚು ವಾಹನಗಳು ಸಂಚರಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವೂ ಆಯಿತು.

ಹನೂರು ತಾಲ್ಲೂಕಿನ ಹೊಗೇನಕಲ್‌ ಜಲಪಾತದ ವೀಕ್ಷಣೆಯಲ್ಲಿ ತೊಡಗಿರುವ ಪ್ರವಾಸಿಗರು
ಹನೂರು ತಾಲ್ಲೂಕಿನ ಹೊಗೇನಕಲ್‌ ಜಲಪಾತದ ವೀಕ್ಷಣೆಯಲ್ಲಿ ತೊಡಗಿರುವ ಪ್ರವಾಸಿಗರು
ಬಿಳಿಗಿರಿರಂಗನಬೆಟ್ಟದಲ್ಲಿ ಭಾನುವಾರ ಭಕ್ತರ ಸಂಖ್ಯೆ ಕಡಿಮೆ ಇತ್ತು
ಬಿಳಿಗಿರಿರಂಗನಬೆಟ್ಟದಲ್ಲಿ ಭಾನುವಾರ ಭಕ್ತರ ಸಂಖ್ಯೆ ಕಡಿಮೆ ಇತ್ತು
ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಲು ಬಸ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು
ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಲು ಬಸ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT