ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿಯಲ್ಲಿ ಕುಸಿದ ನೀರಿನ ಮಟ್ಟ: ನದಿ ತೀರದ ಗ್ರಾಮಗಳ ಜನರ ಆತಂಕ

ಕೊಳವೆ ಬಾವಿ ಇದ್ದವರಿಂದ ಮಾತ್ರ ವ್ಯವಸಾಯ
ಅವಿನ್ ಪ್ರಕಾಶ್ ವಿ.
Published 5 ಫೆಬ್ರುವರಿ 2024, 7:50 IST
Last Updated 5 ಫೆಬ್ರುವರಿ 2024, 7:50 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಹರಿಯುವ  ಕಾವೇರಿ ನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ನದಿ ತೀರದ ಗ್ರಾಮಸ್ಥರು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಮಳೆ ಕೊರತೆ ಕಾಡಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನದಿಯಲ್ಲಿನ ಬಂಡೆಗಳು ಕಾಣುತ್ತಿವೆ. ನದಿಯ ಹಿನ್ನೀರಿನ ಭಾಗಗಳಂತೂ ಬರಡು ಭೂಮಿಯಂತೆ ಗೋಚರಿಸುತ್ತಿವೆ.  

ಮುಳ್ಳೂರು, ಹಳೆ ಹಂಪಾಪುರ, ಹಳೆ ಅಣಗಳ್ಳಿ, ದಾಸನಪುರ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯ, ಶಿವನಸಮುದ್ರ, ಸೇರಿದಂತೆ ಕೊಳ್ಳೇಗಾಲ ಸುತ್ತಮುತ್ತಲ ನದಿ ತೀರದ ಗ್ರಾಮಗಳಲ್ಲಿ ವ್ಯವಸಾಯಕ್ಕೆ ಕಾವೇರಿ ನೀರೇ ಆಧಾರವಾಗಿದ್ದು, ಈ ವರ್ಷ ಬೇಸಿಗೆಯಲ್ಲಿ ನೀರಿನ ಕೊರತೆ ಕಾಡುವ ಭಯ ರೈತರನ್ನು ಕಾಡುತ್ತಿದೆ. ಹೀಗಾಗಿ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.  

ಕೆಲವು ರೈತರು ಈಗಾಗಲೇ ವ್ಯವಸಾಯ ಮಾಡಿದ್ದಾರೆ. ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲೂ ಇದ್ದಾರೆ. ಬೆಳೆಯ ಕೊನೆಯವರೆಗೂ ನೀರು ಸಿಗುವುದೇ ಎಂಬ ಆತಂಕ ಅವರನ್ನು ಕಾಡುತ್ತಿದೆ. 

ಕೊಳವೆ ಬಾವಿ ಇರುವವರು ಕೃಷಿ ಮಾಡಿದ್ದಾರೆ. ನದಿ ನೀರನ್ನು ಅವಲಂಬಿಸಿದವರು ವ್ಯವಸಾಯ ಮಾಡುತ್ತಿಲ್ಲ. 

‘ಮುಂಗಾರು ಪೂರ್ವ ಮಳೆ ಬಾರದೇ ಇದ್ದರೆ ಈ ಬಾರಿ ಬೇಸಿಗೆಯಲ್ಲಿ ತುಂಬಾ ಕಷ್ಟವಾಗಲಿದೆ. ಜನರು ನೀರನ್ನು ಹಿತಮಿತವಾಗಿ ಬಳಸಬೇಕು. ಕಾವೇರಿ ಸಮೀಪದಲ್ಲಿ ನಮ್ಮ ಜಮೀನು ಇದೆ. ನೀರಿನ ಕೊರತೆ ಎದುರಾಗುವ ಸಾಧ್ಯತೆ ಇರುವ  ನಾನು ಈ ಬಾರಿ ವ್ಯವಸಾಯ ಮಾಡಿಲ್ಲ’ ಎಂದು ಮುಳ್ಳೂರು ಬಸವಣ್ಣ ಅವರು ಹೇಳಿದರು.

ಮಳೆಯಾಗದ ಕಾರಣ ಈ ಬಾರಿ ದನ ಕರುಗಳಿಗೂ ನೀರಿನ ಕೊರತೆ ಎದುರಾಗಬಹುದು ಎಂಬುದು ರೈತರ ಅಭಿಪ್ರಾಯ. 

‘ಏಳು ವರ್ಷಗಳ ಹಿಂದೆ ಬರಗಾಲ ಬಂದಿತ್ತು. ಆಗಲೂ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿತ್ತು. ನದಿ ತೀರದ ಗ್ರಾಮಗಳಿಗೂ ತೊಂದರೆಯಾಗಿತ್ತು. ಅದೇ ಪರಿಸ್ಥಿತಿ ಈ ವರ್ಷವೂ ಆಗುತ್ತದೆಯೇ ಎಂಬ ಆತಂಕ ನನ್ನದು. ನದಿಯಲ್ಲಿ ನೀರು ಇನ್ನಷ್ಟು ಕಡಿಮೆಯಾದರೆ ದನ ಕರುಗಳಿಗೆ ನೀರಿನ ಕೊರತೆ ಕಾಡಬಹುದು’ ಎಂದು ಸರಗೂರು ಗ್ರಾಮದ ರೈತ ಮುರುಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.  

ಕೆರೆಗಳಲ್ಲೂ ನೀರಿಲ್ಲ...
ತಾಲ್ಲೂಕಿನ ಕೆಲವು ಕೆರೆಗಳಲ್ಲಿ ಮಾತ್ರ ನೀರಿದೆ. ಬಹುತೇಕ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ಗ್ರಾಮೀಣ ಪ್ರದೇಶದ ಜನರು ಕೆರೆಗಳನ್ನು ನಂಬಿ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಾಗಿದ್ದರಿಂದ ಕೆರೆ ಕಟ್ಟೆಗಳು ತುಂಬಿಲ್ಲ. ಹೀಗಾಗಿ ರೈತರು ಕೃಷಿ ಮಾಡಿಲ್ಲ.  ‘ಕೆರೆಗಳು ಬಣಗುಡುತಿರುವುದನ್ನು ನೋಡುತ್ತಿದ್ದರೆ ಈಗಾಗಲೇ ರೈತರು ಹಾಗೂ ಗ್ರಾಮಸ್ಥರು ಕಂಗಾಲಾಗುತ್ತಿದ್ದಾರೆ. ಹೂಳು ತೆಗೆದು ಕೆರೆಗಳನ್ನು  ಸ್ವಚ್ಛ ಮಾಡಿದ್ದರೆ ನೀರಿನ ಮಟ್ಟ ಕುಸಿಯುತ್ತಿರಲಿಲ್ಲ. ಯಾವ ಕೆರೆಯ ಹೂಳನ್ನೂ ತೆಗೆದಿಲ್ಲ. ಸ್ವಚ್ಛವೂ ಮಾಡಿಲ್ಲ. ಕಾವೇರಿ ನೀರಾವರಿ ನಿಗಮದವರು ಮುಂದಿನ ದಿನಗಳಲ್ಲಿ ಕೆರೆಗಳನ್ನು ಸ್ವಚ್ಛ ಮಾಡಿ ಅಭಿವೃದ್ಧಿ ಮಾಡಬೇಕು’ ಎಂದು ರೈತ ಮುಖಂಡ ದಶರಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT