ಬುಧವಾರ, ಸೆಪ್ಟೆಂಬರ್ 29, 2021
20 °C
ಮಧ್ಯಾಹ್ನ 2ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ

ಚಾಮರಾಜನಗರ: ವಾರಾಂತ್ಯ ಕರ್ಫ್ಯೂ, ಗಡಿ ಜಿಲ್ಲೆ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೇರಳ ಮತ್ತು ತಮಿಳುನಾಡುಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿದ್ದ ವಾರಾಂತ್ಯ ಕರ್ಫ್ಯೂಗೆ ಜನಸ್ಪಂದನೆ ವ್ಯಕ್ತವಾಯಿತು. 

ಚಾಮರಾಜನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಾಲು, ಮಾಂಸ, ಹಣ್ಣು, ತರಕಾರಿ, ದಿನಸಿ ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆಯರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಚಿನ್ನಾಭರಣ, ಮೊಬೈಲ್‌, ಜವಳಿ ಎಲೆಕ್ಟ್ರಾನಿಕ್ಸ್‌ ಅಂಗಡಿಗಳು ಮುಚ್ಚಿದ್ದವು. ಹಾರ್ಡ್‌ವೇರ್‌, ಸಿಮೆಂಟ್‌ ಕಬ್ಬಿಣ ಅಂಗಡಿಗಳು ಕೆಲವು ತೆರೆದಿದ್ದರೆ, ಇನ್ನೂ ಕೆಲವು ಮುಚ್ಚಿದ್ದವು. 

ಆಸ್ಪತ್ರೆ, ಕ್ಲಿನಿಕ್‌, ಔಷಧದ ಅಂಗಡಿಗಳು ದಿನಪೂರ್ತಿ ತೆರೆದಿದ್ದವು. ಬೇಕರಿ, ಹೋಟೆಲ್‌, ರೆಸ್ಟೋರೆಂಟ್‌ಗಳು ಇಡೀ ದಿನ ತೆರೆದಿದ್ದರೂ, ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿತ್ತು. ಮದ್ಯದ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ವಹಿವಾಟು ನಡೆಸಿದವು. ಮದ್ಯಪ್ರಿಯರು ಮಳಿಗೆಗೆ ಬಂದು ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದರು. ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು.  

ಜನ ಸಂಚಾರ ಕಡಿಮೆ: ಬೆಳಿಗ್ಗೆಯಿಂದಲೇ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ತೆರೆದಿದ್ದುದರಿಂದ ಜನರ ಹಾಗೂ ವಾಹನಗಳ ಓಡಾಟ ಎಂದಿನಂತೆ ಇರಲಿಲ್ಲ. ಮಧ್ಯಾಹ್ನ ಎರಡು ಗಂಟೆಯ ನಂತರ ಎಲ್ಲ ಅಂಗಡಿಗಳು ಮುಚ್ಚಿದ್ದರಿಂದ ಅಂಗಡಿ ಬೀದಿಗಳು ಬಿಕೊ ಎನ್ನುತ್ತಿದ್ದವು. ಮಧ್ಯಾಹ್ನದ ಬಳಿಕ ಜನ ಸಂಚಾರ ಮತ್ತಷ್ಟು ವಿರಳವಾಯಿತು. 

ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮಧ್ಯಾಹ್ನದ ವರೆಗೂ ಆಟೊಗಳು ಕಂಡು ಬಂದವು. ಆ ಬಳಿಕ ಅವುಗಳ ಸಂಚರವೂ ವಿರಳವಾಯಿತು. 

ನಗರಸಭೆಯಿಂದ ಜಾಗೃತಿ: ನಗರಸಭೆಯ ಅಧಿಕಾರಿಗಳು ಬೆಳಿಗ್ಗೆಯಿಂದಲೇ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋವಿಡ್‌ ಕರ್ಫ್ಯೂ ನಿಯಮಗಳ ಬಗ್ಗೆ ಧ್ವನಿವರ್ಧಕದಲ್ಲಿ ಹೇಳುತ್ತಿದ್ದರು. ಅಗತ್ಯವಸ್ತುಗಳ ಮಾರಾಟ ಮಳಿಗೆಗಳನ್ನು ಬಿಟ್ಟು ಬೇರೆ ಮಳಿಗೆಗಳು ತೆರೆದಿದ್ದರೆ ಅವುಗಳನ್ನು ಮುಚ್ಚಿಸಿದರು. ಮಧ್ಯಾಹ್ನ 2 ಗಂಟೆಗೆ ಎಲ್ಲ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸಿದರು. 

ಮಧ್ಯಾಹ್ನ 2 ಗಂಟೆಯಾಗುತ್ತಲೇ ಪೊಲೀಸರು ವಾಹನದಲ್ಲಿ ಇಡೀ ನಗರವನ್ನು ಸುತ್ತು ಹಾಕಿ, ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದರು. 

ದಂಡ: ವಾಹನಗಳಲ್ಲಿ ಓಡಾಡುತ್ತಿದ್ದವರನ್ನು ತಡೆದ ಪೊಲೀಸರು ವಿಚಾರಿಸುತ್ತಿದ್ದರು. ಮಾಸ್ಕ್‌ ಧರಿಸದೆ, ಸುರಕ್ಷಿತ ಅಂತರ ಕಾಪಾಡದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಸ್ವಯಂ ಸೇವಕರು ದಂಡ ವಿಧಿಸಿದರು. 

ಕರ್ಫ್ಯೂ ನಿಯಮ ಜಾರಿ: ಡಿಸಿ ಪರಿಶೀಲನೆ

ಈ ಮಧ್ಯೆ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶನಿವಾರ ಅಧಿಕಾರಿಗಳೊಂದಿಗೆ ಜಿಲ್ಲೆಯ ವಿವಿಧ ಕಡೆಗಳಿಗೆ ಭೇಟಿ ನೀಡಿ ಕರ್ಫ್ಯೂ ಜಾರಿ ಸಂಬಂಧ ಪರಿಶೀಲನೆ ನಡೆಸಿದರು. 

ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ಭಾಗಗಳಿಗೆ ಭೇಟಿ ನೀಡಿ ಪಾಲಿಸಲಾಗುತ್ತಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದರು. 

ಕೊಳ್ಳೇಗಾಲದಲ್ಲಿ ನಿಯಮ ಕೋವಿಡ್‌ ಕರ್ಫ್ಯೂ ಸರಿಯಾಗಿ ಪಾಲನೆಯಾಗದೇ ಇರುವುದಕ್ಕೆ ಜಿಲ್ಲಾಧಿಕಾರಿ ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಡಾ.ವಿಷ್ಣುವರ್ಧನ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ‘ಇಲ್ಲಿ ಯಾವ ಕೋವಿಡ್ ನಿಯಮಾವಳಿಯೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಜನರು ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ ಮತ್ತು ಬೇರೆ ಅಂಗಡಿಗಳು ತೆರೆದಿದೆ. ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ಆಯಾ ತಾಲ್ಲೂಕುಗಳ ತಹಶೀಲ್ದಾರರು, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಆಡಳಿತದ ಅಧಿಕಾರಿಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.