ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಮರಹಳ್ಳಿ: ಗೃಹಲಕ್ಷ್ಮಿ ಯೋಜನೆ ಹಣ ನೀಡುವಂತೆ ಒತ್ತಾಯಿಸಿ ಮಹಿಳೆಯರ ಪ್ರತಿಭಟನೆ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮುಂದೆ ಮಹಿಳೆಯರ ಪ್ರತಿಭಟನೆ
Published 11 ಮಾರ್ಚ್ 2024, 13:27 IST
Last Updated 11 ಮಾರ್ಚ್ 2024, 13:27 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಖಾತೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿ ಮಹಿಳೆಯರು ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಸರಗೂರು ಮೋಳೆ ಗ್ರಾಮದ ಮಹಿಳೆಯರು ಕಚೇರಿ ಮುಂಭಾಗ ಹಾಜರಾಗಿ ಇದುವರೆಗೂ ಒಂದು ಕಂತು ಹಣ ಬಿಡುಗಡೆಯಾಗಿಲ್ಲ ಎಂದು ಗೃಹಲಕ್ಷ್ಮಿ ಯೋಜನೆ ಆದೇಶ ಪತ್ರ ಪ್ರದರ್ಶಿಸಿ ಪ್ರತಿಭಟಿಸಿದರು.

ಸರ್ಕಾರ ಮಹಿಳೆಯರಿಗೆ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ 4 ತಿಂಗಳು ಕಳೆದಿದೆ. ಇಲ್ಲಿಯವರೆಗೆ ಖಾತೆಗೆ ಒಂದು ಕಂತಿನ ಹಣವು ಕೂಡ ಜಮಾವಾಗಿಲ್ಲ. ಈಗಾಗಲೇ ಬೇರೆ ಫಲಾನುಭವಿಗಳಿಗೆ 6 ಕಂತಿನ ಹಣ ಖಾತೆಗೆ ಜಮಾವಾಗಿದೆ. ಈ ಸಂಬಂಧ ಗ್ರಾಮ ಪಂಚಾಯಿತಿ ಕಚೇರಿ, ಜಿಲ್ಲಾಡಳಿತ ಭವನಕ್ಕೆ ಪ್ರತಿನಿತ್ಯ ಮಹಿಳೆಯರು ಕೂಲಿ ಕೆಲಸ ಬಿಟ್ಟು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಿಶು ಅಭಿವೃದ್ಧಿ ಇಲಾಖೆ ಕಚೇರಿಗೆ ತೆರಳಿ ಮಾಹಿತಿ ಪಡೆದುಕೊಳ್ಳಿ ಎಂದು ಅಧಿಕಾರಿಗಳು ಹೇಳುತ್ತಾರೆ. ಇಲ್ಲಿ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮದಲ್ಲಿರುವ ಎಲ್ಲ ಕುಟುಂಬಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಸ್ಥಿತಿಯಾಗಿದ್ದು, ಸುಮಾರು 80 ಮಂದಿಗೆ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಣ ಬಿಡುಗಡೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಭವನ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಿಶು ಅಭಿವೃದ್ದಿ ಅಧಿಕಾರಿ ಜಯಶೀಲ ಮಾತನಾಡಿ, ‘ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಈಗಾಗಲೇ 6 ಕಂತಿನ ಹಣ ಜಮಾವಾಗಿದೆ. ಗ್ರಾಮದಲ್ಲಿರುವ ಕೆಲವು ಕುಟುಂಬಗಳು ರೇಷನ್ ಕಾರ್ಡ್‌ನಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆಯಾಗಿದೆ. ಸದಸ್ಯದಲ್ಲೇ ತಮ್ಮ ಖಾತೆಗಳಿಗೆ ಹಣ ಜಮಾವಾಗುತ್ತದೆ ಎಂದು ಭರವಸೆ ನೀಡಿದರು.

ಮಹದೇವಮ್ಮ, ಸಿದ್ದಮ್ಮ, ಭಾಗ್ಯ, ಮಾರಮ್ಮ, ನಿಂಗರಾಜಮ್ಮ, ಮಧು, ದೊಡ್ಡಮ್ಮ, ಚಿಕ್ಕಮಣಿ, ಚನ್ನಬಸಮ್ಮ, ರೇವಮ್ಮ, ಲಕ್ಷ್ಮಮ್ಮ, ರೇಖಾ, ಮಮತಾ, ರತ್ನಮ್ಮ, ಸಾಕಮ್ಮ, ರೇವಮ್ಮ, ಪ್ರೇಮಾ, ಶೇಷಮ್ಮ, ಚಿಕ್ಕತಾಯಮ್ಮ, ಸಣ್ಣಮ್ಮ, ಜಯಲಕ್ಷ್ಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT